HEALTH TIPS

ಗಡುವು ಹತ್ತಿರ; ಗುಡುಗಿನ ಅಬ್ಬರ

ದುಬೈ/ವಾಷಿಂಗ್ಟನ್: ಒಪ್ಪಂದ ಮಾಡಿಕೊಳ್ಳಲು ಇರಾನ್‌ಗೆ ನೀಡಿದ್ದ ಗಡುವು ಸಮೀಪಿಸುತ್ತಿದ್ದಂತೆಯೇ 'ಇರಾನ್‌ ನಾಗರಿಕತೆಯನ್ನೇ ವಿನಾಶ ಮಾಡುತ್ತೇವೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗುಡುಗಿದ್ದಾರೆ. ತೈಲ ಘಟಕಗಳಿರುವ ಇರಾನ್‌ನ ಖಾರ್ಗ್‌ ದ್ವೀಪದ ಮೇಲೆ ಅಮೆರಿಕ-ಇಸ್ರೇಲ್‌ ಪಡೆಗಳು ದಾಳಿ ನಡೆಸಿವೆ.

ಟೆಹರಾನ್‌ ಹೊರವಲಯದ ವಸತಿಪ್ರದೇಶಗಳನ್ನು ಗುರಿಯಾಗಿಸಿ ಅಮೆರಿಕ-ಇಸ್ರೇಲ್‌ ಪಡೆಗಳು ನಡೆಸಿದ ದಾಳಿಗಳಲ್ಲಿ 18 ಮಂದಿ ಮೃತಪಟ್ಟಿರುವುದಾಗಿ ಇರಾನ್ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್‌ ಕೋರ್‌(ಐಆರ್‌ಜಿಸಿ) ಬಳಸುತ್ತಿದ್ದ ರೈಲು ಮಾರ್ಗ ಹಾಗೂ ಸೇತುವೆಗಳ ಮೇಲೂ ಬಾಂಬ್‌ ಸ್ಫೋಟಿಸಲಾಗಿದೆ.

ಈ ನಡುವೆ, ಹೊರ್ಮುಜ್‌ ಜಲಸಂಧಿಯನ್ನು ಮತ್ತೆ ತೆರೆಯುವ ಉದ್ದೇಶದಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕೈಗೊಂಡಿದ್ದ ನಿರ್ಣಯಕ್ಕೆ ಸೋಲಾಗಿದೆ. ಮಂಡಳಿಯ ಸದಸ್ಯ ರಾಷ್ಟ್ರಗಳಾದ ರಷ್ಯಾ ಹಾಗೂ ಚೀನಾ ತಮ್ಮ ವಿಟೊ ಅಧಿಕಾರ ಬಳಸಿ, ಈ ನಿರ್ಣಯ ಅಂಗೀಕಾರವಾಗದಂತೆ ನೋಡಿಕೊಂಡವು.

'ಒಪ್ಪಂದಕ್ಕೆ ಇರಾನ್‌ ಸಹಿ ಹಾಕಿ ಹೊರ್ಮುಜ್‌ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಬೇಕು. ಇಲ್ಲದೇ ಹೋದಲ್ಲಿ ಮತ್ತೆ ಸುಧಾರಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಇರಾನ್‌ ಅನ್ನು ನಾಶ ಮಾಡಲಾಗುವುದು. ಈ ರೀತಿ ಸಂಭವಿಸುವುದನ್ನು ನಾನು ಬಯಸುವುದಿಲ್ಲ. ಆದರೆ, ಬಹುಶಃ ಇದು ಘಟಿಸಲಿದೆ' ಎಂದು ಅವರು ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ 'ಟ್ರೂಥ್‌ ಸೋಷಿಯಲ್‌'ನಲ್ಲಿ ಬರೆದುಕೊಂಡಿದ್ದಾರೆ.

- ಐಆರ್‌ಜಿಸಿಅಮೆರಿಕ ಇಸ್ರೇಲ್‌ ಪಡೆಗಳ ಗುರಿಯಾಗಿರುವ ಸ್ಥಳಗಳ ರಕ್ಷಣೆಗೆ ಪಾಲಕರು ತಮ್ಮ ಮಕ್ಕಳನ್ನು ಕಳುಹಿಸಿ ಕೊಡಬೇಕು.

'ಅಮೆರಿಕ ಹಾಗೂ ಇಸ್ರೇಲ್‌ ಪಡೆಗಳು ಖಾರ್ಗ್‌ ದ್ವೀಪದ ಮೇಲೆ ನಡೆಸಿದ ದಾಳಿಯಲ್ಲಿ, ಅಲ್ಲಿನ ಮೂಲಸೌಕರ್ಯಗಳಿಗೆ ಯಾವುದೇ ಹಾನಿಯಾಗಿಲ್ಲ' ಎಂದು ಇರಾನ್‌ ಹೇಳಿಕೊಂಡಿದೆ.

ಸಾವು: 'ಟೆಹರಾನ್‌ ಬಳಿಯ ಅಲ್‌ಬೋರ್ಜ್ ಪ್ರಾಂತ್ಯದ ವಸತಿ ಪ್ರದೇಶಗಳನ್ನು ಗುರಿಯಾಗಿಸಿ ನಡೆದ ದಾಳಿಗಳಲ್ಲಿ ಇಬ್ಬರು ಮಕ್ಕಳು ಸೇರಿ 18 ಜನರು ಮೃತಪಟ್ಟಿದ್ದು, ಇತರ 24 ಮಂದಿ ಗಾಯಗೊಂಡಿದ್ದಾರೆ' ಎಂದು ಅಲ್‌ಬೋರ್ಜ್‌ ಪ್ರಾಂತ್ಯದ ಡೆಪ್ಯುಟಿ ಗವರ್ನರ್ ಅವರ ಹೇಳಿಕೆ ಉಲ್ಲೇಖಿಸಿ ಮಿಜಾನ್‌ ಆನ್‌ಲೈನ್‌ ಜಾಲತಾಣ ಹಾಗೂ ಫಾರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿವೆ.

ಇಸ್ರೇಲ್‌ ಹಾಗೂ ಸೌದಿ ಅರೇಬಿಯಾ ಮೇಲೆ ಇರಾನ್‌ ಪ್ರತಿ ದಾಳಿ ನಡೆಸಿದೆ.

'ಇರಾನ್‌ ಪಡೆಗಳು ಏಳು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ಸೌದಿ ಅರೇಬಿಯಾ ಮೇಲೆ ದಾಳಿ ನಡೆಸಿವೆ. ಈ ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದು, ಅವುಗಳ ಅವಶೇಷಗಳು ಇಂಧನ ಮೂಲಸೌಕರ್ಯಗಳ ಬಳಿ ಬಿದ್ದಿವೆ. ಇದರಿಂದ ಆಗಿರುವ ಹಾನಿ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ' ಎಂದು ಸೌದಿ ಅರೇಬಿಯಾ ರಕ್ಷಣಾ ಸಚಿವಾಲಯ ವಕ್ತಾರ ಮೇಜರ್‌ ಜನರಲ್ ತುರ್ಕಿ ಅಲ್‌-ಮಲ್ಕಿ ಹೇಳಿದ್ದಾರೆ.

ಈ ದಾಳಿಯ ಬೆನ್ನಲ್ಲೇ, ಬಹರೇನ್‌ಗೆ ಸಂಪರ್ಕ ಕಲ್ಪಿಸುವ 'ಕಿಂಗ್‌ ಫಾಹ್ದ್ ಕಾಸ್‌ವೇ' ಸೇತುವೆಯನ್ನು ಸೌದಿ ಅರೇಬಿಯಾ ತಾತ್ಕಾಲಿಕವಾಗಿ ಮುಚ್ಚಿದೆ. 25 ಕಿ.ಮೀ. ಉದ್ದದ ಈ ಸೇತುವೆ ಸೌದಿ ಅರೇಬಿಯಾ ಮತ್ತು ಬಹರೇನ್‌ ನಡುವೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗವಾಗಿದೆ. ಇಸ್ರೇಲ್‌ ರಾಜಧಾನಿ ಟೆಲ್ ಅವೀವ್‌ ಹಾಗೂ ಏಲಟ್‌ ನಗರದ ಮೇಲೂ ಇರಾನ್‌ ದಾಳಿ ನಡೆಸಿದೆ.

ವಿಮಾನ ನಿಲ್ದಾಣಗಳ ಮೇಲೆ ದಾಳಿ: ಟೆಹರಾನ್‌ನ ಮೂರು ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿ ಸೋಮವಾರ ತಡರಾತ್ರಿ ದಾಳಿ ನಡೆಸಿದ್ದಾಗಿ ಇಸ್ರೇಲ್‌ ಸೇನೆ ಹೇಳಿದೆ.

ಬಹ್ರಾಮ್, ಮೆಹ್ರಾಬಾದ್‌ ಹಾಗೂ ಅಜಮಯೇಸ್‌ ವಿಮಾನನಿಲ್ದಾಣಗಳ ಮೇಲೆ ದಾಳಿ ನಡೆಸಿದ್ದು, ಇರಾನ್‌ ಸೇನೆಗೆ ಸೇರಿದ ಹಲವು ಹೆಲಿಕಾಪ್ಟರ್‌ಗಳು ಹಾಗೂ ಯುದ್ಧವಿಮಾನಗಳಿಗೆ ಹಾನಿಯಾಗಿದೆ ಎಂದೂ ಇಸ್ರೇಲ್‌ ಹೇಳಿದೆ.

ಬೈರೂತ್‌ನ ಪೂರ್ವ ಭಾಗದ ಏನ್ ಸಾದೇಹ್ ಪಟ್ಟಣದ ಅಪಾರ್ಟ್‌ಮೆಂಟ್‌ ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಲೆಬನಾನ್‌ ಸೇನೆಯ ಪ್ರಮುಖ ಅಧಿಕಾರಿಯೊಬ್ಬರು ಹತರಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಭಾರತೀಯರಿಗೆ ಸಲಹೆ

'ಇರಾನ್‌ನಲ್ಲಿರುವ ಭಾರತೀಯರು ಮುಂದಿನ 48 ಗಂಟೆ ತಾವು ಇರುವ ಸ್ಥಳಗಳಲ್ಲಿಯೇ ಇರಬೇಕು' ಎಂದು ಭಾರತ ಮಂಗಳವಾರ ಸಲಹೆ ನೀಡಿದೆ. ಇರಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಈ ತುರ್ತು ಸಲಹೆ ನೀಡಿದ್ದು 'ಭಾರತೀಯರು ಮನೆಯ ಒಳಗಡೆಯೇ ಇರಬೇಕು. ಅಲ್ಲಿನ ಸೇನಾ ನೆಲೆಗಳು ವಿದ್ಯುತ್‌ ಮೂಲಸೌಕರ್ಯಗಳ ಬಳಿ ಹೋಗಬಾರದು. ಬಹುಮಹಡಿ ಕಟ್ಟಡಗಳ ಮೇಲೆ ಹೋಗಬಾರದು' ಎಂದು ಸಲಹೆ ನೀಡಿದೆ.

ರೈಲ್ವೆ ಸೇತುವೆ ಮೇಲೆ ದಾಳಿ: ನೆತನ್ಯಾಹು

'ಇರಾನ್‌ನ ರೆವಲ್ಯೂಷನರಿ ಗಾರ್ಡ್‌ ಕೋರ್‌(ಐಆರ್‌ಜಿಸಿ) ಬಳಸುತ್ತಿದ್ದ ರೈಲು ಮಾರ್ಗ ಹಾಗೂ ಸೇತುವೆಗಳ ಮೇಲೆ ದಾಳಿ ನಡೆಸಲಾಗಿದೆ' ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಹೇಳಿದ್ದಾರೆ. ಇದನ್ನು ದೃಢಪಡಿಸಿರುವ ಇರಾನ್‌ ಅಧಿಕಾರಿಗಳು ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಕನಿಷ್ಠ ಎರಡು ಸೇತುವೆಗಳು ಹಾಗೂ ರೈಲ್ವೆ ಮೂಲಸೌಕರ್ಯಕ್ಕೆ ಹಾನಿಯಾಗಿದೆ ಎಂದಿದ್ದಾರೆ

'ಇರಾನ್‌ನ ಭಯೋತ್ಪಾದಕ ಆಡಳಿತವನ್ನು ಮಟ್ಟ ಹಾಕುತ್ತೇವೆ. ಇಸ್ರೇಲ್‌ ಯೋಧರು ನಿನ್ನೆ ಇರಾನ್‌ನ ಸರಕು ಸಾಗಣೆ ಯುದ್ಧವಿಮಾನಗಳು ಹಾಗೂ ಹತ್ತಕ್ಕೂ ಅಧಿಕ ಹೆಲಿಕಾಪ್ಟರ್‌ಗಳನ್ನು ಹೊಡೆದು ಹಾಕಿದ್ದರು. ಇಂದು ಐಆರ್‌ಜಿಸಿ ಬಳಸುವ ರೈಲು ಮಾರ್ಗ ಹಾಗೂ ಸೇತುವೆಗಳನ್ನು ಧ್ವಂಸ ಮಾಡಿದ್ದಾರೆ' ಎಂದು ನೆತನ್ಯಾಹು ಅವರು ವಿಡಿಯೊವೊಂದರಲ್ಲಿ ಹೇಳಿದ್ದಾರೆ. ಇದಕ್ಕೂ ಮುನ್ನ 'ಸುರಕ್ಷತೆ ದೃಷ್ಟಿಯಿಂದ ಇರಾನ್‌ ಜನರು ರೈಲುಗಳಲ್ಲಿ ಸಂಚರಿಸಬಾರದು' ಎಂದು ಇಸ್ರೇಲ್‌ ಸೇನೆ ಎಚ್ಚರಿಸಿತ್ತು.

'ರೈಲುಗಳಲ್ಲಿ ಹಾಗೂ ರೈಲು ಹಳಿಗಳ ಬಳಿ ಇರುವುದು ನಿಮ್ಮ ಜೀವಕ್ಕೆ ಅಪಾಯಕಾರಿ ಎನಿಸಲಿದೆ' ಎಂದು ಇಸ್ರೇಲ್‌ ಸೇನೆಯು ಸಾಮಾಜಿಕ ಜಾಲತಾಣದಲ್ಲಿ ಪರ್ಷಿಯನ್ ಭಾಷೆಯಲ್ಲಿ ಬರೆದುಕೊಂಡಿತ್ತು.

ಇಂಧನ ಸಿಗದಂತೆ ಮಾಡುತ್ತೇವೆ: ಐಆರ್‌ಜಿಸಿ

'ದೇಶದ ವಿದ್ಯುತ್‌ ಸ್ಥಾವರಗಳು ಹಾಗೂ ಸೇತುವೆಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದಾಳಿ ನಡೆಸಿದಲ್ಲಿ ಅಮೆರಿಕ ಹಾಗೂ ಈ ಭಾಗದಲ್ಲಿನ ಅದರ ಮಿತ್ರ ರಾಷ್ಟ್ರಗಳಿಗೆ ಹಲವು ವರ್ಷ ತೈಲ ಹಾಗೂ ಅನಿಲ ಸಿಗದಂತೆ ಮಾಡುತ್ತೇವೆ' ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್‌ (ಐಆರ್‌ಜಿಸಿ) ಮಂಗಳವಾರ ಎಚ್ಚರಿಸಿದೆ. ಇದೇ ವೇಳೆ ಕೊಲ್ಲಿ ರಾಷ್ಟ್ರಗಳಿಗೂ ಐಆರ್‌ಜಿಸಿ ಎಚ್ಚರಿಕೆ ನೀಡಿದೆ.

'ಈವರೆಗೆ ನಾವು ಬಹಳ ಸಂಯಮ ಕಾಯ್ದುಕೊಂಡಿದ್ದೇವೆ. ಆಯ್ದ ತಾಣಗಳ ಮೇಲೆ ಮಾತ್ರ ಪ್ರತಿ ದಾಳಿ ನಡೆಸಲಾಗುತ್ತಿತ್ತು. ಇನ್ನು ಮುಂದೆ ಇಂತಹ ಯಾವುದೇ ಪರಿಗಣನೆಗಳು ಇರುವುದಿಲ್ಲ' ಎನ್ನುವ ಮೂಲಕ ಐಆರ್‌ಜಿಸಿ ತಕ್ಕ ಪ್ರತ್ಯುತ್ತರದ ಎಚ್ಚರಿಕೆ ನೀಡಿದೆ ಎಂದು ಇರಾನ್‌ ಮಾಧ್ಯಮಗಳು ವರದಿ ಮಾಡಿವೆ.

ಎಚ್ಚರಿಕೆ: 'ಇರಾನ್‌ನ ವಿದ್ಯುತ್‌ ಸ್ಥಾವರಗಳ ಮೇಲೆ ಒಂದು ವೇಳೆ ಅಮೆರಿಕ ದಾಳಿ ನಡೆಸಿದಲ್ಲಿ ಇರಾನ್‌ ಕೂಡ ಪ್ರತಿದಾಳಿಗಳನ್ನು ನಡೆಸಲಿದೆ. ಇದರಿಂದ ಸೌದಿ ಅರೇಬಿಯಾ ಸೇರಿ ಇಡೀ ಪ್ರದೇಶವೇ ಕತ್ತಲಲ್ಲಿ ಮುಳುಗಲಿದೆ ಎಂಬ ಇರಾನ್‌ನ ಸಂದೇಶವನ್ನು ಅಮೆರಿಕಕ್ಕೆ ಕತಾರ್‌ ತಿಳಿಸಿದೆ' ಎಂದು ಇರಾನ್‌ನ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

'ಅಮೆರಿಕದಿಂದ ದಾಳಿ ಇರಾನ್‌ನಿಂದ ಪ್ರತಿದಾಳಿಯಿಂದಾಗಿ ಒಂದು ವೇಳೆ ಪರಿಸ್ಥಿತಿ ಕೈಮೀರಿ ಹೋದಲ್ಲಿ ಇರಾನ್‌ನ ಮಿತ್ರ ರಾಷ್ಟ್ರಗಳು ಬಾಬ್‌-ಎಲ್-ಮಂದೇಬ್‌ ಜಲಸಂಧಿಯನ್ನು ಮುಚ್ಚಲಿವೆ. ಇದರಿಂದ ಮತ್ತಷ್ಟು ತೊಂದರೆಯಾಗಲಿದೆ' ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಪ್ರಮುಖ ಬೆಳವಣಿಗೆಗಳು

* ಸೌದಿ ಅರೇಬಿಯಾದ ಜುಬೇಲ್‌ ಕೈಗಾರಿಕಾ ನಗರದಲ್ಲಿರುವ ಪೆಟ್ರೊಕೆಮಿಕಲ್ ಸಂಕಿರ್ಣದ ಮೇಲೆ ಇರಾನ್‌ ಪಡೆಗಳು ವಾಯು ದಾಳಿ ನಡೆಸಿವೆ ಎಂದು ಇರಾನ್‌ನ ಫಾರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಕುರಿತು ಸೌದಿ ಅರೇಬಿಯಾ ಸರ್ಕಾರ ಪ್ರತಿಕ್ರಿಯಿಸಿಲ್ಲ

* ಯುದ್ಧ ಆರಂಭಗೊಂಡಾಗಿನಿಂದ ಇರಾನ್‌ ಪಡೆಗಳು 20ಕ್ಕೂ ಹೆಚ್ಚು ಹಡಗುಗಳ ಮೇಲೆ ದಾಳಿ ನಡೆಸಿದೆ ಎಂದು ಬ್ರಿಟನ್‌ ಹೇಳಿದೆ * ಟರ್ಕಿಯ ಇಸ್ತಾನ್‌ಬುಲ್‌ನಲ್ಲಿರುವ ಇಸ್ರೇಲ್‌ ಕಾನ್ಸುಲೇಟ್‌ ಕಚೇರಿ ಬಳಿ ಸಂಭವಿಸಿದ ಸಂಘರ್ಷದಲ್ಲಿ ಇಬ್ಬರು ಮೃತಪಟ್ಟಿದ್ದಾರೆ

* ಇಸ್ರೇಲ್‌ನ ಕರಾವಳಿ ಪಟ್ಟಣ ನಹಾರಿಯಾ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿದ್ದು ಮಹಿಳೆ ಸೇರಿ ಮೂವರು ಗಾಯಗೊಂಡಿದ್ದಾರೆ

'ಅಣ್ವಸ್ತ್ರ ಬಳಕೆ ಇಲ್ಲ'

'ಇರಾನ್‌ ವಿರುದ್ಧ ಅಮೆರಿಕ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ವೇಳೆ ಅಣ್ವಸ್ತ್ರಗಳನ್ನು ಬಳಸುವ ಯಾವುದೇ ಯೋಜನೆ ಇಲ್ಲ' ಎಂದು ಶ್ವೇತಭವನ ಹೇಳಿದೆ.

'ಇರಾನ್‌ ವಿರುದ್ಧದ ಕಾರ್ಯಾಚರಣೆ ವೇಳೆ ಈ ವರೆಗೆ ಕೆಲ ಶಸ್ತ್ರಾಸ್ತ್ರಗಳನ್ನು ಅಮೆರಿಕ ಬಳಸಿಲ್ಲ. ಇವುಗಳನ್ನು ಬಳಕೆ ಮಾಡುವ ಕುರಿತು ಈ ವರೆಗೆ ನಿರ್ಧರಿಸಿಲ್ಲ' ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ.ವಾನ್ಸ್‌ ಹೇಳಿದ್ದರು.

ವಾನ್ಸ್‌ ಹೇಳಿಕೆ ಉಲ್ಲೇಖಿಸಿದ್ದ ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, 'ಟ್ರಂಪ್‌ ಅವರು ಅಣ್ವಸ್ತ್ರ ಬಳಸಬಹುದು ಎಂಬುದನ್ನು ವಾನ್ಸ್‌ ಹೇಳಿಕೆ ಸೂಚಿಸುತ್ತದೆ' ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಶ್ವೇತಭವನ ಈ ರೀತಿ ಪ್ರತಿಕ್ರಿಯಿಸಿದೆ.

ಸ್ವತ್ತುಗಳ ರಕ್ಷಣೆ: ಜನರೇ ಗುರಾಣಿ

ಅಮೆರಿಕ-ಇಸ್ರೇಲ್‌ ಪಡೆಗಳ ದಾಳಿಯಿಂದ ದೇಶದ ಮೂಲಸೌಕರ್ಯಗಳನ್ನು ರಕ್ಷಿಸಲು ಜನರನ್ನೇ ಗುರಾಣಿಯನ್ನಾಗಿ ಬಳಸಲು ಇರಾನ್‌ ಮುಂದಾಗಿದೆ.

'ದೇಶದ ಯುವ ಜನರು ಮಾನವ ಸರಪಳಿ ನಿರ್ಮಿಸುವ ಮೂಲಕ ವಿದ್ಯುತ್‌ ಸ್ಥಾವರಗಳು ಸೇರಿ ಮೂಲಸೌಕರ್ಯಗಳ ರಕ್ಷಣೆಗೆ ಮುಂದಾಗಬೇಕು' ಎಂದು ಇರಾನ್‌ನ ಅಧಿಕಾರಿಗಳು ಕರೆ ನೀಡಿದ್ದಾರೆ.

'ಅಮೆರಿಕ-ಇಸ್ರೇಲ್‌ ವಿರುದ್ಧದ ಈ ಯುದ್ಧದಲ್ಲಿ ದೇಶವನ್ನು ರಕ್ಷಿಸುವುದಕ್ಕಾಗಿ 1.4 ಕೋಟಿ ಇರಾನಿಯರು ಪ್ರಾಣತ್ಯಾಗ ಮಾಡುವುದಕ್ಕೆ ಸಿದ್ಧರಾಗಿದ್ದಾರೆ' ಎಂದು ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್ ಅವರು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕದನ ವಿರಾಮ ಒಪ್ಪಂದಕ್ಕೆ ಸಮ್ಮತಿಸದಿದ್ದಲ್ಲಿ ಇರಾನ್‌ನ ವಿದ್ಯುತ್ ಸ್ಥಾವರಗಳು ಸೇತುವೆಗಳನ್ನು ನಾಶಪಡಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಎಚ್ಚರಿಕೆ ನೀಡಿದ ಬೆನ್ನಲ್ಲೇ ಅವರು ಈ ಪೋಸ್ಟ್‌ ಮಾಡಿದ್ದು 'ಇರಾನ್‌ ರಕ್ಷಣೆಗಾಗಿ ನಾನು ಕೂಡ ಪ್ರಾಣ ತ್ಯಾಗಕ್ಕೆ ಸಿದ್ಧನಿದ್ದೇನೆ' ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries