ನವದೆಹಲಿ: ಬಂಗಾಳದ ಹಿರಿಯ ಬಿಜೆಪಿ ಮುಖಂಡ ದಿನೇಶ್ ತ್ರಿವೇದಿ ಅವರನ್ನು ಬಾಂಗ್ಲಾದೇಶಕ್ಕೆ ಮುಂದಿನ ಹೈಕಮಿಷನರ್ ಆಗಿ ನೇಮಕ ಮಾಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಮುಂದಿಟ್ಟಿದೆ. ನೆರೆಯ ರಾಷ್ಟ್ರಕ್ಕೆ ರಾಜಕೀಯ ಮುಖಂಡರೊಬ್ಬರನ್ನು ಉನ್ನತ ರಾಜತಾಂತ್ರಿಕರನ್ನಾಗಿ ನೇಮಕ ಮಾಡುವ ಈ ಪ್ರಸ್ತಾವಕ್ಕೆ ಬಾಂಗ್ಲಾದೇಶದ ಅನುಮೋದನೆಗಾಗಿ ಕಾಯಲಾಗುತ್ತಿದೆ.
ದಿನೇಶ್ ತ್ರಿವೇದಿ (75) ಅವರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹಲವು ಬಾರಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದು, ರೈಲ್ವೆ ಖಾತೆಯನ್ನು ನಿಭಾಯಿಸಿದ ಅನುಭವವನ್ನೂ ಹೊಂದಿದ್ದಾರೆ. ಆರೋಗ್ಯ ಖಾತೆಯ ರಾಜ್ಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ತ್ರಿವೇದಿ 2021ರಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು. ಉಭಯ ದೇಶಗಳ ನಡುವಿನ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿರುವ ನಡುವೆಯೇ ಈ ನೇಮಕಾತಿ ಪ್ರಸ್ತಾವ ಕುತೂಹಲಕ್ಕೆ ಕಾರಣವಾಗಿದೆ. ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪದತ್ಯಾಗದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹದಗಟ್ಟಿತ್ತು. ಗಡಿ ವಿವಾದ, ವ್ಯಾಪಾರ ನಿರ್ಬಂಧಗಳ ಕಾರಣದಿಂದ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು.
ಆದರೆ ನೂತನ ಬಿಎನ್ ಪಿ ಸರ್ಕಾರ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದು, ಭಾರತದಲ್ಲಿ ಹಸೀನಾ ಇರುವಿಕೆ ಮುಂದುವರಿದಿರುವುದು, ಭಾರತೀಯ ಭದ್ರತಾ ಪಡೆಗಳು ಗಡಿಯಲ್ಲಿ ಹತ್ಯೆ ಮಾಡುತ್ತಿವೆ ಎಂಬ ಬಾಂಗ್ಲಾದೇಶದ ಆರೋಪ ಸೇರಿದಂತೆ ಪ್ರಮುಖ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಮುಂದುವರಿದಿದೆ. ಭಾರತಕ್ಕೆ ಭೇಟಿ ನೀಡಿದ್ದ ಬಾಂಗ್ಲಾ ವಿದೇಶಾಂಗ ಸಚಿವ ಖಲೀಲುರ್ರಹಮಾನ್ ಅವರು ಹಸೀನಾ ಪ್ರಕರಣವನ್ನು ಉಲ್ಲೇಖಿಸಿದ್ದರು.
ಭಾರತ ಇದೇ ಮೊದಲ ಬಾರಿಗೆ ರಾಜಕೀಯ ನೇತಾರರೊಬ್ಬರನ್ನು ರಾಜತಾಂತ್ರಿಕ ಅಧಿಕಾರಿಯಾಗಿ ಅಥವಾ ಹೈಕಮಿಷನರ್ ಆಗಿ ನೇಮಕ ಮಾಡಲು ಹೊರಟಿರುವುದು ಮಹತ್ವದ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ.

