HEALTH TIPS

100 ಪ್ರಶ್ನೆಗಳ ಹೋಲಿಕೆ ಆರೋಪ: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ?

ನವದೆಹಲಿ: 2026-27ನೇ ಸಾಲಿನ ವೈದ್ಯಕೀಯ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್-ಯುಜಿ) ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಆರೋಪಗಳನ್ನು ತಳ್ಳಿಹಾಕಿದೆ. 

ಪರೀಕ್ಷೆಗಿಂತ ಮೊದಲು ವಿತರಿಸಲಾದ ಮಾದರಿ ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳು ಅಸಲಿ ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳೊಂದಿಗೆ ಹೋಲಿಕೆಯಾಗುತ್ತಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ತನಿಖೆ ಆರಂಭಿಸಿದೆ.

ಮೇ 3ರಂದು 22.79 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್-ಯುಜಿ ಪರೀಕ್ಷೆ ಎದುರಿಸಿದ್ದರು. ಇದೀಗ ಪರೀಕ್ಷೆಯಲ್ಲಿ ಆಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಮತ್ತೊಮ್ಮೆ ಸಂಶಯದ ಸುಳಿಗೆ ಸಿಲುಕಿಸಿದೆ.

ನೀಟ್-ಯುಜಿ ಪರೀಕ್ಷೆಯನ್ನು ಸಂಪೂರ್ಣ ಭದ್ರತಾ ಶಿಷ್ಟಾಚಾರದ ಅಡಿಯಲ್ಲಿ ನಡೆಸಲಾಗಿದೆ. ಸದ್ಯ ಕೇಳಿಬಂದಿರುವ ಅಕ್ರಮ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಎನ್‌ಟಿಎ ಸ್ಪಷ್ಟನೆ ನೀಡಿದೆ.

ವಿವಾದಕ್ಕೆ ಕಾರಣವೇನು?

'ನೀಟ್-ಯುಜಿ ಪರೀಕ್ಷೆಗೂ ಮೊದಲು ವಿತರಿಸಲಾದ ಕೆಲವು ಪ್ರಶ್ನೆಗಳ ಸೆಟ್‌ಗಳು ಅಸಲಿ ಪ್ರಶ್ನೆ ಪತ್ರಿಕೆಯೊಂದಿಗೆ ಸಾಮ್ಯತೆ ಹೊಂದಿರುವ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ರಾಜಸ್ಥಾನ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಪರೀಕ್ಷೆಗೆ ಕೆಲವು ದಿನಗಳ ಮೊದಲು ಸುಮಾರು 400 ಪ್ರಶ್ನೆಗಳಿರುವ ಪ್ರತಿಗಳನ್ನು ವಿತರಿಸಲಾಗಿತ್ತು. ಇವುಗಳಲ್ಲಿ ಜೀವವಿಜ್ಞಾನ ಮತ್ತು ರಸಾಯನವಿಜ್ಞಾನದ 100ಕ್ಕೂ ಹೆಚ್ಚು ಪ್ರಶ್ನೆಗಳು ಪರೀಕ್ಷೆಯಲ್ಲಿ ಬಂದ ಪ್ರಶ್ನೆಗಳಿಗೆ ಸಾಕಷ್ಟು ಹೋಲಿಕೆ ಹೊಂದಿದ್ದವು ಎಂದು ವರದಿಯಾಗಿದೆ. ಅಧಿಕಾರಿಗಳು ಇದನ್ನು 'ಗೆಸ್ ಪೇಪರ್' ಅಥವಾ ಕೋಚಿಂಗ್ ಸ್ಟೈಲ್ ಟೆಸ್ಟ್ ಸರಣಿ ಎಂದು ವಿವರಿಸಿದ್ದಾರಾದರೂ, ಅಕ್ರಮದ ಹಿಂದೆ ಸಂಘಟಿತ ಜಾಲವಿರುವ ಸಾಧ್ಯತೆಯನ್ನು ತನಿಖಾಧಿಕಾರಿಗಳು ತಳ್ಳಿಹಾಕಿಲ್ಲ.

ಎನ್‌ಟಿಎ ಹೇಳಿದ್ದೇನು?

ಮೇ 3ರಂದು ನಡೆದ ನೀಟ್-ಯುಜಿ ಪರೀಕ್ಷೆಯು ನಿಗದಿತ ಸಮಯದಂತೆ ಮತ್ತು ವ್ಯಾಪಕವಾದ ಮೇಲ್ವಿಚಾರಣಾ ವ್ಯವಸ್ಥೆಗಳ ಅಡಿಯಲ್ಲಿ ನಡೆದಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ತಿಳಿಸಿದೆ.

ಪ್ರಶ್ನೆ ಪತ್ರಿಕೆಗಳನ್ನು ಜಿಪಿಎಸ್-ಟ್ರ್ಯಾಕ್ ಮಾಡಲಾದ ವಾಹನಗಳಲ್ಲಿ ಸಾಗಿಸಲಾಗಿತ್ತು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಎಐ ಆಧಾರಿತ ಸಿಸಿಟಿವಿ ಮಾನಿಟರಿಂಗ್, ಬಯೋಮೆಟ್ರಿಕ್ ಪರಿಶೀಲನೆ ಮತ್ತು 5G ಜಾಮರ್‌ಗಳನ್ನು ಅಳವಡಿಸಲಾಗಿತ್ತು ಎಂದು ಏಜೆನ್ಸಿ ಹೇಳಿದೆ.

ಪರೀಕ್ಷೆ ಮುಗಿದ ನಾಲ್ಕು ದಿನಗಳ ಬಳಿಕ ಮೇ 7ರಂದು ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಲಭಿಸಿತು. ತಕ್ಷಣವೇ ಪರಿಶೀಲನೆ ನಡೆಸುವಂತೆ ಕೇಂದ್ರ ಸಂಸ್ಥೆಗಳಿಗೆ ತಿಳಿಸಲಾಯಿತು. ನಾವು ತನಿಖೆಗೆ ಬೇಕಾದ ಎಲ್ಲಾ ಪರೀಕ್ಷಾ ಸಂಬಂಧಿತ ದತ್ತಾಂಶ ಮತ್ತು ತಾಂತ್ರಿಕ ನೆರವು ನೀಡುತ್ತಿದ್ದೇವೆ. ಸತ್ಯಾಸತ್ಯತೆ ಶೀಘ್ರದಲ್ಲೇ ಹೊರಬರಲಿದೆ ಎಂದೂ ಎನ್‌ಟಿಎ ತಿಳಿಸಿದೆ.

ಪ್ರಸಕ್ತ ವರ್ಷ 22.79 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 13.32 ಲಕ್ಷ ಮಹಿಳಾ ಅಭ್ಯರ್ಥಿಗಳಿದ್ದರೆ, 9.46 ಲಕ್ಷ ಪುರುಷ ಅಭ್ಯರ್ಥಿಗಳಿದ್ದಾರೆ.

2024ರ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ನಂತರ ಎನ್‌ಟಿಎ ಈ ಬಾರಿ ಪರೀಕ್ಷೆಯು 'ಸೋರಿಕೆ ಮುಕ್ತ' ಎಂದು ಪದೇ ಪದೇ ಹೇಳಿಕೊಂಡಿತ್ತು.

2024ರಲ್ಲಿ ನಡೆದ ವಿವಾದಗಳಿಂದಾಗಿ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ನಂಬಿಕೆ ಕಡಿಮೆಯಾಗಿದ್ದು, ಈಗಿನ ಹೊಸ ಆರೋಪಗಳು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಹೆಚ್ಚಿನ ಆತಂಕ ಮೂಡಿಸಿವೆ.

ಪ್ರಸ್ತುತ ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಶಿಕ್ಷಣ ಸಚಿವಾಲಯದೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries