ತಿರುವನಂತಪುರಂ: 'ಮುಂಡತ್ತಿಕೋಡ್ ಪಟಾಕಿ ದುರಂತದ ತನಿಖೆಗೆ ತ್ರಿಶ್ಶೂರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಸ್ಫೋಟಕ್ಕೆ ನಿಖರ ಕಾರಣ ಶೀಘ್ರದಲ್ಲೇ ತಿಳಿಯಲಿದೆ' ಎಂದು ಕೇರಳ ಡಿಜಿಪಿ ರಾವಡ ಎ. ಚಂದ್ರಶೇಖರ್ ಹೇಳಿದ್ದಾರೆ.
ಕೇರಳ ಸರ್ಕಾರ ಈ ದುರಂತವನ್ನು 'ರಾಜ್ಯ ವಿಪತ್ತು' ಎಂದು ಘೋಷಿಸಿದ್ದು, ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹14 ಲಕ್ಷ ಪರಿಹಾರ ಘೋಷಿಸಿದೆ.
'ಎಸ್‌ಐಟಿ ತನಿಖೆಯ ಜತೆಯಲ್ಲೇ, ಕೇರಳ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು, ನ್ಯಾಯಮೂರ್ತಿ ಸಿ.ಎನ್. ರಾಮಚಂದ್ರನ್ ನಾಯರ್ ನೇತೃತ್ವದ ಏಕಸದಸ್ಯ ಆಯೋಗವು ಪ್ರಕರಣದ ಕುರಿತು ತನಿಖೆ ನಡೆಸಿ ವರದಿ ನೀಡಲಿದೆ' ಎಂದು ಕಂದಾಯ ಸಚಿವ ಕೆ. ರಾಜನ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮೃತದೇಹಗಳ ಅಂತ್ಯಸಂಸ್ಕಾರ, ಮಾದರಿ ಸಂಗ್ರಹ, ಡಿಎನ್‌ಎ ಪರೀಕ್ಷೆಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ರೂಪಿಸುವಂತೆ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸರ್ಕಾರ ಸೂಚನೆ ನೀಡಿದೆ.
'ಗಾಯಾಳುಗಳಿಗೆ ತಕ್ಷಣದ ಪರಿಹಾರವಾಗಿ ₹2 ಲಕ್ಷ ಪಾವತಿಸಲಾಗುವುದು. ಅವರ ಚಿಕಿತ್ಸಾ ವೆಚ್ಚವನ್ನು ಪೂರ್ಣವಾಗಿ ಸರ್ಕಾರವೇ ಭರಿಸಲಿದೆ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡವರ ವೆಚ್ಚವನ್ನೂ ಪಾವತಿಸಲಾಗುವುದು' ಎಂದು ಸಚಿವ ರಾಜನ್ ಹೇಳಿದರು.

