ನಾಸಿಕ್: ಇಲ್ಲಿನ ಟಿಸಿಎಸ್ ಕಂಪನಿಯಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಮತ್ತು ಬಲವಂತದ ಮತಾಂತರ ಪ್ರಕರಣದ ಆರೋಪಿಯಾಗಿರುವ ಕಂಪನಿಯ ಮಹಿಳಾ ಉದ್ಯೋಗಿಯೊಬ್ಬರು ತಾನು ಗರ್ಭಿಣಿ ಎಂಬ ಆಧಾರದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ತನ್ನ ವಿರುದ್ಧದ ಪ್ರಕರಣ ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಯನ್ನು ಹೊಂದಿರುವುದರಿಂದ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಆರೋಪಿ ನಿದಾ ಖಾನ್ ಅವರು ಸಲ್ಲಿಸಿರುವ ಅರ್ಜಿಯ ಕುರಿತು ನಾಸಿಕ್ ಸೆಷನ್ಸ್ ನ್ಯಾಯಾಲಯ ಸೋಮವಾರ ವಿಚಾರಣೆ ನಡೆಸಲಿದೆ.
'ಖಾನ್ ಅವರು ಬಲವಂತದ ಮತಾಂತರ ಪ್ರಕರಣದಲ್ಲಿ ಮಾತ್ರ ಆರೋಪಿಯಾಗಿದ್ದಾರೆ' ಎಂದು ನಾಸಿಕ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ನಿದಾ ಖಾನ್ ಮಾನವ ಸಂಪನ್ಮೂಲ ವಿಭಾಗದ ಮ್ಯಾನೇಜರ್ ಆಗಿರಲಿಲ್ಲ. ಅವರು ಕಂಪನಿಯಲ್ಲಿ ಯಾವುದೇ ಪ್ರಮುಖ ಹುದ್ದೆ ಹೊಂದಿರಲಿಲ್ಲ' ಎಂದು ಟಿಸಿಎಸ್ ಶುಕ್ರವಾರ ಸ್ಪಷ್ಟಪಡಿಸಿದೆ.
'ಪ್ರಕರಣ ಸಂಬಂಧ ಯಾರೂ ಈವರೆಗೆ ಆಂತರಿಕ ದೂರನ್ನು ನೀಡಿಲ್ಲ' ಎಂದು ಟಿಸಿಎಸ್ ಹೇಳಿದೆ.
'ತಲೆಮರೆಸಿಕೊಂಡಿರುವ ನಿದಾ ಖಾನ್ ಪತ್ತೆಗಾಗಿ ನಾಸಿಕ್ ಅಪರಾಧ ವಿಭಾಗದ ಪೊಲೀಸರು ಮುಂಬ್ರಾದಲ್ಲಿ ಶೋಧ ನಡೆಸುತ್ತಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.
ಟಿಸಿಎಸ್ ಕಚೇರಿಯಲ್ಲಿನ ಕಿರಿಯ ಮಹಿಳಾ ಉದ್ಯೋಗಿಗಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಬಲವಂತದ ಮತಾಂತರಕ್ಕೆ ಸಂಬಂಧಿಸಿ ದಾಖಲಾಗಿರುವ ಒಂಬತ್ತು ಪ್ರಕರಣಗಳನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ. ಈಗಾಗಲೇ ಟಿಸಿಎಸ್‌ನ ಎಂಟು ಉದ್ಯೋಗಿಗಳ ಬಂಧನವಾಗಿದೆ.
ಮದುವೆಯಾಗುವುದಾಗಿ ನಂಬಿಸಿದ್ದ ಆರೋಪಿ
ಪ್ರಕರಣ ಆರೋಪಿಗಳಲ್ಲಿ ಒಬ್ಬರು ನಾಲ್ಕು ವರ್ಷಗಳ ಹಿಂದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಮದುವೆಯಾಗುವುದಾಗಿ ವಂಚಿಸಿದ್ದಾರೆ ಮತ್ತು ಕೆಲಸದ ಸ್ಥಳದಲ್ಲಿ ತನ್ನ ಧರ್ಮಕ್ಕೆ ಅವಮಾನ ಮಾಡಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದರು ಎಂದು ಸಂತ್ರಸ್ತೆಯೊಬ್ಬರು ಆರೋಪಿಸಿದ್ದಾರೆ.
'ಸಂತ್ರಸ್ತೆಯು ತನ್ನ ಕಾಲೇಜಿನ ಸಹಪಾಠಿಯಾಗಿದ್ದ ಆರೋಪಿಯನ್ನು ನಾಲ್ಕು ವರ್ಷಗಳ ಹಿಂದೆ ಭೇಟಿಯಾಗಿದ್ದರು. ಈ ವೇಳೆ ಆರೋಪಿಯು ಟಿಸಿಎಸ್‌ನಲ್ಲಿ ಉದ್ಯೋಗ ಪಡೆಯಲು ಸಹಾಯ ಮಾಡುವುದಾಗಿ ಹೇಳಿದ್ದರು' ಎಂದು ಸಂತ್ರಸ್ತೆಯು ನೀಡಿರುವ ದೂರಿಗೆ ಸಂಬಂಧಿಸಿದ ಪ್ರಾಥಮಿಕ ವರದಿಯಲ್ಲಿ ಉಲ್ಲೇಖವಾಗಿದೆ.
2022 ಜುಲೈನಲ್ಲಿ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯು ಮದುವೆಯಾಗುವುದಾಗಿ ಮಾತು ಕೊಟ್ಟಿದ್ದರು. ಬಳಿಕ ಆರೋಪಿಯು ಕೆಲಸ ಮಾಡುತ್ತಿದ್ದ ಟಿಸಿಎಸ್ ಕಂಪನಿಗೆ ಸಂತ್ರಸ್ತೆಯು ಸೇರಿದ್ದರು. ಆರೋಪಿಗೆ ಮದುವೆಯಾಗಿ ಇಬ್ಬರು ಮಕ್ಕಳು ಇರುವ ಬಗ್ಗೆ ಅವರ ಪತ್ನಿಯ ಮೂಲಕ ಸಂತ್ರಸ್ತೆಗೆ ತಿಳಿದಿತ್ತು.
'ಆರೋಪಿ ಮತ್ತು ಇತರ ಇಬ್ಬರು ಸಹೊದ್ಯೋಗಿಗಳು ಪದೇ ಪದೇ ಕಂಪನಿ ಕ್ಯಾಂಟಿನ್‌ನಲ್ಲಿ ಭೇಟಿಯಾಗಿ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡುತ್ತಿದ್ದರು. ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹಾಕುತ್ತಿದ್ದರು' ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

