ಮುಂಬೈ: ಐಪಿಎಲ್ ನ ಪ್ರಸಾರ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಪ್ರಜೆಯೊಬ್ಬರು ಮುಂಬೈಯ ಟ್ರೈಡೆಂಟ್ ಹೋಟೆಲ್ ನ ಕೊಠಡಿಯೊಂದರಲ್ಲಿ ಸೋಮವಾರ ಬೆಳಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತ ವ್ಯಕ್ತಿಯನ್ನು 76 ವರ್ಷದ ಜಾನ್ ವಿಲಿಯಂ ಲ್ಯಾಂಗ್ಫೋರ್ಡ್ ಎಂದು ಗುರುತಿಸಲಾಗಿದೆ.
ಅವರು ಐಪಿಎಲ್ ವರದಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮಾರ್ಚ್ 24ರಿಂದ ಟ್ರೈಡೆಂಟ್ ಹೋಟೆಲ್ ನಲ್ಲಿ ತಂಗಿದ್ದರು.
ಮಾರ್ಚ್ 29ರಂದು ಪಂದ್ಯದ ನಂತರ ಲ್ಯಾಂಗ್ಫೋರ್ಡ್ ತಮ್ಮ ಕೊಠಡಿಗೆ ಮರಳಿದ್ದರು. ಮರುದಿನ ಬೆಳಗ್ಗೆ ಹೋಟೆಲ್ ಸಿಬ್ಬಂದಿ ಫೋನ್ ಮೂಲಕ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಅವರು ಫೋನ್ ಕರೆ ಸ್ವೀಕರಿಸಲಿಲ್ಲ.
ಅನಂತರ ಶೋಧ ತಂಡ ಮಾಸ್ಟರ್ ಕೀ ಬಳಸಿ ಕೊಠಡಿಯ ಬಾಗಿಲು ತೆರೆಯಿತು ಮತ್ತು ಒಳ ಪ್ರವೇಶಿಸಿತು. ಆಗ ಲ್ಯಾಂಗ್ಫೋರ್ಡ್ ನೆಲದ ಮೇಲೆ ಬಿದ್ದಿರುವುದು ಕಂಡುಬಂತು. ಕೂಡಲೇ ಹೋಟೆಲ್ ನ ವೈದ್ಯರನ್ನು ಕರೆಸಲಾಯಿತು. ಅವರು ಲ್ಯಾಂಗ್ಫೋರ್ಡ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಮರೈನ್ ಡ್ರೈವ್ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

