ಮಂಗಳೂರು: 'ಈಗಿನದು ನಿದ್ದೆಹೋದ ಭಾರತವಲ್ಲ; ಎಚ್ಚೆತ್ತ ಭಾರತ. ಜಗತ್ತಿನಲ್ಲೇ ಅತಿ ಹೆಚ್ಚು ಸುಶಿಕ್ಷಿತ ಕಾರ್ಮಿಕ ಶಕ್ತಿ ನಮ್ಮಲ್ಲಿದೆ. ವಸಾಹತುಶಾಹಿ ಮನಸ್ಥಿತಿ ನಮ್ಮ ಚೈತನ್ಯವನ್ನೇ ಘಾಸಿಗೊಳಿಸಿತ್ತು. ವಸಾಹತು ಶಾಹಿ ಮನಸ್ಥಿತಿಯಿಂದ ನಾವೀಗ ಹೊರಬಂದಿದ್ದೇವೆ. ಸ್ವಾತಂತ್ರ್ಯದ ಶತಮಾನೋತ್ಸವದತ್ತ ಸಮೀಪಿಸುವಾಗ ಯಾವ ವೇಗದಲ್ಲಿ ಸಾಗಬೇಕೆಂಬ ಸ್ಪಷ್ಟ ಅರಿವು ನಮಗಿದೆ' ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯವು ದೇರಳಕಟ್ಟೆಯಲ್ಲಿ ಮಂಗಳವಾರ ಏರ್ಪಡಿಸಿದ್ದ 'ನಿಟ್ಟೆ ವಿನಯ ಹೆಗ್ಡೆ ಉಪನ್ಯಾಸ- 2026' ಕಾರ್ಯಕ್ರಮದಲ್ಲಿ ಅವರು 'ವಿಕಸಿತ ಭಾರತ- 2047 ರ ದೂರದೃಷ್ಟಿ' ಕುರಿತು ಮಾತನಾಡಿದರು.
'ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ನಮ್ಮದು. ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಈ ಹಣಕಾಸು ವರ್ಷದಲ್ಲಿ ಶೇ 6.5ರ ದರದಲ್ಲಿ ಅಭಿವೃದ್ಧಿ ಹೊಂದಲಿದೆ ಎಂದು ಐಎಂಎಫ್ ಅಂದಾಜಿಸಿದೆ. ಜಗತ್ತಿನ ಅಗ್ರ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ಗುರುತಿಸಿಕೊಳ್ಳುವುದು, ಸ್ವಚ್ಚ ನೀರು, ಉತ್ತಮ ಗುಣಮಟ್ಟದ ಶಿಕ್ಷಣ, ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಅದರ ಗುರಿ. ವಿಕಸಿತ ಭಾರತವೆಂದರೆ, ಪ್ರಾಯೋಗಿಕ, ಸ್ಪರ್ಧಾತ್ಮಕ, ನ್ಯಾಯೋಚಿತ ಹಾಗೂ ಹಸಿರು ಭಾರತ. ಇದನ್ನು ಸಾಧಿಸಲು ಸಂವಿಧಾನವೇ ದಾರಿದೀಪ. ಮಹಿಳೆಯರೇ ಅದರ ಚಾಲಕ ಶಕ್ತಿ. ಯುವ ಭಾರತೀಯರಲ್ಲಿ, ಅದರಲ್ಲೂ ಯುವತಿಯರಲ್ಲಿ ಮಹತ್ವಾಕಾಂಕ್ಷೆ ಹೆಚ್ಚಿದೆ. ಜಾಗತಿಕ ಪೈಪೋಟಿಯನ್ನು ಎದುರಿಸಿ ಯಶಸ್ಸು ಕಾಣಉವ ಹಂಬಲ ಅವರಲ್ಲಿದೆ. ಗುಣಮಟ್ಟದ ಶಿಕ್ಷಣ, ವಿಶ್ವದರ್ಜೆಯ ಆರೋಗ್ಯ ಸೇವೆ, ಅರ್ಥಪೂರ್ಣ ಉದ್ಯೋಗ, ಶುಭ್ರ ಪರಿಸರವನ್ನು ಅವರು ಬಯಸುತ್ತಾರೆ. ಇವೆಲ್ಲವೂ ವಿಕಸಿತದ ಭಾರತದ ಗುರಿಗಳೂ ಹೌದು' ಎಂದರು.
'ಕೃತಕ ಬುದ್ಧಿಮತ್ತೆ ಹಾಗೂ ತಂತ್ರಜ್ಞಾನಗಳು ಭಾರತೀಯರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಅಭಿವೃದ್ಧಿಪಡಿಸುವ ತಂತ್ರಜ್ಞಾನದ ನಮ್ಮದೇ ಪರಿಭಾಷೆಯದ್ದಾಗಿರಬೇಕು. ನಮ್ಮ ಸಮಾಜವನ್ನು ಅರ್ಥಮಾಡಿಕೊಳ್ಳುವಂತಿರಬೇಕು. ಜನರ ಹಕ್ಕುಗಳನ್ನು ಕಾಪಾಡುವಂತಿರಬೇಕು. ಹಸಿರು ಇಂಧನ, ಸಾರ್ವಜನಿಕ ಸಾರಿಗೆ, ನೀರಿನ ಭದ್ರತೆ, ಕಸ ನಿರ್ವಹಣೆ, ಹವಾಮಾನ ವೈಪರೀತ್ಯ ತಾಳಿಕೊಳ್ಳಬಲ್ಲ ಕೃಷಿ ಆದ್ಯತೆಯಾಗಬೇಕು.ನೀತಿ ನಿಯಮಗಳಿಂದಷ್ಟೇ ಅಭಿವೃದ್ದಿ ಸಾಧಿಸಲಾಗದು. ಜನರ ನಡವಳಿಕೆ, ಕಠಿಣ ಪರಿಶ್ರಮ ಹಾಗೂ ಏಕತೆ ದೇಶದ ಭವಿಷ್ಯವನ್ನು ನಿರ್ಧರಿಸಲಿವೆ' ಎಂದರು.
'ದಿ.ಎನ್.ವಿನಯ ಹೆಗ್ಡೆ ಅವರು ತಂದೆಯಿಂದ ಬಂದ ಸಂಪತ್ತನ್ನು ವೆಚ್ಚ ಮಾಡಿ ಆರಾಮವಾಗಿರಬಹುದಾಗಿತ್ತು. ಆದರೆ ಅವರು ಊರಿನಲ್ಲೇ ಉಳಿದು ದೇಶಕಟ್ಟುವ ಮಾದರಿಯನ್ನು ತೋರಿಸಿಕೊಟ್ಟರು. ಅವರ ಪಥದಲ್ಲಿ ಯುವಜನತೆ ಮುನ್ನಡೆಯಬೇಕು. ವಿಕಸಿತ ಭಾರತ ನಿರ್ಮಾಣಕ್ಕೆ ಅವರೂ ನಮಗೆ ಮಾದರಿ' ಎಂದರು.
ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿದರು.ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ನಿಟ್ಟೆ ವಿಶಾಲ್ ಹೆಗ್ಡೆ ಪ್ರಸ್ತಾವಿಕವಾಗಿ ಮಾತನಾಡಿದರು. ಎನ್.ವಿನಯ ಹೆಗ್ಡೆ ಅವರ ಕೊಡುಗೆಗಳನ್ನು ಸಹಕುಲಾಧಿಪತಿ ಡಾ.ಶಾಂತಾರಾಮ್ ಶೆಟ್ಟಿ ಸ್ಮರಿಸಿದರು. ಕುಲಪತಿ ಎಂ.ಎಸ್.ಮೂಡಿತ್ತಾಯ ಧನ‌್ಯವಾದ ಸಲ್ಲಿಸಿದರು.

