ಕಾಸರಗೋಡು: ಜಿಲ್ಲೆಯಲ್ಲಿ ಸಿದ್ಧಪಡಿಸಲಾಗಿದ್ದ ಮಹಿಳಾ ಮತಗಟ್ಟೆಗಳು ಮಹಿಳಾ ಸಬಲೀಕರಣಕ್ಕೆ ಉತ್ತಮ ಉದಾಹರಣೆಯಾಗಿ ಮೂಡಿಬಂತು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ತಲಾ ಒಂದು ಮತಗಟ್ಟೆಯನ್ನು ಮೀಸಲಿಡಲಾಗಿತ್ತು.
ಮಂಜೇಶ್ವರ ಕ್ಷೇತ್ರದಲ್ಲಿ ಕುಂಬಳೆ ಹೋಲಿ ಫ್ಯಾಮಿಲಿ ಅನುದಾನಿತ ಹಿರಿಯ ಶಾಲೆ, ಕಾಸರಗೋಡು ಕ್ಷೇತ್ರದಲ್ಲಿ ಸರ್ಕಾರಿ ಕಾಲೇಜು ಗಣಿತ ವಿಭಾಗ, ಉದುಮ ಕ್ಷೇತ್ರದಲ್ಲಿ ಕುಂಡಂಗುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಕಾಞಂಗಾಡ್ ಕ್ಷೇತ್ರದಲ್ಲಿ ಅಜಾನೂರು ಮಾಣಿಕೋತ್ ಕೆಎಕೆಎಚ್‍ಎಂ ಸರ್ಕಾರಿ ಫಿಶರೀಸ್ ಯುಪಿ ಶಾಲೆ ಹಾಗೂ ತ್ರಿಕರಿಪುರ ಕ್ಷೇತ್ರದಲ್ಲಿ ಪಿಲಿಕೋಡ್ ಸರ್ಕಾರಿ ಯುಪಿ ಶಾಲೆಯಲ್ಲಿ ಈ ಮಹಿಳಾ ಮತಗಟ್ಟೆ ಸಿದ್ಧಪಡಿಸಲಾಗಿತ್ತು. ಈ ಐದೂ ಮತಗಟ್ಟೆಗಳನ್ನು ಸಂಪೂರ್ಣವಾಗಿ ಮಹಿಳೆಯರೇ ನಿಯಂತ್ರಿಸಿರುವುದು ವಿಶೇಷತೆಯಾಗಿತ್ತು. ಭದ್ರತೆಯ ಉಸ್ತುವಾರಿ ವಹಿಸಿರುವವರಿಂದ ತೊಡಗಿ, ಪೋಲಿಂಗ್ ಅಧಿಕಾರಿ, ಪ್ರಿಸೈಡಿಂಗ್ ಅಧಿಕಾರಿ, ಪೆÇಲೀಸ್ ಸಿಬ್ಬಂದಿ ಸೇರಿದಂತೆ ಮತಗಟ್ಟೆ ಅಧಿಕಾರಿಗಳು, ಮತಗಟ್ಟೆ ಏಜೆಂಟರುಗಳಲ್ಲೀ ಬಹುತೇಕ ಮಂದಿ ಮಹಿಳೆಯರೇ ಕಾರ್ಯನಿರ್ವಹಿಸಿದರು. ಐದೂ ಮತಗಟ್ಟೆಗಳಲ್ಲಿನ ಮಹಿಳಾ ಅಧಿಕಾರಿಗಳು ಹೆಚ್ಚಿನ ವಿಶ್ವಾಸ ಮತ್ತು ಜವಾಬ್ದಾರಿಯಿಂದ ಮತದಾನದ ಕರ್ತವ್ಯ ನಿರ್ವಹಿಸಿದ್ದರು. ವೃದ್ಧರು, ಮಹಿಳೆಯರು ಮತ್ತು ಅಂಗವಿಕಲರಿಗಿರುವ ಸೌಲಭ್ಯಗಳೊಂದಿಗೆ ಮತಗಟ್ಟೆಗಳನ್ನು ಸಜ್ಜುಗಹೊಳಿಸಲಾಗಿತ್ತು.



