ನವದೆಹಲಿ: ಕ್ಷೇತ್ರ ಪುನರ್ ವಿಂಗಡಣೆ ವಿರುದ್ಧ ವಿರೋಧ ಪಕ್ಷಗಳು ಒಗ್ಗಟ್ಟಾಗಿವೆ ಎಂದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಹೇಳಿದರು. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
'ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಜಾರಿಗೆ ತರಲು ಹೊರಟಿರುವ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ನಮ್ಮ ವಿರೋಧವಿದೆ.
ಮಸೂದೆ ಹೆಸರಿನಲ್ಲಿ ಸಂಸತ್ತನ್ನು ಹೈಜಾಕ್ ಮಾಡಲು ವಿರೋಧ ಪಕ್ಷಗಳು ಬಿಡುವುದಿಲ್ಲ. ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ ಮತ್ತು ನಮ್ಮ ಪ್ರಜಾಪ್ರಭುತ್ವದ ಮೇಲಿನ ಈ ಕುಟಿಲ ದಾಳಿಯನ್ನು ಪೂರ್ಣ ಬಲದಿಂದ ಎದುರಿಸಲಿದ್ದೇವೆ' ಎಂದು ಬರೆದುಕೊಂಡಿದ್ದಾರೆ.
ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಇಂದು ಮಂಡಿಸಲಾಯಿತು.
ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ವಿರೋಧ ಪಕ್ಷಗಳು, ಐದು ರಾಜ್ಯಗಳ ಚುನಾವಣೆಯ ಹೊತ್ತಿನಲ್ಲಿ ತರಾತುರಿಯಲ್ಲಿ ಜಾರಿ ಮಾಡಲು ಹೊರಟಿರುವ ಸರ್ಕಾರದ ನಡೆಯನ್ನು ಪಶ್ನಿಸಿವೆ.
ಈ ಹಿಂದೆ 2027ರಲ್ಲಿ ನಡೆಯಲಿರುವ ಜನಗಣತಿ ಆಧಾರದಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಈಗ 2011ರ ಜನಗಣತಿಯ ದತ್ತಾಂಶದ ಮೇಲೆ ಪುನರ್ ವಿಂಗಡಣೆ ಮಾಡಲು ಹೊರಟಿದೆ. ಅದಕ್ಕಾಗಿ ಇಂದು ವಿಶೇಷ ಅಧಿವೇಶನ ಕರೆದಿದೆ.

