ಪಟ್ನಾ: ಕೇಂದ್ರ ಸರ್ಕಾರವು ರಾಜ್ಯಗಳನ್ನು ತನ್ನ ಸಮಾನವಾಗಿ ಕಾಣಬೇಕೇ ಹೊರತು, ಅಧೀನರು ಎಂಬುದಾಗಿ ಅಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು ಶನಿವಾರ ಒತ್ತಾಯಿಸಿದರು.
ಪಟ್ನಾದ ಚಾಣಕ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಿದ ಅವರು, 'ರಾಜ್ಯ ಮತ್ತು ಕೇಂದ್ರದ ಸಂಬಂಧಗಳಲ್ಲಿ ಪಕ್ಷಭೇದಗಳನ್ನು ಬದಿಗಿಡಬೇಕು.
ಯಾವ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿದೆ ಮತ್ತು ಯಾವ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದೆ ಎಂಬುದರ ಆಧಾರದ ಮೇಲೆ ಆಡಳಿತ ಕಾರ್ಯಗಳು ಅವಲಂಬಿತವಾಗಿರಬಾರದು' ಎಂದು ಹೇಳಿದರು.
'ಒಕ್ಕೂಟ ವ್ಯವಸ್ಥೆ ಎಂದರೆ ಕೇವಲ ಸ್ವಾಯತ್ತತೆ ಅಲ್ಲ. ವಿಭಿನ್ನ ಅಧಿಕಾರ ವ್ಯವಸ್ಥೆಗಳು ಒಂದಕ್ಕೊಂದು ಪ್ರತಿಕೂಲವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಆಡಳಿತ ಎಂದರೆ ಏಕಪಕ್ಷೀಯ ನಿರ್ಧಾರಗಳಲ್ಲ, ಬದಲಾಗಿ ಮಾತುಕತೆ ಮತ್ತು ಸಮನ್ವಯವನ್ನು ಒಳಗೊಂಡಿರುತ್ತದೆ ಎಂಬುವುದನ್ನು ಇದು ಪ್ರತಿಬಿಂಬಿಸುತ್ತದೆ' ಎಂದರು.
'ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಸಮನ್ವಯದ ಅಗತ್ಯವಿದೆ. ಅಭಿವೃದ್ಧಿಯ ವಿಚಾರದಲ್ಲಿ ರಾಜ್ಯದ ಜನರು ವಂಚಿತರಾಗಬಾರದು. ನ್ಯಾಯಯುತವಾಗಿ ಸಮಾನತೆ ಇರಬೇಕು' ಎಂದು ಹೇಳಿದರು.
'ಪ್ರೌಢಿಮೆಯಿರುವ ಒಕ್ಕೂಟ ವ್ಯವಸ್ಥೆಯು ನ್ಯಾಯಾಲಯದ ಮೆಟ್ಟಿಲು ಏರುವುದಿಲ್ಲ. ಬದಲಾಗಿ ಮಾತುಕತೆ ಮತ್ತು ಮಧ್ಯಸ್ಥಿಕೆಗಾಗಿ ಪ್ರಯತ್ನಿಸುತ್ತದೆ. ರಾಜ್ಯಗಳು ಪರಸ್ಪರ ಅಥವಾ ಕೇಂದ್ರದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದು ಶಕ್ತಿಯ ಪ್ರತೀಕವಲ್ಲ. ಅದು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ' ಎಂದರು.

