ಸೂರತ್: ಮಧ್ಯಪ್ರಾಚ್ಯ ಸಂಘರ್ಷ ಮತ್ತು ಎಲ್‌ಪಿಜಿ ಬಿಕ್ಕಟ್ಟು ಭಾರತದಲ್ಲಿ ಉದ್ಯಮಗಳ ಮೇಲೆ ಪರಿಣಾಮ ಬೀರಿದೆ. ಕೈಗಾರಿಕೆಗಳು ಅಸ್ತವ್ಯಸ್ತಗೊಂಡಿದೆ. ಅನೇಕ ಕಾರ್ಮಿಕರು ಉದ್ಯೋಗವಿಲ್ಲದೆ ತಮ್ಮ ತವರು ರಾಜ್ಯಗಳಿಗೆ ಮರಳುತ್ತಿದ್ದಾರೆ.
ರವಿವಾರ ಸೂರತ್‌ನ ಉಧ್ನಾ ರೈಲು ನಿಲ್ದಾಣದಲ್ಲಿ ಸಾವಿರಾರು ವಲಸೆ ಕಾರ್ಮಿಕರು ಜಮಾಯಿಸಿದ್ದರು.
ಅವರು ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಹೋಗುವ ರೈಲುಗಳನ್ನು ಹತ್ತಲು ಪ್ರಯತ್ನಿಸಿದಾಗ ನೂಕುನುಗ್ಗಲು ಉಂಟಾಗಿ ಪರಿಸ್ಥಿತಿ ನಿಯಂತ್ರಣ ತಪ್ಪಿದೆ. ಜನರನ್ನು ಚದುರಿಸಲು ಪೊಲೀಸರು ಈ ವೇಳೆ ಲಾಠೀ ಚಾರ್ಜ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ ಪೊಲೀಸರು ಲಾಠೀ ಚಾರ್ಜ್ ಮಾಡುತ್ತಿರುವುದು, ನೂಕು ನುಗ್ಗಲಿನ ಮಧ್ಯೆ ಪ್ರಯಾಣಿಕರು ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿರುವುದು ಕಂಡು ಬಂದಿದೆ.
ರವಿವಾರ ಬೆಳಿಗ್ಗೆ 11:30 ರ ಸುಮಾರಿಗೆ ಕೆಲವು ಪ್ರಯಾಣಿಕರು ಬಿಹಾರಕ್ಕೆ ತೆರಳುವ ರೈಲು ಹತ್ತಲು ಯತ್ನಿಸಿದಾಗ ಈ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ರೈಲ್ವೆ ಅಧಿಕಾರಿ ಅನುಭವ್ ಸಕ್ಸೇನಾ, ಮಧ್ಯಾಹ್ನದ ವೇಳೆಗೆ ಆರು ರೈಲುಗಳಲ್ಲಿ ಸುಮಾರು 21,000 ಕ್ಕೂ ಹೆಚ್ಚು ಪ್ರಯಾಣಿಕರು ಉಧ್ನಾದಿಂದ ತೆರಳಿದ್ದಾರೆ. ಹೆಚ್ಚಿನ ಜನಸಂದಣಿಯನ್ನು ನಿಯಂತ್ರಿಸುವುದು ಕಷ್ಟಕರವಾಗಿತ್ತು. ಪದೇ ಪದೇ ಎಚ್ಚರಿಕೆಗಳ ಹೊರತಾಗಿಯೂ, ಪರಿಸ್ಥಿತಿ ಹದಗೆಟ್ಟಿತ್ತು. ಅಧಿಕಾರಿಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ.

