ನವದೆಹಲಿ: ಅಗಲಿದ ಗಣ್ಯರ ನೆನಪಿಗೆ ಒಂದು ನಿಮಿಷ ಮೌನ ಆಚರಿಸಿದ ಬಳಿಕ ರಾಜ್ಯಸಭೆ ಕಲಾಪವನ್ನು ನಾಳೆಗೆ (ಶುಕ್ರವಾರ) ಮುಂದೂಡಲಾಯಿತು.
ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ಮಸೂದೆ ಮಂಡನೆಯ ಮಧ್ಯೆ ಕಲಾಪವನ್ನು ಮುಂದೂಡಲಾಯಿತು.
ಸದನ ಸಮಾವೇಶಗೊಳ್ಳುತ್ತಿದ್ದಂತೆ, ನೂತನವಾಗಿ ಆಯ್ಕೆಯಾದ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.
ನಿಧನರಾದ ಗಾಯಕಿ ಆಶಾ ಭೋಸ್ಲೆ, ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ ಮೊಹ್ಸಿನಾ ಕಿದ್ವಾಯಿ ಅವರ ನೆನಪಿಗಾಗಿ ಸದನವು ಒಂದು ನಿಮಿಷ ಮೌನಾಚರಣೆ ಮಾಡಿತು.
ಸಭಾಪತಿ ಸಿ.ಪಿ.ರಾಧಾಕೃಷ್ಣನ್ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಇತ್ತೀಚಿನ ಪ್ರಗತಿಯನ್ನು ಶ್ಲಾಘಿಸಿದರು. ತಮಿಳುನಾಡಿನ ಕಲ್ಪಕಂನಲ್ಲಿ ಪರಮಾಣ ವಿದ್ಯುತ್ ಸ್ಥಾವರದ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಮೊದಲ ಬಾರಿಗೆ ಕಾರ್ಯಾಚರಣೆ ಸ್ಥಿತಿ ತಲುಪಿದ ಐತಿಹಾಸಿಕ ಸಾಧನೆಯನ್ನು ಉಲ್ಲೇಖಿಸಿದರು.
ಭಾರತವು ಅಧಿಕೃತವಾಗಿ ಮೂರು ಹಂತಗಳ ಪರಮಾಣು ಶಕ್ತಿ ಕಾರ್ಯಕ್ರಮದಲ್ಲಿ ಎರಡನೇ ಹಂತ ಪ್ರವೇಶಿಸಿದೆ ಎಂದು ಅವರು ತಿಳಿಸಿದರು.
ಇದಾದ ನಂತರ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

