ಕುಂಬಳೆ: ಕಾವ್ಯ ಅತ್ಯಂತ ಪ್ರಭಾವಶಾಲಿ ಮಾಧ್ಯಮ. ಕನಿಷ್ಠ ಪದಗಳು, ರೂಪಕಗಳ ಮೂಲಕ ಪರಿಣಾಮಕಾರಿ ಸಂವಹನ ಇಲ್ಲಿ ಸಾಧ್ಯ. ಅತ್ಯುತ್ತಮ ಮಾನವೀಯ ರಚನೆಯಾಗಿ ಕವಿತೆಗಳು ಭಾವ ಜಗತ್ತು ಮತ್ತು ಚಿಂತನ ಜಗತ್ತಿನ ಹದವಾದ ಮಿಳಿತ ಸಾಹಿತ್ಯ ಯಶಸ್ವಿಯಾಗುತ್ತದೆ ಎಂದು ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ವಿ.ವಿ.ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಸದಾಶಿವ ಅನಂತಪುರ ಸಾಂಸ್ಕøತಿಕ ಪ್ರತಿಷ್ಠಾನ ಮತ್ತು ಪ್ರಕೃತಿ ಯುವ ತಂಡ ಸಹಯೋಗದಲ್ಲಿ ಅನಂತಪುರ ಕ್ಷೇತ್ರದ ಅನಂತಶ್ರೀ ಸಭಾ ಭವನದಲ್ಲಿ ಭಾನುವಾರ ಅಪರಾಹ್ನ ನಡೆದ ದಿ. ಸದಾಶಿವ ಅನಂತಪುರ ಪಂಚಮಸ್ಮೃತಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಸತ್ಯ ಶಂಕರ ಅನಂತಪುರ ಅವರ "ಬದುಕು-ಭಾವ-ಜೀವ" ಚೊಚ್ಚಲ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಇಂದು ವ್ಯಕ್ತಿ ಕೇಂದ್ರಿತ ಮೌಲ್ಯಗಳು ವಿಜ್ರಂಭಿಸುವ ಕಾಲ. ಮಾನವೀಯತೆ ಎತ್ತಿ ಹಿಡಿಯುವ ಪ್ರಯತ್ನಗಳು ಕಾವ್ಯದ ವಸ್ತುವಾಗಬೇಕು. ಮೌಲ್ಯಗಳ ಪರವಾಗಿ ನಡೆಯುವ ಜೀವ ಪರವಾದ ಪ್ರಯತ್ನಗಳು ಭವಿಷ್ಯದ ಕುರಿತು ನಮ್ಮಲ್ಲಿ ಭರವಸೆ ಮೂಡಿಸುತ್ತದೆ ಎಂದು ಅವರು ಹೇಳಿದರು.
ಭಾವ ಜಗತ್ತು ಮತ್ತು ವೈಚಾರಿಕತೆ ಎರಡೂ ಸಂತುಲಿತ ಪ್ರಮಾಣದಲ್ಲಿ ಇದ್ದಾಗ ಒಳ್ಳೆಯ ಜೀವನ ಸಾಧ್ಯವಾಗುತ್ತದೆ. ಸತ್ಯ ಶಂಕರ ಅವರ ಕವಿತೆಗಳು ಅವರ ಕುಟುಂಬದ ಮೂರು ತಲೆಮಾರುಗಳ ಜನರ ಬದುಕಿನಿಂದ ಪ್ರಭಾವಿತವಾಗಿವೆ ಎಂದು ಡಾ.ಕೆ.ಚಿನ್ನಪ್ಪ ಗೌಡ ಅಭಿಪ್ರಾಯಪಟ್ಟರು.
ಕವನ ಸಂಕಲನದ ಕವಿ ಸತ್ಯ ಶಂಕರ ಅನಂತಪುರ ತಮ್ಮ ಕಾವ್ಯ ಯಾನದ ಕುರಿತು ಮಾತನಾಡಿದರು.
ಹಿರಿಯ ಕವಿ ಶ್ರೀಕೃಷ್ಣಯ್ಯ ಅನಂತಪುರ ಅಧ್ಯಕ್ಷತೆ ವಹಿಸಿ, ವಿವಿಧ ಮಜಲುಗಳನ್ನು ದಾಟಿಬಂದ ಕನ್ನಡ ಕಾವ್ಯ ಪ್ರಪಂಚ ಎಲ್ಲಾ ಹಣೆಪಟ್ಟಿಗಳನ್ನು ಬಿಸುಟು ಬೋಳು ಹಣೆಯಲ್ಲಿ ಪಂಥಗಳನ್ನು ಮೀರಿ ಬೆಳೆದಿದೆ ಎಂದರು. ಬಂಧನ ರಹಿತ ಕವಿ ಸ್ವೇಚ್ಛೆಯಿಂದ ಅಂತರೊಂಗದ ಭಾವಗಳನ್ನು ಬಸೆದು ಅಕ್ಷರ ರೂಪಕ್ಕಿಳಿಸಬಲ್ಲ ಎಂದರು.
ಅನಂತಪುರ ಕ್ಷೇತ್ರ ಅರ್ಚಕ ವೇ. ಮೂ. ಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ ಶುಭಹಾರೈಸಿದರು. ಕೃತಿ ಪರಿಚಯಿಸಿದ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರು, ಲಯಬದ್ದತೆಯೊಂದಿಗೆ ಲಾಸ್ಯವಾಡುವ ಇಲ್ಲಿಯ ರಚನೆಗಳು ಭರವಸೆಗಳೊಂದಿಗೆ ಗಮನಾರ್ಹವಾಗಿದೆ. ಸಮಕಾಲೀನತೆಯನ್ನು ಸೃಜನಶೀಲತೆಗೆ ಒಗ್ಗಿಸಿಕೊಂಡ ಸತ್ಯಶಂಕರ ಅವರು ಗಡಿನಾಡಿನ ಸಂವೇದನಾಶೀಲ ಕವಿ ಎಂಬುದನ್ನು ತನ್ನ ರಚನೆಗಳ ಮೂಲಕ ಸಾಬೀತುಪಡಿಸಿದ್ದಾರೆ ಎಂದರು.
ಪದ್ಮಶ್ರೀ ಸತ್ಯನಾರಾಯಣ ಬೆಳೇರಿ, ಡಾ.ಟಿ.ಕೆ.ಯಶೋಧಾ, ಡಾ.ಬೇ.ಸಿ.ಗೋಪಾಲಕೃಷ್ಣ ಭಟ್, ಪ್ರಕೃತಿ ಯುವ ತಂಡ ಅಧ್ಯಕ್ಷ ಲೋಕಯ್ಯ ಸಿದ್ದಿಬೈಲು ಉಪಸ್ಥಿತರಿದ್ದರು. ಚೈತ್ರಾ ಸತ್ಯ ಶಂಕರ್ ಸ್ವಾಗತಿಸಿ, ಕೀರ್ತನಾ ಎನ್.ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯ ಕುಮಾರ್ ಅನಂತಪುರ ವಂದಿಸಿದರು. ಪತ್ರಕರ್ತ ಎಂ.ನಾ ಚಂಬಲ್ತಿಮಾರ್ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ಮೃದಂಗ ವಾದಕ ದಿ. ಸದಾಶಿವ ಅನಂತಪುರ ಪಂಚಮ ಸ್ಮೃತಿ ಪುರಸ್ಕಾರಕ್ಕೆ ಹಿರಿಯ ಚರ್ಮ ವಾದ್ಯ ತಯಾರಕ ಕೆ.ಸದಾನಂದ ರಾವ್ ಕೂಡ್ಲು ಅವರು ಆಯ್ಕೆಯಾಗಿದ್ದು, ಅನಾರೋಗ್ಯ ಕಾರಣಗಳಿಂದ ಸಮಾರಂಭದಲ್ಲಿ ಭಾಗವಹಿಸದ ಕೆ.ಸದಾನಂದ ರಾವ್ ಕೂಡ್ಲು ಅವರ ಮನೆಗೆ ತೆರಳಿ ಪುರಸ್ಕಾರ ಪ್ರದಾನ ಮಾಡುವ ಕುರಿತು ಸಂಘಟಕರು ಪ್ರಕಟಿಸಿದರು.

.jpg)
.jpg)
.jpg)


