ನವದೆಹಲಿ: ಈ ತಿಂಗಳ ಮೂರನೇ ತಾರೀಕಿನಂದು ನಡೆದ ನೀಟ್-ಯುಜಿ 2026 ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು, ತಾವು ಪಾವತಿಸಿದ ಶುಲ್ಕವನ್ನು ಹಿಂಪಡೆಯುವುದಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಶನಿವಾರ ವೆಬ್‌ಸೈಟ್ ಪೋರ್ಟಲ್ ಒಂದನ್ನು ಆರಂಭಿಸಿದೆ.
ಪರೀಕ್ಷಾ ಶುಲ್ಕ ಮರುಪಾವತಿ ಪ್ರಕ್ರಿಯೆಗಾಗಿ ಅಭ್ಯರ್ಥಿಗಳು ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸಬೇಕೆಂದು ಎನ್‌ಟಿಎ ಸೂಚಿಸಿದೆ.
2026ರ ಮೇ 12ರಂದು ಈ ಬಗ್ಗೆ ಸಾರ್ವಜನಿಕ ನೋಟಿಸ್ ಒಂದನ್ನು ಹೊರಡಿಸಿತ್ತು. ಶುಲ್ಕ ಮರುಪಾವತಿ ಪ್ರಕ್ರಿಯೆಯನ್ನು ಉಪಕ್ರಮಿಸಲು ಅಭ್ಯರ್ಥಿಗಳು ನೀಟ್(ಯುಜಿ)-2026 ನೋಂದಣಿ ಪೋರ್ಟಲ್‌ಗೆ ಲಾಗಿನ್ ಆಗಬೇಕು ಹಾಗೂ ನಿರ್ದಿಷ್ಟ ಶುಲ್ಕ ಮರುಪಾವತಿ ಲಿಂಕ್ ಮೂಲಕ ವಿವರಗಳನ್ನು ಸಲ್ಲಿಸಬೇಕೆಂದು ಎಂದು ಎನ್‌ಟಿಎ ಹೇಳಿಕೆ ತಿಳಿಸಿದೆ.
ಅಭ್ಯರ್ಥಿಗಳು 2026ರ ಮೇ 22ರಿಂದ ಮೇ 27ರ ರಾತ್ರಿ 11:50ರವರೆಗೆ ಈ ರಿಫಂಡ್‌ಗಾಗಿ ವಿವರಗಳನ್ನು ಸಲ್ಲಿಸಬಹುದಾಗಿದೆ ಎಂದು ಎನ್‌ಟಿಎ ತಿಳಿಸಿದೆ.
ಮೇ 3ರಂದು ದೇಶಾದ್ಯಂತ 5432 ಕೇಂದ್ರಗಳಲ್ಲಿ ನಡೆದ ನೀಟ್ ಪರೀಕ್ಷೆಗೆ 22.05 ಲಕ್ಷ ಮಂದಿ ಬರೆದಿದ್ದರು. ಪ್ರಶ್ನಾ ಪತ್ರಿಕೆ ಸೋರಿಕೆಯಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಪಡಿಸಲಾಗಿದ್ದು, ಮರುಪರೀಕ್ಷೆಯನ್ನು ಜೂನ್ 21ಕ್ಕೆ ನಿಗದಿಪಡಿಸಲಾಗಿದೆ.

