ಕನಿಷ್ಠ 100 ಕೋಟಿ ರೂ.ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಒಳಗೊಂಡಿರುವ ಅಪರಾಧದಲ್ಲಿ ನ್ಯಾಯಾಲಯದಿಂದ ಬಂಧನ ವಾರಂಟ್ ಹೊರಡಿಸಲಾಗಿರುವ,ತನ್ನ ವಿರುದ್ಧ ಕ್ರಿಮಿನಲ್ ವಿಚಾರಣೆಯನ್ನು ತಪ್ಪಿಸಿಕೊಳ್ಳಲು ವಿದೇಶಕ್ಕೆ ಪಲಾಯನ ಮಾಡಿರುವ ಅಥವಾ ವಿದೇಶದಲ್ಲಿದ್ದುಕೊಂಡು ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸಲು ಭಾರತಕ್ಕೆ ಮರಳಲು ನಿರಾಕರಿಸುವ ವ್ಯಕ್ತಿಯನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ವ್ಯಾಖ್ಯಾನಿಸಲಾಗಿದೆ.
ಇದೇ ವೇಳೆ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ, ಝಾಕೀರ್ ನಾಯ್ಕ್ ಹಾಗು ಮಹಾದೇವ ಆಯಪ್‌ನ ಪ್ರವರ್ತಕರಾದ ಸೌರಭ್ ಚಂದ್ರಾಕರ್ ಮತ್ತು ರವಿ ಉಪ್ಪಳ ಅವರನ್ನು 'ಎಫ್‌ಇಒ' ಎಂದು ಘೋಷಿಸುವ ನಿರ್ಧಾರಗಳು ನ್ಯಾಯಾಲಯಗಳ ಪರಿಶೀಲನೆಯಲ್ಲಿವೆ ಎಂದು ವರದಿಯು ತಿಳಿಸಿದೆ.
ಈ.ಡಿ. ಶುಕ್ರವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ಈವರೆಗೆ ಎಫ್‌ಇಒ ಕಾಯ್ದೆಯಡಿ 54 ವ್ಯಕ್ತಿಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು,21 ಘೋಷಿತ ಎಫ್‌ಇಒಗಳ ಸುಮಾರು 2,178.34 ಕೋಟಿ ರೂ.ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಪೈಕಿ ಒಂಭತ್ತು ವ್ಯಕಿಗಳು 2025-26 ರಲ್ಲಿ ಎಫ್‌ಪಿಒಗಳೆಂದು ಘೋಷಿಸಲ್ಪಟ್ಟಿದ್ದಾರೆ.
ವರದಿಯ ಪ್ರಕಾರ ಕಳೆದ ಎರಡು ವಿತ್ತವರ್ಷಗಳಲ್ಲಿ ಎಫ್‌ಇಒ ಕಾಯ್ದೆಯಡಿ ಈ.ಡಿ.ಗಮನಾರ್ಹ ಪ್ರಮಾಣದಲ್ಲಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಎಫ್‌ಇಒಗಳನ್ನು ಘೋಷಿಸಿದೆ. ಇದು ಕಾನೂನು ಕ್ರಮವನ್ನು ತಪ್ಪಿಸಿಕೊಳ್ಳಲು ಭಾರತದಿಂದ ಪರಾರಿಯಾಗುವವರ ವಿರುದ್ಧ ತ್ವರಿತ ಕ್ರಮವನ್ನು ಕೈಗೊಳ್ಳಲು ಈ.ಡಿ. ಬದ್ಧವಾಗಿದೆ ಎನ್ನುವುದನ್ನು ತೋರಿಸುತ್ತಿದೆ ಎಂದು ವರದಿಯು ಹೇಳಿದೆ.
ಭಂಡಾರಿಯನ್ನು ನಿದರ್ಶನವಾಗಿ ಉಲ್ಲೇಖಿಸಿರುವ ವರದಿಯು, ಈ.ಡಿ.ಯು ಡಿ.13,2019ರಂದು ಎಫ್‌ಇಒ ಕಾಯ್ದೆಯಡಿ ಅರ್ಜಿಯನ್ನು ಸಲ್ಲಿಸಿದ ಬಳಿಕ ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ಕಳೆದ ವರ್ಷ ಅವರನ್ನು ಎಫ್‌ಇಒ ಎಂದು ಘೋಷಿಸಿತ್ತು. 2016ರಲ್ಲಿ ಆದಾಯ ತೆರಿಗೆ ದಾಳಿಗಳ ಬಳಿಕ ಭಂಡಾರಿ ನೇಪಾಳ ಮೂಲಕ ಲಂಡನ್‌ಗೆ ಪರಾರಿಯಾಗಿದ್ದರು. ಅ.2017ರಲ್ಲಿ ಅವರ ವಿರುದ್ಧ ಇಂಟರ್‌ಪೋಲ್ ನೋಟಿಸ್ ಹೊರಡಿಸಲಾಗಿತ್ತು ಎಂದು ಹೇಳಿದೆ.
ಭಂಡಾರಿ ಅಘೋಷಿತ 655 ಕೋಟಿ ರೂ.ಗಳ ವಿದೇಶಿ ಆದಾಯ ಮತ್ತು 100 ಕೋಟಿ ರೂ.ಗೂ ಅಧಿಕ ಮೌಲ್ಯದ ವಿದೇಶಿ ಆಸ್ತಿಗಳನ್ನು ಹೊಂದಿದ್ದನ್ನು ತನಿಖೆಗಳು ಬಹಿರಂಗಗೊಳಿಸಿದ್ದವು. 2009 ಮತ್ತು 2016ರ ನಡುವೆ ಅವರು ವಿದೇಶಿ ಶೆಲ್ ಕಂಪನಿಗಳ ಖಾತೆಗಳಲ್ಲಿ ಭಾರೀ ಪ್ರಮಾಣದ ಹಣವನ್ನು ಠೇವಣಿ ಇರಿಸಿದ್ದರು ಹಾಗೂ ಯುಎಇ ಮತ್ತು ಬ್ರಿಟನ್‌ಗಳಲ್ಲಿ ಆಸ್ತಿಗಳಲ್ಲಿ ಹೂಡಿಕೆಗಳನ್ನು ಮಾಡಿದ್ದರು. ಈ.ಡಿ.ಅವರ ವಿರುದ್ಧ 2020ರಲ್ಲಿ ಪ್ರಾಸಿಕ್ಯೂಷನ್ ದೂರನ್ನು (ಪಿಸಿ) ಮತ್ತು 2023ರಲ್ಲಿ ಪೂರಕ ಪಿಸಿಯನ್ನು ಸಲ್ಲಿಸಿತ್ತು. ಈ.ಡಿ. ಈಗ ದಿಲ್ಲಿಯ ರೌಸ್ ಅವೆನ್ಯೂದ ವಿಶೇಷ ಪಿಎಂಎಲ್ ಎ ನ್ಯಾಯಾಲಯದಲ್ಲಿ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೋರಿ ಅರ್ಜಿ ಸಲ್ಲಿಸಿದೆ ಎಂದೂ ವರದಿಯು ತಿಳಿಸಿದೆ.

