ಕಾಸರಗೋಡು: ಬೆಳಕು ಹುಡುಕುವ ಕೆಲಸ ಅಂತರಂಗದಲ್ಲಿ ಆಗಬೇಕು. ಭಾರತದ ಅಂತಃಸ್ಸತ್ವ ಆಧ್ಯಾತ್ಮಕ ಅಂತರಂಗದಲ್ಲಿದೆ. ಅದು ಎಲ್ಲರನ್ನೂ ಬೆಳಗಿಸುವ ಬೆಳಕಾಗಿದೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನದಲ್ಲಿ ತಿಳಿಸಿದರು.
ಕಾಸರಗೋಡು ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಬ್ರಹ್ಮಕಲಶೋತ್ಸವದ ತತ್ವಮಸಿ ವೇದಿಕೆಯಲ್ಲಿ ಭಾನುವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಯೋಗ ಭಂಗಿಯಲ್ಲಿರುವ ಶ್ರೀಅಯ್ಯಪ್ಪ ಸ್ವಾಮಿ ಬದುಕಿನ ಮೌಲ್ಯಗಳ ಪ್ರತೀಕ. ರಾಜನಾದವನು ಯೋಗಿಯಂತೆ ಬದುಕಬೇಕೆಂಬುದನ್ನು ಶ್ರೀಸ್ವಾಮಿ ಸೂಚ್ಯವಾಗಿ ತಿಳಿಸಿದ್ದಾನೆ. ಕಠಿಣ ವ್ರತಧಾರಿಗಳಾಗಿ ಅನುಷ್ಠಾನಗಳಿಂದ ಅಯ್ಯಪ್ಪ ಸ್ವಾಮಿಯ ಭಕ್ತಿ ಬದುಕನ್ನು ಪರಿಪಕ್ವಗೊಳಿಸುತ್ತದೆ ಎಂದವರು ತಿಳಿಸಿದರು.
ನಮ್ಮ ಸಮಸ್ಯೆಗಳಿಗೆಲ್ಲ ಉತ್ತರ ನಮ್ಮೊಳಗೇ ಇದೆ. ಅದಕ್ಕೆ ಆತ್ಮಾವಲೋಕನವೊಂದೇ ದಾರಿ. ಆಂತರ್ಯದಲ್ಲಿ ಅವಲೋಕನ ನಡೆಸಿದಾಗ ಮಾರ್ಗದರ್ಶಿ ಬೆಳಕು ಮೂಡುತ್ತದೆ. ಹಾಗೆಂದು ಸಮಸ್ಯೆಗಳಿಗೆ ತಲೆಕೆಡಿಸಬಾರದು. ಅದರಿಂದ ಅನುಭವ ಪ್ರಾಪ್ತಿಯಾಗುತ್ತದೆ ಎಂದರು. ಧರ್ಮದ ಅನುಷ್ಠಾನದಿಂದ ಜೀವನ ಅರ್ಥಪೂರ್ಣವಾಗಿ ಮೂಡಿಬರುತ್ತದೆ. ಸಂಬಂಧಗಳನ್ನು ಗಟ್ಟಿಗೊಳಿಸುವ ಮೂಲಕ ಸಾರ್ಥಕತೆ ಪಡೆಯಬಹುದು. ಅದು ಭಗವಂತನೊಂದಿಗೂ ಇರಬೇಕು ಎಂದರು.
ಬ್ರಹ್ಮಕಲಶೋತ್ಸವ ಕಾರ್ಯದರ್ಶಿ ಕೆ.ಎನ್.ಬಾಲಕೃಷ್ಣನ್ ಚೆನ್ನಿಕೆರೆ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಖ್ಯಾತ ದೈವನರ್ತಕ, ಚಿಂತಕ, ಸಂಶೋಧಕ ಡಾ.ರವೀಶ್ ಪಡುಮಲೆ ಮಾತನಾಡಿ, ಜಾತಿ, ಮತಗಳ ಭೇದಗಳಿಲ್ಲದ ಶಬರಿಮಲೆ ಸ್ವಾಮಿಯ ಸಂದೇಶ ಮನುಕುಲದ ಗತಿಯ ದ್ಯೋತಕ. ಪ್ರಭು ಶ್ರೀರಾಮಚಂದ್ರನ ಸಂದೇಶವೂ ಅದೇ ಆಗಿದೆ. ಸನಾತನ ನಂಬಿಕೆಯ ರಕ್ಷಣೆಗೆ ನಾವು ಒಂದಾಗಬೇಕು. ಆ ನಿಟ್ಟಿನಲ್ಲಿ ಅಯ್ಯಪ್ಪನಲ್ಲಿ ನಾವು ಐಕ್ಯರಾಗಬೇಕು. ನಮ್ಮ ಸಂಸ್ಕøತಿ-ಪರಂಪರೆಯನ್ನು ಉಳಿಸಿ ಬೆಳೆಸಿದಾಗ ಮುಂದಿನ ತಲೆಮಾರಿಗೆ ತಲುಪಿಸಲು ಸಾಧ್ಯ. ವಾರಕ್ಕೊಮ್ಮೆ ಆಯಾ ಕ್ಷೇತ್ರದಲ್ಲಿ ಹಿಂದೂಗಳೆಲ್ಲ ಒಗ್ಗಟ್ಟಾಗಿ ಸೇರುವ ಪರಿಪಾಠ ಬೆಳೆದಾಗ ಬ್ರಹ್ಮಕಲಶ ಸಾರ್ಥಕವಾಗುತ್ತದೆ ಎಂದರು. ಆಧುನಿಕ ತಂತ್ರಜ್ಞಾನದ ಇಂದಿನ ಯುಗದಲ್ಲಿ ಧಾರ್ಮಿಕ, ದೈವ ದೇವರ ಬಗೆಗಿನ ಆಸಕ್ತಿ ಕಡಿಮೆಯಾಗಬಾರದು. ಯುವ ಸಮಾಜವನ್ನು ಧಾರ್ಮಿಕ, ಆಧ್ಯಾತ್ಮಿಕ ಶಕ್ತಿಯ ಆಸ್ತಿಗಳಾಗಿ ಬೆಳೆಸಿದಾಗ ನಾಡು ಬೆಳಗುತ್ತದೆ ಎಂದರು.
ಆರ್.ಎಸ್.ಎಸ್. ಜಿಲ್ಲಾ ಸಂಘ ಚಾಲಕ್ ಪ್ರಭಾಕರನ್ ಮಾಸ್ತರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ನಗರಸಭೆ ಕೌನ್ಸಿಲರ್ ರಾಜೇಶ್ ಜಿ.ಅಮೈ, ಉದ್ಯಮಿ ವಿನೋದ್ ರಾಜ್ ಶೆಟ್ಟಿ, ಉದ್ಯಮಿ ಶ್ರೀಪತಿ ರಾವ್ ಕೋಟೆಕಣಿ, ಬ್ರಹ್ಮಕಲಶೋತ್ಸವ ಸಮಿತಿ ರಕ್ಷಾಧಿಕಾರಿ ಡಾ,ವೆಂಕಟಗಿರಿ, ಡಾ.ಸುರೇಶ್ ಬಾಬು, ಉದ್ಯಮಿ ವಿನೋದ್ ಕುಮಾರ್ ಕೆ., ಗೋಪಾಲ ಗುರುಸ್ವಾಮಿ, ನುಳ್ಳಿಪ್ಪಾಡಿ ಕ್ಷೇತ್ರದ ಗುರುಸ್ವಾಮಿ ನಾರಾಯಣ ಎ., ಕೃಷ್ಣ ಪ್ರಸಾದ್ ಕೋಟೆಕಣಿ, ಧನೇಶ್ ಪಡಿಬಾಗಿಲು ಉಪಸ್ಥಿತರಿದ್ದರು.
ವಿವಿಧ ವಲಯಗಳ ಸಾಧಕರಾದ ಅಚ್ಯುತ ಮೀಪುಗುರಿ, ಉಮೇಶ್ ಕೋಟೆಕಣಿ, ದಾಮೋದರ ಚೆನ್ನಿಕೆರೆ, ಮಹಾಲಿಂಗ ಕೋಟೆಕಣಿ, ಸುಶೀಲಾ ಚೆನ್ನೆಕೆರೆ ಅವರನ್ನು ಈ ಸಂದರ್ಭ ಗೌರವಿಸಿ ಅಭಿನಂದಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ರಾಮನ್ ಚೆನ್ನಿಕೆರೆ ಸ್ವಾಗತಿಸಿ, ಕೋಶಾಧಿಕಾರಿ ಕಿಶೋರ್ ಕುಮಾರ್ ವಂದಿಸಿದರು. ಗುರುಪ್ರಸಾದ್ ಕೋಟೆಕಣಿ ಹಾಗೂ ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.
ಇಂದಿನ ಕಾರ್ಯಕ್ರಮಗಳು:
ಏ.20 ರಂದು ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮ, ವಿವಿಧ ತಂಡಗಳಿಂದ ಭಜನೆ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, ಸಂಜೆ 5ಕ್ಕೆ ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ, 5.30ಕ್ಕೆ ಸಭಾ ಕಾರ್ಯಕ್ರಮ, ಕೊಂಡೆವೂರು ಸ್ವಾಮೀಜಿಯವರಿಂದ ಆಶೀರ್ವಚನ, ರಾತ್ರಿ 7.30ಕ್ಕೆ ನಾಗದಿಗಂಬರಿ ಮಲೆಯಾಳ ನಾಟಕ ಪ್ರದರ್ಶನಗೊಳ್ಳಲಿದೆ.

.jpg)
.jpg)
