ಕಾಂಡ್ಲಾ: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಮಧ್ಯದಲ್ಲೇ 20 ಸಾವಿರ ಟನ್ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸಂಗ್ರಹವಿದ್ದ ಹಡಗೊಂದು ಹೊರ್ಮುಜ್ ಜಲಸಂಧಿಯನ್ನು ದಾಟಿ ಗುಜರಾತ್‌ನ ಕಾಂಡ್ಲಾದಲ್ಲಿರುವ ದೀನ್‌ದಯಾಳ್ ಬಂದರಿಗೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕತಾರ್‌ನಿಂದ ಹೊರಟಿದ್ದ ಎಂವಿ ಎಸ್‌ವೈಎಂಐ ಹಡಗು, ಮೇ 13ರಂದು ಹೊರ್ಮುಜ್ ಜಲಸಂಧಿಯನ್ನು ದಾಟಿತ್ತು. ಶನಿವಾರ ರಾತ್ರಿ ಕಾಂಡ್ಲಾ ಬಂದರನ್ನು ತಲುಪಿದೆ ಎಂದು ಹೇಳಿದ್ದಾರೆ.
ಫೆ.28ರಂದು ಇರಾನ್ ಮೇಲೆ ಅಮೆರಿಕ, ಇಸ್ರೇಲ್ ಜಂಟಿ ದಾಳಿ ನಡೆಸಿದ ಬಳಿಕ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ವಾತಾವರಣ ಉಂಟಾಗಿತ್ತು. ಮಾರ್ಚ್ 13ರ ನಂತರ ಭಾರತ ಮೂಲದ 12 ಎಲ್‌ಪಿಜಿ ಟ್ಯಾಂಕರ್ ಇದ್ದ ಹಡಗುಗಳು ಮತ್ತು ಕಚ್ಚಾತೈಲದ ಟ್ಯಾಂಕರ್ ಹೊಂದಿದ್ದ ಒಂದು ಹಡಗು, ಹೊರ್ಮುಜ್ ಜಲಸಂಧಿಯನ್ನು ದಾಟಿ ಬಂದಿವೆ.
ಮೇ 13ರಂದು ಒಮಾನ್ ಕರಾವಳಿಯಲ್ಲಿ ಭಾರತ ಮೂಲದ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆಸಲಾಗಿತ್ತು. ಸೊಮಾಲಿಯಾದಿಂದ ಪ್ರಯಾಣಿಸುತ್ತಿದ್ದ ಆ ಹಡಗಿನಲ್ಲಿದ್ದ ಎಲ್ಲಾ 14 ಸಿಬ್ಬಂದಿಯನ್ನು ಅಲ್ಲಿನ ಅಧಿಕಾರಿಗಳು ರಕ್ಷಿಸಿದ್ದರು. ಆದರೆ, ದಾಳಿಯನ್ನು ಯಾರು ನಡೆಸಿದ್ದಾರೆಂದು ಇದುವರೆಗೂ ತಿಳಿದುಬಂದಿಲ್ಲ.

