ಈ ಸಂದರ್ಭದಲ್ಲಿ ʼದಿ ಗಾರ್ಡಿಯನ್ʼ ಪತ್ರಿಕೆಯು ಲೇಖನವೊಂದನ್ನು ಪ್ರಕಟಿಸಿದ್ದು, ಭಾರತವು ಮತದಾರರ ಪಟ್ಟಿಗಳನ್ನು 'ಶುದ್ಧೀಕರಿಸಲು' ಬಯಸಿರುವುದರಿಂದ ನಿರ್ಣಾಯಕ ರಾಜ್ಯ ಚುನಾವಣೆಗೆ ಮುನ್ನ ಲಕ್ಷಾಂತರ ಭಾರತೀಯರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಅದು ಒತ್ತಿ ಹೇಳಿತ್ತು.
ಇತರ ವಿಷಯಗಳ ಜೊತೆಗೆ ತಜ್ಞರ ಮೌಲ್ಯಮಾಪನವನ್ನು ಉಲ್ಲೇಖಿಸಿ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ಹೆಸರುಗಳನ್ನು ಮತದಾರರ ಪಟ್ಟಿಗಳಿಂದ ಅಸಮ ಪ್ರಮಾಣದಲ್ಲಿ ಅಳಿಸಲಾಗಿದೆ ಎಂದು ಲೇಖನವು ಬೆಟ್ಟು ಮಾಡಿತ್ತು. ಎಸ್‌ಐಆರ್ ಅನ್ನು 'ಅಲ್ಪಸಂಖ್ಯಾತರ ಪೌರತ್ವವನ್ನು ಕೊಲ್ಲುವ ಪ್ರಕ್ರಿಯೆ, ರಕ್ತರಹಿತ ರಾಜಕೀಯ ನರಮೇಧ' ಎಂದು ಬಣ್ಣಿಸಿದ್ದ ಭಾರತೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ ಅವರನ್ನೂ ಲೇಖನವು ಉಲ್ಲೇಖಿಸಿತ್ತು.
ಮೋದಿ ಆಡಳಿತದಡಿ 2026ರ ಚುನಾವಣೆಗಳನ್ನು ಚುನಾವಣಾ ಆಯೋಗವು ನಡೆಸುತ್ತಿರುವ ರೀತಿಯ ಬಗ್ಗೆ ಇಂತಹ ಪ್ರತಿಕೂಲ ಟೀಕೆಗಳು 74 ವರ್ಷಗಳ ಹಿಂದೆ ಭಾರತದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಗಳು ಯಶಸ್ವಿಯಾಗಿ ಪೂರ್ಣಗೊಂಡಾಗ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಕ್ತವಾಗಿದ್ದ ಪ್ರಶಂಸೆಗಳಿಗೆ ತದ್ವಿರುದ್ಧವಾಗಿವೆ.
ಕೋಲ್ಕತಾ ಮೂಲದ ಸಬರ್ ಇನ್ಸ್ಟಿಟ್ಯೂಟ್ ಬಿಡುಗಡೆಗೊಳಿಸಿರುವ ದತ್ತಾಂಶಗಳಂತೆ ಎಸ್‌ಐಆರ್ ಬಳಿಕ ಪಶ್ಚಿಮ ಬಂಗಾಲದ ಮತದಾರರ ಪಟ್ಟಿಗಳಿಂದ ಅಳಿಸಲಾಗಿರುವ ಮತದಾರರ ಪೈಕಿ ಶೇ.61.8ರಷ್ಟು ಮಹಿಳೆಯರಾಗಿದ್ದಾರೆ. ಅಂದರೆ ಎ.23 ಮತ್ತು ಎ.29ರ ಮತದಾನಗಳಲ್ಲಿ 61,93,386 ಅರ್ಹ ಮಹಿಳಾ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗಿದ್ದಾರೆ. ಮುಸ್ಲಿಮರು,ಪರಿಶಿಷ್ಟ ಪಂಗಡಗಳು ಮತ್ತು ಮತುವಾಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ಹೆಚ್ಚಿನ ಮಹಿಳೆಯರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದೂ ಸಬರ್ ವರದಿಯು ಎತ್ತಿ ತೋರಿಸಿತ್ತು.
ಭಾರತವು ಈಗ ಚುನಾವಣಾ ಪ್ರಜಾಪ್ರಭುತ್ವ ಹಂತದಿಂದ ಚುನಾವಣಾ ನಿರಂಕುಶಾಧಿಕಾರ ಹಂತಕ್ಕೆ ಜಾರುತ್ತಿದೆ ಎಂದು ಬೆಟ್ಟು ಮಾಡಿರುವ ಅಂತರರಾಷ್ಟ್ರೀಯ ಮಾಧ್ಯಮಗಳು, ಮೋದಿ ಆಡಳಿತದಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವವು ಕುಸಿಯುತ್ತಿದೆ ಎಂದು ಕಳವಳಗಳನ್ನು ವ್ಯಕ್ತಪಡಿಸಿವೆ.

