ತ್ರಿಶೂರ್: ಕೇರಳದ ಗುರುವಾಯೂರು ಶ್ರೀಕೃಷ್ಣ ದೇವಸ್ವಂ ಮಂಡಳಿಯು ಆನೆಗಳು ಮತ್ತು ಗೋವುಗಳ ಆರೈಕೆ ಹಾಗೂ ಚಿಕಿತ್ಸೆಗಾಗಿ ಮಲ್ಟಿ ಸ್ಪೆಷಾಲಿಟಿ ಪಶು ಆಸ್ಪತ್ರೆಯನ್ನು ಸ್ಥಾಪಿಸಲು ಮುಂದಾಗಿದ್ದು, ಈ ಕುರಿತು ಸ್ಥಳ ಪರಿಶೀಲನೆಗೆ ವಂತಾರದ ತಜ್ಞರ ತಂಡವು ಭೇಟಿ ನೀಡಿದೆ.
ಆಧುನಿಕ ಸೌಲಭ್ಯಗಳುಳ್ಳ ಪಶು ಆಸ್ಪತ್ರೆ ನಿರ್ಮಿಸುವ ಕಾರ್ಯಸಾಧ್ಯತೆಯನ್ನು ನಿರ್ಣಯಿಸಲು ವಂತಾರದ ತಜ್ಞರ ತಂಡವು ಗುರುವಾಯೂರಿಗೆ ಭೇಟಿ ನೀಡಿದೆ.
ಪುನತ್ತೂರ್ ಕೊಟ್ಟದ ಆನೆ ಶಿಬಿರವನ್ನು ಪರಿಶೀಲಿಸಿದ್ದು, ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಮತ್ತು ಸೂಪರ್ ಸ್ಪೆಷಾಲಿಟಿ ಪಶು ಆಸ್ಪತ್ರೆ ನಿರ್ಮಿಸುವ ಸಾಧ್ಯತೆಗಳ ಕುರಿತು ಮೌಲ್ಯಮಾಪನ ಮಾಡಿದೆ ಎಂದು ದೇವಸ್ವಂ ಮಂಡಳಿ ಫೇಸ್‌ಬುಕ್‌ನಲ್ಲಿ ಮಂಗಳವಾರ ತಿಳಿಸಿದೆ.
ಹೆಚ್ಚಿನ ಅಧ್ಯಯನ ಮತ್ತು ಸಮನ್ವಯಕ್ಕಾಗಿ ಜಾಮ್‌ನಗರದಲ್ಲಿರುವ ವಂತಾರಕ್ಕೆ ಭೇಟಿ ನೀಡುವಂತೆ ದೇವಸ್ವಂನ ಅಧಿಕೃತ ನಿಯೋಗಕ್ಕೆ ತಜ್ಞರ ತಂಡವು ಆಹ್ವಾನ ನೀಡಿದೆ.
ಇದೇ ವೇಳೆ ತಜ್ಞರು ದೇಗುಲದ ಆನೆ 'ನಂದನ್' ಅನ್ನು ಪರೀಕ್ಷಿಸಿ, ಕೆಲವು ವೈದ್ಯಕೀಯ ಶಿಫಾರಸುಗಳನ್ನು ನೀಡಿದ್ದಾರೆ ಎಂದು ಅದು ತಿಳಿಸಿದೆ.

