ನವದೆಹಲಿ: ಹೊಸ ಶೈಕ್ಷಣಿಕ ವರ್ಷದಲ್ಲಿ (2026-27) ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕದ ಕೊರತೆ ಎದುರಾಗದಂತೆ ಎಚ್ಚರವಹಿಸಬೇಕು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ (ಎನ್‌ಸಿಇಆರ್‌ಟಿ) ಅಧಿಕಾರಿಗಳಿಗೆ ಮಂಗಳವಾರ ನಿರ್ದೇಶಿಸಿದರು.
ಪಠ್ಯ ಪುಸ್ತಕದ ತೀವ್ರ ಕೊರತೆ ಎದುರಾಗಬಹುದು ಎಂಬ ಸೂಚನೆಗಳು ದೊರೆತ ಬೆನ್ನಲ್ಲೇ ಸಚಿವರು ಎನ್‌ಸಿಇಆರ್‌ಟಿ ಅಧಿಕಾರಿಗಳು ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.
ಸದ್ಯ ಪುಸ್ತಕಗಳ ದಾಸ್ತಾನು ಎಷ್ಟಿದೆ ಎಂಬುದರ ಮಾಹಿತಿ ಪಡೆದ ಸಚಿವರು, ಪುಸ್ತಕಗಳ ಮುದ್ರಣವನ್ನು ಹೆಚ್ಚಿಸಿ, ಅವುಗಳು ತ್ವರಿತವಾಗಿ ಲಭ್ಯವಾಗುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

