ನವದೆಹಲಿ: ಸ್ತ್ರೀ ಪುರುಷ ಇಬ್ಬರು ಸಮಾನರು ಹೀಗಾಗಿ ಮಹಿಳೆಯರಿಗೂ ಶಬರಿಮಲೆ ದೇಗುಲಕ್ಕೆ ಪ್ರವೇಶಿಸುವುದಕ್ಕೆ ಅನುಮತಿ ನೀಡಬೇಕು ಎಂದು ಹಲವರು ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆ ಸುಪ್ರೀಂಕೋರ್ಟ್ ಈ ಪ್ರಕರಣಗಳ ತನಿಖೆಗೆ ಒಂಬತ್ತು ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠ ರಚಿಸಿತ್ತು.
ಇತ್ತ ಕೇಂದ್ರ ಸರ್ಕಾರವು ಶಬರಿಮಲೆಯಲ್ಲಿ ಸ್ತ್ರೀಯರಿಗೆ ನಿಷೇಧ ಹೇರಿರುವ ವಿಚಾರವನ್ನು ಬೆಂಬಲಿಸಿದ್ದು, ದೇವಸ್ಥಾನಕ್ಕೆ ಋತುಮತಿಯಾಗಿರುವ ವಯಸ್ಸಿನ ಮಹಿಳೆಯರ (ಬಾಲಕಿಯರು ಮತ್ತು ವೃದ್ಧೆಯರನ್ನು ಹೊರತುಪಡಿಸಿದ ಮಹಿಳೆಯರು) ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಶಬರಿಮಲೆ ವಿಚಾರಣೆಯಲ್ಲಿ ಕೇಂದ್ರ ನೀಡಿದ ರೋಚಕ ಮಾಹಿತಿ!
ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ರಚಿಸಿರುವ ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠದ ಮುಂದೆ ಕೇಂದ್ರದ ಅಭಿಪ್ರಾಯವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಂಡಿಸಿದ್ದು, ಹಿಂದೂ ಧರ್ಮವು ಮಹಿಳೆಯರನ್ನು ಸಮಾನವಾಗಿ ಪರಿಗಣಿಸುವುದಲ್ಲದೆ, ಪುರುಷರಿಗಿಂತ ಹೆಚ್ಚಿನ ಸ್ಥಾನಮಾನವನ್ನು ಅವರಿಗೆ ನೀಡುತ್ತದೆ ಎಂದು ಹೇಳಿದ್ದಾರೆ. ಕೇರಳದ ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಿಸುವ ತಾರತಮ್ಯಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠದ ಮುಂದೆ ಅವರು ಕೇಂದ್ರದ ಪರವಾಗಿ ವಾದ ಮಂಡಿಸಿದರು.
ಸುಪ್ರೀಂ ಪೀಠದ ಮುಂದೆ ಪುರುಷರ ಪ್ರವೇಶ ನಿಷೇಧವಿರುವ ದೇಗುಲಗಳ ಪಟ್ಟಿ ಬಿಚ್ಚಿಟ್ಟ ಕೇಂದ್ರ
ಇದೇ ವೇಳೆ ಅವರು ದೀರ್ಘಕಾಲದ ಧಾರ್ಮಿಕ ಪದ್ಧತಿಗಳ ಭಾಗವಾಗಿ ದೇಶಾದ್ಯಂತ ಕೇವಲ ಸ್ತ್ರೀಯರನ್ನು ಮಾತ್ರವಲ್ಲ, ಪುರುಷರ ಪ್ರವೇಶಕ್ಕೂ ನಿರ್ಬಂಧ ಹೇರಿರುವ ಹಲವು ದೇವಾಲಯಗಳ ಉದಾಹರಣೆಯನ್ನು ಸಾಂವಿಧಾನಿಕ ಪೀಠದ ಮುಂದೆ ನೀಡಿದರು. ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶ ನಿಷೇಧವೂ ಲಿಂಗ ತಾರತಮ್ಯದ ಕಾರಣಕ್ಕೆ ನಡೆದಿಲ್ಲ. ಅದರ ಹಿಂದೆ ಹಲವು ಶತಮಾನಗಳ ಹಿಂದಿನ ಧಾರ್ಮಿಕ ನಂಬಿಕೆಗಳು ನೆಲೆಯೂರಿವೆ ಎಂದು ಹೇಳಿದ್ದಲ್ಲದೇ ದೇಶದಲ್ಲಿ ಪುರುಷರಿಗೆ ನಿಷೇಧ ಇರುವ ದೇವಾಲಯಗಳ ಪಟ್ಟಿಯನ್ನು ಅವರು ಪೀಠದ ಮುಂದಿಟ್ಟಿದ್ದಾರೆ. ರಾಜಸ್ಥಾನದ ಪುಷ್ಕರ್‌ನಲ್ಲಿರುವ ಬ್ರಹ್ಮ ದೇವಾಲಯದಲ್ಲಿ ವಿವಾಹಿತ ಪುರುಷರಿಗೆ ಅವಕಾಶವಿಲ್ಲ, ಮತ್ತು ದೇವಿಯ ಆಶೀರ್ವಾದ ಪಡೆಯಲು ಪುರುಷರು ಮಹಿಳೆಯರ ಉಡುಪು ಧರಿಸುವ ಕೇರಳ ದೇವಾಲಯವನ್ನು ಅವರು ಉಲ್ಲೇಖಿಸಿದರು.
ಲಿಂಗ ತಾರತಮ್ಯವಲ್ಲ, ಇದು ಶತಮಾನಗಳ ನಂಬಿಕೆ
10ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ದೇವಾಲಯ ಪ್ರವೇಶದ ಮೇಲಿನ ನಿಷೇಧವನ್ನು ತೆಗೆದು ಹಾಕಿದ 2018 ರ ಶಬರಿಮಲೆ ತೀರ್ಪು ಪುರುಷರು ಶ್ರೇಷ್ಠರು ಎಂಬ ಊಹೆಯನ್ನು ಆಧರಿಸಿದೆ. ಇದು ಹಿಂದೂ ಸಂಪ್ರದಾಯಗಳೊಳಗಿನ ವಿಶಾಲ ಆಚರಣೆಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸಾಲಿಸಿಟರ್ ಜನರಲ್ ವಾದಿಸಿದರು. ಧಾರ್ಮಿಕ ಆಚರಣೆಗಳನ್ನು ಕೇವಲ ಲಿಂಗ ದೃಷ್ಟಿಕೋನದಿಂದ ನೋಡಲಾಗುವುದಿಲ್ಲ
ಇಲ್ಲಿ ಗಂಡಸರ ಕುರಿತಾದ ಪ್ರಶ್ನೆಗಳು, ಮಹಿಳಾ ಕೇಂದ್ರಿತ ನಂಬಿಕೆಗಳ ಪ್ರಶ್ನೆಗಳು ಉದ್ಭವಿಸುವುದಿಲ್ಲ. ಶಬರಿಮಲೆ ದೇವಸ್ಥಾನ ನಂಬಿಕೆ ಮೇಲೆ ಇದೆ. ಹೀಗಾಗಿ ಮಹಿಳೆಯರ ಪ್ರವೇಶ ನಿಷೇಧಿಸಿದ್ದು, ಅದನ್ನು ಕೇಂದ್ರವು ಬೆಂಬಲಿಸಿದೆ ಎಂದು ಮಹ್ತಾ ಅವರು, ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ, ಎಂ ಎಂ ಸುಂದರೇಶ್, ಅಹ್ಸಾನುದ್ದೀನ್ ಅಮಾನುಲ್ಲಾ, ಅರವಿಂದ್ ಕುಮಾರ್, ಆಗಸ್ಟೀನ್ ಜಾರ್ಜ್ ಮಸಿಹ್, ಪ್ರಸನ್ನ ಬಿ ವರಾಳೆ, ಆರ್ ಮಹಾದೇವನ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ನ್ಯಾಯಪೀಠಕ್ಕೆ ತಿಳಿಸಿದರು.
ಇದೇ ವೇಳೆ ಪುರುಷರಿಗೆ ನಿಷೇಧವಿರುವ ಆರು ದೇವಾಲಯಗಳ ಮಾಹಿತಿಯನ್ನು ಅವರು ಈ ನ್ಯಾಯಪೀಠದ ಮುಂದೆ ಇಟ್ಟಿದ್ದಾರೆ. ಆ ಆರು ದೇವಾಲಯಗಳ ವಿವರ ಇಲ್ಲಿದೆ.
1.ಕೇರಳದ ಅಟ್ಟುಕಲ್ ಭಗವತಿ ದೇವಸ್ಥಾನ: ಇಲ್ಲಿ ಪೊಂಗಲ್ ಹಬ್ಬದ ಮುಖ್ಯ ದಿನದಂದು ಪುರುಷರಿಗೆ ದೇಗುಲ ಪ್ರವೇಶಕ್ಕೆ ಅನುಮತಿ ಇಲ್ಲ.
2. ಕೇರಳದ ಚಕ್ಕುಲತುಕಾವು ದೇವಸ್ಥಾನ: ಈ ದೇಗುಲದಲ್ಲಿ ಭಗವತಿ ದೇವಿಯನ್ನು ಪೂಜಿಸಲಾಗುತ್ತದೆ. ಮತ್ತು ಇಲ್ಲಿ ವಾರ್ಷಿಕ 'ನಾರಿ ಪೂಜೆ' ಎಂಬ ಆಚರಣೆಯನ್ನು ನಡೆಸಲಾಗುತ್ತದೆ. ಇಲ್ಲಿ ಪುರುಷ ಅರ್ಚಕರು 10 ದಿನಗಳ ಕಾಲ ಉಪವಾಸ ಮಾಡುವ ಮಹಿಳಾ ಭಕ್ತರ ಪಾದಗಳನ್ನು ತೊಳೆಯುತ್ತಾರೆ. ಈ ನಾರಿ ಪೂಜೆ'ಯ ಸಮಯದಲ್ಲಿ, ಮಹಿಳೆಯರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶಿಸಲು ಅವಕಾಶವಿದೆ.
3.ಪುಷ್ಕರ್‌ನಲ್ಲಿರುವ ಬ್ರಹ್ಮ ದೇವಾಲಯ: 14 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಬ್ರಹ್ಮ ದೇವಾಲಯವು ಹಿಂದೂ ಪುರಾಣಗಳಲ್ಲಿ ಸೃಷ್ಟಿಕರ್ತ ಎಂದು ಪರಿಗಣಿಸಲಾದ ಬ್ರಹ್ಮನಿಗೆ ಮೀಸಲಾಗಿರುವ ಏಕೈಕ ದೇವಾಲಯವಾಗಿದೆ. ಅವನನ್ನು ಪೂಜಿಸುವ ವಿವಾಹಿತ ಪುರುಷರು ತಮ್ಮ ವೈವಾಹಿಕ ಜೀವನದಲ್ಲಿ ತೊಂದರೆಗಳನ್ನು ಎದುರಿಸುತ್ತಾರೆ ಎಂದು ನಂಬಲಾಗಿದೆ. ಹೀಗಾಗಿ ವಿವಾಹಿತ ಪುರುಷರಿಗೆ ಈ ದೇಗುಲಕ್ಕೆ ಪ್ರವೇಶವಿಲ್ಲ.
4.ಭಗವತಿ ಅಮ್ಮನ್ ದೇವಾಲಯ: ಕನ್ಯಾಕುಮಾರಿಯಲ್ಲಿರುವ ಈ ಭಗವತಿ ಅಮ್ಮನ್ ದೇವಾಲಯದಲ್ಲಿ ದೇವಿ ಕನ್ಯಾ ಕುಮಾರಿಯನ್ನು ಪೂಜಿಸಲಾಗುತ್ತದೆ. ಈ ದೇವಿಯನ್ನು ಸನ್ಯಾಸದ ದೇವತೆ ಎಂದೂ ಕರೆಯಲಾಗುತ್ತದೆ. ಈ ಕಾರಣಗಳಿಂದಾಗಿ, ಬ್ರಹ್ಮಚಾರಿ ಪುರುಷರಿಗೆ ಈ ದೇವಾಲಯದ ದ್ವಾರಗಳವರೆಗೆ ಮಾತ್ರ ಅವಕಾಶವಿದೆ ಮತ್ತು ವಿವಾಹಿತ ಪುರುಷರು ಆವರಣಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
5 ಮಾತಾ ದೇವಾಲಯ ಬಿಹಾರ: ಇಲ್ಲಿನ ಮುಜಫರ್‌ಪುರದಲ್ಲಿರುವ ಮಾತಾ ದೇವಾಲಯದಲ್ಲಿ, ಒಂದು ನಿರ್ದಿಷ್ಟ ಅವಧಿಯಲ್ಲಿ ಪುರುಷರಿಗೆ ಕಟ್ಟುನಿಟ್ಟಾಗಿ ದೇಗುಲ ಪ್ರವೇಶ ನಿಷೇಧಿಸಲಾಗಿದೆ. ನಿಯಮಗಳು ಎಷ್ಟು ಕಟ್ಟುನಿಟ್ಟಾಗಿವೆಯೆಂದರೆ, ಪುರುಷ ಅರ್ಚಕರಿಗೂ ಸಹ ಆವರಣಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಈ ಅವಧಿಯಲ್ಲಿ ಮಹಿಳೆಯರಿಗೆ ಮಾತ್ರ ಈ ದೇವಾಲಯಕ್ಕೆ ಹೋಗುವ ಅವಕಾಶವಿದೆ.
6.ಕೇರಳದ ಕೊಟ್ಟಂಕುಳಂಗರ ಶ್ರೀ ದೇವಿ ದೇವಾಲಯ: ಈ ದೇವಾಲಯವು ಚಮಯವಿಳಕ್ಕು ಎಂಬ ವಿಶಿಷ್ಟ ಸಂಪ್ರದಾಯವನ್ನು ಹೊಂದಿದೆ. ಪುರುಷರು ಮಹಿಳೆಯರ ಉಡುಪನ್ನು ಧರಿಸಿಯೇ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ. ಈ ದೇವಾಲಯದಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರು ಹುಡುಗಿಯರಂತೆ ಉಡುಗೆ ತೊಡುವ ಮತ್ತೊಂದು ಪದ್ಧತಿ ಇದೆ.
7. ಅಸ್ಸಾಂನ ಕಾಮರೂಪ ಕಾಮಾಕ್ಯ ದೇವಸ್ಥಾನ: ಅಸ್ಸಾಂನ ಈ ದೇವಾಲಯದಲ್ಲಿ ಅಂಬುಬಾಚಿಯ ಸಮಯದಲ್ಲಿ ಪುರುಷರ ಪ್ರವೇಶವನ್ನು ನಿಷೇಧಿಸಲಾಗುತ್ತದೆ. ಏಕೆಂದರೆ ಆ ಸಮಯದಲ್ಲಿ ದೇವತೆಯು ಋತುಮತಿಯಾಗುತ್ತಾಳೆ ಎಂದು ನಂಬಲಾಗಿದೆ. ಈ ಸಮಯದಲ್ಲಿ ಮಹಿಳಾ ಅರ್ಚಕರು ಮಾತ್ರ ದೇವಾಲಯಕ್ಕೆ ಸೇವೆ ಸಲ್ಲಿಸುತ್ತಾರೆ.
ಹೀಗೆ ದೇಶದಲ್ಲಿ ಪುರುಷರಿಗೆ ಪ್ರವೇಶ ನಿಷೇಧವಿರುವ ಹಲವು ದೇಗುಲಗಳ ವಿವರ ನೀಡಿದ ಕೇಂದ್ರ ದೇಗುಲಗಳ ವಿಚಾರದಲ್ಲಿ ಪುರುಷ ಪ್ರಧಾನ ಅಥವಾ ಲಿಂಗತಾರತಮ್ಯ ಎಂಬ ಕಲ್ಪನೆಗಳು ಅಂತರ್ಗತವಾಗಿಲ್ಲ ಎಂದು ವಾದಿಸಿದೆ.

