ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಕೊನೆ ಹಂತದ ಮತದಾನ ಆರಂಭವಾಗಿದೆ. ಸಂಜೆ 7 ಗಂಟೆಯವರೆಗೆ ಶೇ 91ರಷ್ಟು ಮತದಾನವಾಗಿದೆ.
142 ಕ್ಷೇತ್ರಗಳಲ್ಲಿ ನಿನ್ನೆ (ಏ.29) ಮತದಾನ ನಡೆದಿದೆ.
ಪಶ್ಚಿಮ ಬಂಗಾಳ ಚುನಾವಣೆಯ ಪ್ರಮುಖ ಕ್ಷೇತ್ರಗಳು ಎಂದೇ ಗುರುತಿಸಿಕೊಂಡಿರುವ ಕೋಲ್ಕತ್ತ, ಉತ್ತಮ ಮತ್ತು ದಕ್ಷಿಣ 24 ಪರಗಣ, ಹೂಗ್ಲಿ, ಹೌರಾ, ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ.
ಒಟ್ಟು 3.21 ಕೋಟಿ ಮತದಾರರಿದ್ದಾರೆ. ಅದರಲ್ಲಿ 1.57 ಕೋಟಿ ಮಹಿಳೆಯರು, 792 ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ. 41,001 ಮತಗಟ್ಟೆಗಳಲ್ಲಿ ಮತಚಲಾವಣೆಯಾಗಲಿದೆ.
2021ರ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದ 142 ಕ್ಷೇತ್ರಗಳಲ್ಲಿ 123ರಲ್ಲಿ ಟಿಎಂಸಿ ಗೆಲುವು ಸಾಧಿಸಿತ್ತು. ಬಿಜೆಪಿ ಕೇವಲ 18 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಆದರೆ ಈ ಬಾರಿ ಟಿಎಂಸಿ ಮತ್ತು ಬಿಜೆಪಿ ನಡುವೆ ನಿಕಟ ಪೈಪೋಟಿಯಿದೆ.
ಎರಡನೇ ಹಂತದ ಮತದಾನದ ವೇಳೆ ಕೆಲವೆಡೆ ಘರ್ಷಣೆ ಹಾಗೂ ಹಿಂಸಾಚಾರದ ಘಟನೆಗಳು ವರದಿಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಏ.23ರಂದು ಮೊದಲ ಹಂತದ ಮತದಾನ ಆಗಿತ್ತು. ಅದರಲ್ಲಿ ಶೇ 93.19ರಷ್ಟು ಮತದಾನವಾಗಿತ್ತು. ಮೇ 4ರಂದು ಮತ ಎಣಿಕೆ ನಡೆಯಲಿದೆ.

