2016ರ ನವೆಂಬರ್ 8ರ ಸಂಜೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೂರದರ್ಶನದ ಮೂಲಕ ಇಡೀ ದೇಶವನ್ನುದ್ದೇಶಿಸಿ ಮಾತನಾಡುತ್ತಾ, ಆಧುನಿಕ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಅನಿರೀಕ್ಷಿತ ಮತ್ತು ಆಘಾತಕಾರಿ ಆರ್ಥಿಕ ನಿರ್ಧಾರವೊಂದನ್ನು ಪ್ರಕಟಿಸಿದರು. ಕೇವಲ ನಾಲ್ಕು ಗಂಟೆಗಳ ಮುನ್ಸೂಚನೆಯೊಂದಿಗೆ, ದೇಶದಲ್ಲಿ ಚಲಾವಣೆಯಲ್ಲಿದ್ದ ಶೇಕಡಾ 86 ರಷ್ಟು ಕರೆನ್ಸಿ ನೋಟುಗಳನ್ನು ರಾತ್ರೋರಾತ್ರಿ ಅಮಾನ್ಯಗೊಳಿಸಲಾಯಿತು.
ಕಪ್ಪುಹಣದ ನಿರ್ಮೂಲನೆ, ಭಯೋತ್ಪಾದನೆಗೆ ಲಗಾಮು ಮತ್ತು ನಗದು ರಹಿತ ಆರ್ಥಿಕತೆಯನ್ನು ಉತ್ತೇಜಿಸುವುದು ನೋಟು ಅಮಾನ್ಯೀಕರಣದ ಪ್ರಮುಖ ಉದ್ದೇಶಗಳಾಗಿದ್ದವು. ಉದ್ದೇಶಗಳೇನೋ ಮಹತ್ವಾಕಾಂಕ್ಷೆಯಿಂದ ಕೂಡಿದ್ದವು. ಆದರೆ ಅದರ ಫಲಿತಾಂಶ ಮಾತ್ರ ಅತ್ಯಂತ ವಿನಾಶಕಾರಿಯಾಗಿತ್ತು. ಆದರೆ, ಆ ಆರ್ಥಿಕ ದುರಂತದ ಬೆನ್ನಲ್ಲೇ ಮೋದಿ ಸರ್ಕಾರ ಪ್ರದರ್ಶಿಸಿದ 'ಭಾಷಣ ಕಲೆ ಮತ್ತು ಸಂವಹನ ತಂತ್ರ', ಬಳಿಕ ಎಲ್ಲಾ ಬಿಕ್ಕಟ್ಟುಗಳ ಸಂದರ್ಭದಲ್ಲೂ ಮೋದಿ ಯುಗದ ವಿಶಿಷ್ಟ ರಾಜಕೀಯ ಶೈಲಿಯಾಗಿ ಮಾರ್ಪಟ್ಟಿತು. ಅದುವೇ ಸರ್ಕಾರದ ತಪ್ಪು ನಿರ್ಧಾರಗಳಿಂದ ಉಂಟಾದ ಸಾರ್ವಜನಿಕ ಸಂಕಷ್ಟಗಳನ್ನು, ದೇಶಕ್ಕಾಗಿ ಜನರು ಸ್ವಯಂಪ್ರೇರಿತರಾಗಿ ಮಾಡುವ 'ರಾಷ್ಟ್ರೀಯ ತ್ಯಾಗ' ಎಂಬ ನಿರೂಪಣೆಯಾಗಿ ಪರಿವರ್ತಿಸುವುದು.
ಅಂದು ಪ್ರಧಾನಿ ಮೋದಿ ಮಾಡಿದ ನೋಟು ಅಮಾನ್ಯೀಕರಣದ ಭಾಷಣದಲ್ಲೇ ಈ ನಿರೂಪಣೆಯ ಮೂಲ ಮಾದರಿ ಸ್ಪಷ್ಟವಾಗಿ ಅಡಗಿತ್ತು. "ಪ್ರಾಮಾಣಿಕ ನಾಗರಿಕರು ತಾತ್ಕಾಲಿಕ ತೊಂದರೆಗಳನ್ನು ಎದುರಿಸಬೇಕಾಗಬಹುದು" ಎಂಬುದನ್ನು ಒಪ್ಪಿಕೊಂಡ ತಕ್ಷಣವೇ, ಮೋದಿಯವರು ದೇಶಪ್ರೇಮದ ಸ್ಪೂರ್ತಿಯನ್ನು ಮುನ್ನೆಲೆಗೆ ತಂದರು. "ದೇಶದ ಒಳಿತಿಗಾಗಿ ಸಾಮಾನ್ಯ ನಾಗರಿಕರು ಯಾವಾಗಲೂ ಕಷ್ಟಗಳನ್ನು ಎದುರಿಸಲು ಮತ್ತು ತ್ಯಾಗ ಮಾಡಲು ಸಿದ್ಧರಾಗಿರುತ್ತಾರೆ ಎಂಬುದನ್ನು ಇತಿಹಾಸ ನಮಗೆ ತೋರಿಸಿಕೊಟ್ಟಿದೆ" ಎಂದು ಅವರು ಹೇಳಿದರು.
ತಮ್ಮ ಮಾತಿಗೆ ಪೂರಕವಾಗಿ ಐPಉ ಸಬ್ಸಿಡಿಯನ್ನು ಸ್ವಯಂಪ್ರೇರಿತರಾಗಿ ಬಿಟ್ಟುಕೊಟ್ಟ ಬಡ ವಿಧವೆ, ದೇಶಕ್ಕಾಗಿ ಪಿಂಚಣಿ ಹಣ ನೀಡಿದ ಶಾಲಾ ಶಿಕ್ಷಕ ಮತ್ತು ಮೇಕೆಗಳನ್ನು ಮಾರಿ ದೇಶಸೇವೆಗೆ ನಿಂತ ಆದಿವಾಸಿ ತಾಯಿಯ ಉದಾಹರಣೆಗಳನ್ನು ನೀಡಿದರು. ಆ ಬಳಿಕ, "ಭ್ರಷ್ಟಾಚಾರ, ಕಪ್ಪುಹಣ, ನಕಲಿ ನೋಟುಗಳು ಮತ್ತು ಭಯೋತ್ಪಾದನೆಯ ವಿರುದ್ಧದ ಈ ಮಹಾ ಯುದ್ಧದಲ್ಲಿ ನಮ್ಮ ದೇಶದ ಜನತೆ ಕೆಲವು ದಿನಗಳ ಕಾಲ ಈ ಕಷ್ಟಗಳನ್ನು ಸಹಿಸಿಕೊಳ್ಳುವುದಿಲ್ಲವೇ?" ಎಂಬ ಭಾವನಾತ್ಮಕ ಪ್ರಶ್ನೆಯನ್ನು ದೇಶದ ಮುಂದಿಟ್ಟರು.
ಯಾವುದೇ ಪೂರ್ವಸಿದ್ಧತೆಯಿಲ್ಲದೆ ದೇಶದ ಮೇಲೆ ಹೇರಲಾದ ನೀತಿಯೊಂದರ ಆಘಾತಕಾರಿ ಪರಿಣಾಮಗಳನ್ನು ಭರಿಸುವಂತೆ ಮತ್ತು ಅದನ್ನು ದೇಶಪ್ರೇಮದ ಪರಮೋಚ್ಛ ಭಕ್ತಿ ಎಂದು ಒಪ್ಪಿಕೊಳ್ಳುವಂತೆ ಇಡೀ ದೇಶಕ್ಕೆ ಕರೆ ನೀಡಲಾಯಿತು.
ಆದರೆ, ಅದರ ಪರಿಣಾಮಗಳು ಮಾತ್ರ ಅತ್ಯಂತ ಗಂಭೀರವಾಗಿದ್ದವು. ಚಲಾವಣೆಯಿಂದ ಹಿಂಪಡೆಯಲಾದ ನೋಟುಗಳ ಪೈಕಿ ಶೇಕಡಾ 99.3 ರಷ್ಟು ನೋಟುಗಳು ಮತ್ತೆ ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಎಂಬುದನ್ನು ಸ್ವತಃ ಭಾರತೀಯ ರಿಸರ್ವ್ ಬ್ಯಾಂಕ್ನ ದತ್ತಾಂಶಗಳೇ ದೃಢಪಡಿಸಿದವು. ಇದರರ್ಥ, "ಕಪ್ಪುಹಣವನ್ನು ಚೀಲಗಳಲ್ಲಿ ತುಂಬಿಡಲಾಗಿದೆ" ಎಂದು ಮೋದಿಯವರು ಯಾರನ್ನು ಬಿಂಬಿಸಿದ್ದರೋ, ಆ ಕಪ್ಪುಹಣವು ಬಹುಪಾಲು ಅಧಿಕೃತ ಮಾರ್ಗಗಳ ಮೂಲಕ ಅಥವಾ ಅನೌಪಚಾರಿಕ ಜಾಲಗಳ ಮೂಲಕ ಮತ್ತೆ ಬ್ಯಾಂಕ್ ಖಾತೆಗಳನ್ನು ಸೇರಿಕೊಂಡಿತ್ತು.
ಭಾರತದಲ್ಲಿ ಅಕ್ರಮ ಸಂಪತ್ತು ಹೆಚ್ಚಾಗಿ ನಗದು ರೂಪದಲ್ಲಿ ಇರುವುದಿಲ್ಲ. ಬದಲಿಗೆ ಅದು ರಿಯಲ್ ಎಸ್ಟೇಟ್, ಚಿನ್ನ ಮತ್ತು ವಿದೇಶಿ ಬ್ಯಾಂಕ್ ಖಾತೆಗಳಲ್ಲಿ ಇರುತ್ತದೆ. ಹಾಗಾಗಿ ನೋಟು ಅಮಾನ್ಯೀಕರಣವು ಕಪ್ಪುಹಣದ ನಿರ್ಮೂಲನೆಗೆ ಯಾವುದೇ ಅರ್ಥಪೂರ್ಣ ಕೊಡುಗೆ ನೀಡಲಿಲ್ಲ ಎಂಬುದು ಆರ್ಥಿಕ ತಜ್ಞರು ಮತ್ತು ಶೈಕ್ಷಣಿಕ ವಲಯದ ಸರ್ವಾನುಮತದ ಅಭಿಪ್ರಾಯವಾಗಿತ್ತು.
►ಆದರೆ, ನೋಟು ಅಮಾನ್ಯೀಕರಣವು ಸಾಧಿಸಿದ್ದಾದರೂ ಏನನ್ನು?
ಅದು ಭಾರತದ ಬಹುಪಾಲು ಕಾರ್ಮಿಕರಿಗೆ ಉದ್ಯೋಗ ನೀಡಿದ್ದ ಅನೌಪಚಾರಿಕ ಆರ್ಥಿಕ ವಲಯವನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಿತು. ಎಟಿಎಂ ಸರತಿ ಸಾಲುಗಳಲ್ಲಿ ಮತ್ತು ಅದರ ಬೆನ್ನಲ್ಲೇ ಸೃಷ್ಟಿಯಾದ ಗೊಂದಲದ ವಾತಾವರಣದಲ್ಲಿ ಡಝನ್ಗಟ್ಟಲೆ ಜನರು ಪ್ರಾಣ ಕಳೆದುಕೊಂಡರು. ರಾಬಿ (ಹಿಂಗಾರು) ಬೆಳೆಗೆ ಬಿತ್ತನೆ ಬೀಜಗಳನ್ನು ಖರೀದಿಸಲು ಸಾಧ್ಯವಾಗದೆ ರೈತರು ಕಂಗಾಲಾದರು. ನಗದನ್ನೇ ನೆಚ್ಚಿಕೊಂಡಿದ್ದ ಪೂರೈಕೆ ಸರಪಳಿಗಳು ಧ್ವಂಸಗೊಂಡಿದ್ದರಿಂದ ದಿನಗೂಲಿ ಕಾರ್ಮಿಕರು ಕೆಲಸ ಕಳೆದುಕೊಂಡರು. ಭಿವಾಂಡಿಯಂತಹ ಪ್ರಮುಖ ಜವಳಿ ಹಬ್ಗಳಲ್ಲಿದ್ದ ಸಣ್ಣ ಪವರ್ಲೂಮ್ ಘಟಕಗಳು ಸಾಮೂಹಿಕವಾಗಿ ಮುಚ್ಚಲ್ಪಟ್ಟವು. ಅಲ್ಲಿಯವರೆಗೆ ಶೇಕಡಾ 8.2 ರಷ್ಟಿದ್ದ ದೇಶದ ಪ್ರಗತಿ ದರವು ಗಣನೀಯವಾಗಿ ಕುಸಿತ ಕಂಡಿತು.
ಅದೇ ವರ್ಷದ ಹೊಸ ವರ್ಷದ ಮುನ್ನಾದಿನದಂದು (ಡಿಸೆಂಬರ್ 31), ಮೋದಿಯವರು ಮತ್ತೊಮ್ಮೆ ದೇಶವನ್ನುದ್ದೇಶಿಸಿ ಮಾತನಾಡುತ್ತಾ ಈ ಇಡೀ ಪ್ರಕ್ರಿಯೆಯನ್ನು "ಒಂದು ಐತಿಹಾಸಿಕ ಶುದ್ಧೀಕರಣ ಯಜ್ಞ" ಎಂದು ಬಣ್ಣಿಸಿದರು. ಅಪಾರ ತಾಳ್ಮೆಯಿಂದ ಕಷ್ಟಗಳನ್ನು ಸಹಿಸಿಕೊಂಡಿದ್ದಕ್ಕಾಗಿ ದೇಶದ ಜನತೆಯನ್ನು ಶ್ಲಾಘಿಸಿದ ಅವರು, ತ್ಯಾಗದ ಪರಿಕಲ್ಪನೆಗೆ ದೇಶದ ಜನರು ಹೊಸ ವ್ಯಾಖ್ಯಾನ ನೀಡಿದ್ದಾರೆ ಎಂದರು. ಬಡವರ ಅಸಹಾಯಕ ಸಂಕಷ್ಟಗಳನ್ನು ಅತ್ಯಂತ ಚಾಣಾಕ್ಷ ಪದಬಳಕೆಯ ಮೂಲಕ 'ನಾಗರಿಕ ಸದ್ಗುಣ'ವನ್ನಾಗಿ ಪರಿವರ್ತಿಸಲಾಯಿತು.
ಇದಾದ ಕೇವಲ ಏಳೇ ತಿಂಗಳುಗಳಲ್ಲಿ 'ಸರಕು ಮತ್ತು ಸೇವಾ ತೆರಿಗೆ' (ಉSಖಿ) ವ್ಯವಸ್ಥೆಯನ್ನು ತರಲಾಯಿತು. ತಾಂತ್ರಿಕ ಮತ್ತು ಆಡಳಿತಾತ್ಮಕ ಮೂಲಸೌಕರ್ಯಗಳು ಕನಿಷ್ಠ ಮಟ್ಟದಲ್ಲೂ ಸಿದ್ಧವಾಗುವ ಮುನ್ನವೇ, 2017ರ ಜುಲೈ 1ರ ಮಧ್ಯರಾತ್ರಿ ಜಿಎಸ್ಟಿಯನ್ನು ಅತ್ಯಂತ ಆತುರವಾಗಿ ಜಾರಿಗೆ ತರಲಾಯಿತು. ವಿವಿಧ ರಾಜ್ಯಗಳ ನಡುವೆ ಮಾತುಕತೆ ನಡೆಸಿ ಒಮ್ಮತಕ್ಕೆ ಬರಲು ದಶಕಗಳೇ ಬೇಕಾಗಿದ್ದ ಮತ್ತು ಅತ್ಯಂತ ಜಾಗರೂಕತೆಯಿಂದ ಹಂತ ಹಂತವಾಗಿ ಜಾರಿಗೊಳಿಸಬೇಕೆಂದು ತಜ್ಞರು ಹೇಳಿದ್ದ ವ್ಯವಸ್ಥೆಯನ್ನು ಕೇವಲ ರಾಜಕೀಯ ಒತ್ತಡಕ್ಕೆ ಮಣಿದು ರಾತ್ರೋರಾತ್ರಿ ಜಾರಿಗೆ ತರಲಾಗಿತ್ತು.
ಜಿಎಸ್ಟಿಯ ನಿಯಮಾವಳಿಗಳ ಪುಸ್ತಕವೇ ನೂರಾರು ಪುಟಗಳಷ್ಟಿತ್ತು. ಕಾಯ್ದೆ ಜಾರಿಯಾಗುವ ಹಿಂದಿನ ರಾತ್ರಿಯವರೆಗೂ ಕೊನೆಕ್ಷಣದ ತಿದ್ದುಪಡಿಗಳನ್ನು ಮಾಡಲಾಗುತ್ತಿತ್ತು. ನಾಲ್ಕು ವಿಭಿನ್ನ ತೆರಿಗೆ ಸ್ಲ್ಯಾಬ್ಗಳು, ಪ್ರತಿ ತಿಂಗಳೂ ಕಡ್ಡಾಯವಾಗಿ ಆನ್ಲೈನ್ನಲ್ಲಿ ಫೈಲ್ ಮಾಡಬೇಕಾದ ಸಂಕೀರ್ಣ ಇನ್ಪುಟ್-ಟ್ಯಾಕ್ಸ್-ಕ್ರೆಡಿಟ್ (Iಟಿಠಿuಣ ಖಿಚಿx ಅಡಿeಜiಣ) ಪ್ರಕ್ರಿಯೆ ಮತ್ತು ಪದೇ ಪದೇ ಕೈಕೊಡುತ್ತಿದ್ದ ಕೇಂದ್ರೀಕೃತ ಸಾಫ್ಟ್ವೇರ್ ಇವೆಲ್ಲವೂ ಒಟ್ಟಾಗಿ ಭಾರತದ ಉದ್ಯೋಗ ರಂಗದ ಬೆನ್ನೆಲುಬಾಗಿದ್ದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ಭಾರಿ ಆರ್ಥಿಕ ಹೊರೆಯನ್ನು ಹೇರಿದವು.
'ಆಲ್ ಇಂಡಿಯಾ ಮ್ಯಾನುಫ್ಯಾಕ್ಚರರ್ಸ್ ಆರ್ಗನೈಸೇಶನ್' ನಡೆಸಿದ ಸಮೀಕ್ಷೆಯ ಪ್ರಕಾರ, ಜಿಎಸ್ಟಿ ಜಾರಿಯಾದ ತಕ್ಷಣದ ತ್ರೈಮಾಸಿಕದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶಗಳು ಶೇಕಡಾ 25 ರಷ್ಟು ಕುಸಿದವು. ಅವರ ಆದಾಯವು ತೀವ್ರವಾಗಿ ಕುಸಿಯಿತು. ಸಣ್ಣ ಕೈಮಗ್ಗ ನೇಕಾರರು, ಸಣ್ಣ ವ್ಯಾಪಾರಿಗಳು ಮತ್ತು ಉತ್ಪಾದಕರಲ್ಲಿ ಹಲವರು ಅನಕ್ಷರಸ್ಥರು ಅಥವಾ ಅರೆ-ಅಕ್ಷರಸ್ಥರಾಗಿದ್ದರು. ಇಂಥವರಿಗೆ ಮೊದಲ ವರ್ಷದಲ್ಲೇ ನೂರಾರು ಬಾರಿ ತಿದ್ದುಪಡಿಗೊಳಗಾದ ಇಂತಹ ಕಠಿಣ ತೆರಿಗೆ ಪದ್ಧತಿಯನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ.
ಆದರೆ, ಈ ಕಟು ವಾಸ್ತವಗಳ ಎದುರು ಪ್ರಧಾನಿ ಮೋದಿಯವರು ದೇಶಕ್ಕೆ ನೀಡಿದ್ದು ಕೇವಲ ಒಂದು ಘೋಷಣೆ: "ಒಂದು ದೇಶ, ಒಂದು ತೆರಿಗೆ" (ಔಟಿe ಓಚಿಣioಟಿ, ಔಟಿe ಖಿಚಿx). 2022ರಲ್ಲಿ ಜಿಎಸ್ಟಿ ಜಾರಿಯಾಗಿ ಐದು ವರ್ಷಗಳು ಪೂರೈಸಿದ ಸಂದರ್ಭದಲ್ಲಿ ಅವರು, "ಜಿಎಸ್ಟಿಯು ಉದ್ಯಮ ಸ್ನೇಹಿ ವಾತಾವರಣವನ್ನು ಹೆಚ್ಚಿಸಿದೆ, 'ಒಂದು ದೇಶ, ಒಂದು ತೆರಿಗೆ'ಯ ಕನಸನ್ನು ನನಸಾಗಿಸಿದೆ" ಎಂದು ಟ್ವೀಟ್ ಮಾಡಿದ್ದರು.
ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳು ಅನುಭವಿಸಿದ ಆಡಳಿತಾತ್ಮಕ ದುಸ್ವಪ್ನವನ್ನು, 'ರಾಷ್ಟ್ರೀಯ ಭಾವೈಕ್ಯತೆ' ಎಂಬ ಭವ್ಯವಾದ ಘೋಷಣೆಯೊಳಗೆ ಹುದುಗಿಸಲಾಯಿತು. ಅವರು ಅನುಭವಿಸಿದ ಆ ಎಲ್ಲಾ ಸಂಕಷ್ಟಗಳನ್ನು, ಒಂದು ಅಖಂಡ ಭಾರತವನ್ನು ನಿರ್ಮಿಸುವ ಹಾದಿಯಲ್ಲಿ ಎದುರಾಗುವ 'ಅನಿವಾರ್ಯ ಅಡೆತಡೆಗಳು' ಎಂದು ಮೋದಿ ಬಿಂಬಿಸಿದರು.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಂತೂ ಈ ರೀತಿಯ ಭಾಷಣ ಹಾಗೂ ಸಂವಹನ ಶೈಲಿಯು ಅತ್ಯಂತ ಗರಿಷ್ಠ ಮಟ್ಟದ ರಾಜಕೀಯ ಲಾಭಕ್ಕೆ ಬಳಕೆಯಾಯಿತು. 2020ರ ಮಾರ್ಚ್ 24ರಂದು, ನೋಟು ಅಮಾನ್ಯೀಕರಣದ ದಿನಗಳನ್ನು ನೆನಪಿಸುವಂತೆ ಕೇವಲ ನಾಲ್ಕು ಗಂಟೆಗಳ ಮುನ್ಸೂಚನೆಯೊಂದಿಗೆ, ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಮೋದಿಯವರು 21 ದಿನಗಳ ಕಾಲ ಇಡೀ ದೇಶಾದ್ಯಂತ ಲಾಕ್ಡೌನ್ ಪ್ರಕಟಿಸಿದರು. ಇದು ಜಗತ್ತಿನಲ್ಲೇ ಅತ್ಯಂತ ಕಠಿಣವಾದ ಲಾಕ್ಡೌನ್ ಕ್ರಮವಾಗಿತ್ತು.
ಯಾವುದೇ ಪೂರ್ವಸಿದ್ಧತೆಯಿಲ್ಲದ ಈ ನಿರ್ಧಾರದಿಂದಾಗಿ ದೇಶದ ಕೋಟ್ಯಂತರ ವಲಸೆ ಕಾರ್ಮಿಕರು ಎದುರಿಸಬೇಕಾಗಿ ಬಂದ ಮಾನವೀಯ ಬಿಕ್ಕಟ್ಟು ಅತ್ಯಂತ ಭೀಕರವಾಗಿತ್ತು. ನಗರಗಳಲ್ಲಿ ಕೂಲಿ, ಆಶ್ರಯ ಅಥವಾ ಸಾರ್ವಜನಿಕ ಸಾರಿಗೆಯೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ ಒಂದು ಕೋಟಿಗೂ ಹೆಚ್ಚು ವಲಸೆ ಕಾರ್ಮಿಕರು, ಹೆದ್ದಾರಿಗಳ ಮೂಲಕ ತಮ್ಮ ತಮ್ಮ ಹಳ್ಳಿಗಳತ್ತ ನಡೆಯಲು ಶುರುಮಾಡಿದರು. ಅವರಲ್ಲಿ ಕೆಲವರು ನೂರಾರು ಕಿಲೋಮೀಟರ್ಗಳಷ್ಟು ದೂರವನ್ನು ನಡೆದೇ ಕ್ರಮಿಸಬೇಕಾಯಿತು. ಈ ಭೀಕರ ಪ್ರಯಾಣದ ಹಾದಿಯಲ್ಲೇ 240ಕ್ಕೂ ಹೆಚ್ಚು ಕಾರ್ಮಿಕರು ರಸ್ತೆಯಲ್ಲೇ ಪ್ರಾಣ ಕಳೆದುಕೊಂಡರು. ಯಾವುದೇ ಅಧಿಕೃತ ಭದ್ರತೆಯೂ ಇಲ್ಲದ ವಿಶಾಲವಾದ ಅನೌಪಚಾರಿಕ ಕಾರ್ಮಿಕ ವರ್ಗದ ಶ್ರಮದ ಮೇಲೆಯೇ ಕಟ್ಟಲಾಗಿದ್ದ ಭಾರತದ ನಗರ ಆರ್ಥಿಕತೆಯು, ರಾತ್ರೋರಾತ್ರಿ ಸಂಪೂರ್ಣವಾಗಿ ಸ್ತಬ್ಧವಾಗಿಹೋಯಿತು.
ಆದರೆ, 2020ರ ಮೇ 12ರಂದು ಪ್ರಧಾನಿ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡುತ್ತಾ, 'ಆತ್ಮನಿರ್ಭರ ಭಾರತ' ಎಂಬ ಆರ್ಥಿಕ ಪ್ಯಾಕೇಜ್ ಅನ್ನು ಪ್ರಕಟಿಸುವಾಗ ಈ ಮಾನವೀಯ ದುರಂತವನ್ನೇ ಒಂದು ಸುವರ್ಣ ಅವಕಾಶ ಎಂಬಂತೆ ಬಿಂಬಿಸಿದರು. "ನಮ್ಮ ದೇಶದ ಬಡ ಸಹೋದರ ಮತ್ತು ಸಹೋದರಿಯರ ಸಂಕಲ್ಪ ಮತ್ತು ಸಂಯಮವನ್ನು ದೇಶವು ಕಂಡಿದೆ. ಈ ಅವಧಿಯಲ್ಲಿ ಅವರು ತಪಸ್ಸು ಮಾಡಿದ್ದಾರೆ. ನಮ್ಮ ದೇಶಕ್ಕೆ ಇದು ಸಾಧ್ಯ ಎಂಬ ವಿಶ್ವಾಸ ನನಗಿದೆ. ನಿಮ್ಮ ಈ ಪ್ರಯತ್ನಗಳು ಪ್ರತಿ ಬಾರಿಯೂ ನಿಮ್ಮ ಮೇಲಿನ ನನ್ನ ಗೌರವವನ್ನು ಮತ್ತಷ್ಟು ಹೆಚ್ಚಿಸಿವೆ" ಎಂದಿದ್ದರು.
ಕೋವಿಡ್ ಸಾಂಕ್ರಾಮಿಕ ರೋಗದ ದಿನಗಳಲ್ಲಿ ಅವರು ಮಾಡಿದ ಎಲ್ಲಾ ಭಾಷಣಗಳ ಭಾಷಾ ಶೈಲಿಯು ನಿರಂತರವಾಗಿ 'ರಾಷ್ಟ್ರೀಯ ಸಂಕಲ್ಪ' ಮತ್ತು 'ನಾಗರಿಕ ಸೇವೆ'ಯ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಸರ್ಕಾರದ ಹಠಾತ್ ನೀತಿಗಳ ದೆಸೆಯಿಂದ ಸಂಕಷ್ಟಕ್ಕೆ ಸಿಲುಕಿದ ಒಬ್ಬ ಅಸಹಾಯಕ ನಾಗರಿಕನನ್ನು, ದೇಶಕ್ಕಾಗಿ ಯುದ್ಧಭೂಮಿಯಲ್ಲಿ ಹೋರಾಡುತ್ತಿರುವ ಒಬ್ಬ 'ಸೈನಿಕ'ನನ್ನಾಗಿ ಪದಬಳಕೆಯ ಮೂಲಕ ಪರಿವರ್ತಿಸುವಲ್ಲಿ ಈ ಶೈಲಿ ಯಶಸ್ವಿಯಾಗಿತ್ತು.
ಆದರೆ, 2021ರ ಕೋವಿಡ್ ಎರಡನೇ ಅಲೆಯು ಈ ರೀತಿಯ ನಿರೂಪಣೆಯ ಭೀಕರ ಬೆಲೆಯನ್ನು ಅತ್ಯಂತ ಕಟುವಾದ ವಾಸ್ತವಗಳೊಂದಿಗೆ ಜಗತ್ತಿನೆದುರು ತೆರೆದಿಟ್ಟಿತು. ದೇಶದಲ್ಲಿ ಆಕ್ಸಿಜನ್ ಕೊರತೆ ಎದುರಾಗಲಿದೆ ಎಂದು ಸರ್ಕಾರಕ್ಕೆ ಮುಂಚಿತವಾಗಿಯೇ ಎಚ್ಚರಿಕೆ ನೀಡಲಾಗಿತ್ತು. ಆದರೆ ಆ ಎಚ್ಚರಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇದರ ಪರಿಣಾಮವಾಗಿ 2021ರ ಮೇ ಮತ್ತು ಸೆಪ್ಟೆಂಬರ್ ನಡುವೆ ಸಾವಿರಾರು ಮಂದಿ ಸಾವಿಗೀಡಾದರು. ಆಸ್ಪತ್ರೆಗಳು ಆಕ್ಸಿಜನ್ಗಾಗಿ ಪರದಾಡಿದವು. ಸಾರ್ವಜನಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ರೋಗಿಗಳು ಆಸ್ಪತ್ರೆಯ ಪಾರ್ಕಿಂಗ್ ಆವರಣಗಳಲ್ಲೇ ಪ್ರಾಣ ಕಳೆದುಕೊಂಡರು. ಚಿತಾಗಾರಗಳು ದಿನದ ಇಪ್ಪತ್ತನಾಲ್ಕೂ ಗಂಟೆಗಳ ಕಾಲ ಸತತವಾಗಿ ಉರಿಯುತ್ತಲೇ ಇದ್ದವು.
ಎರಡನೇ ಅಲೆಯು ದೇಶಾದ್ಯಂತ ಭೀಕರವಾಗಿ ಹರಡುತ್ತಿದ್ದ ಆ ಬಿಕ್ಕಟ್ಟಿನ ಸಮಯದಲ್ಲೇ, ಮತ್ತೊಂದೆಡೆ ಹರಿದ್ವಾರದ ಕುಂಭಮೇಳದಲ್ಲಿ ಲಕ್ಷಾಂತರ ಜನ ಸೇರಲು ಸರ್ಕಾರ ಮುಕ್ತ ಅನುಮತಿ ನೀಡಿತ್ತು. ಅಷ್ಟೇ ಅಲ್ಲದೆ, ಸ್ವತಃ ಪ್ರಧಾನಿ ಮೋದಿಯವರೇ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಲಕ್ಷಾಂತರ ಜನರ ಬೃಹತ್ ರ್ಯಾಲಿಗಳನ್ನು ನಡೆಸುತ್ತಿದ್ದರು. ವೈರಸ್ ಹರಡಲು ವೇದಿಕೆಯಾಗಿದ್ದ ಇಂತಹ ಭಾರೀ ಜನಸಂದಣಿಯ ಕಾರ್ಯಕ್ರಮಗಳು ದೇಶದ ಈ ದುರಂತದ ಹಿನ್ನೆಲೆಯಲ್ಲೇ ಎಗ್ಗಿಲ್ಲದೆ ನಡೆದವು.
ಯಾವಾಗ ಈ ಕೋವಿಡ್ ಭೀಕರತೆ ಮತ್ತು ತೀವ್ರತೆಯನ್ನು ಮರೆಮಾಚಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಯಿತೋ, ಆಗ ಪ್ರಧಾನಿ ಮೋದಿಯವರು ಸಾರ್ವಜನಿಕವಾಗಿ ಬರೋಬ್ಬರಿ 20 ದಿನಗಳ ಕಾಲ ಕಾಣಿಸಿಕೊಳ್ಳಲೇ ಇಲ್ಲ. ಇದಾದ ನಂತರ ಅವರ ಸರ್ಕಾರವು ಸಂಸತ್ತಿಗೆ ನೀಡಿದ ಲಿಖಿತ ಉತ್ತರದಲ್ಲಿ, "ದೇಶದ ಯಾವುದೇ ರಾಜ್ಯಗಳೂ ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿರುವುದಾಗಿ ನಿರ್ದಿಷ್ಟವಾಗಿ ವರದಿ ಮಾಡಿಲ್ಲ" ಎಂದು ಹೇಳಿತು. ಈ ಬೇಜವಾಬ್ದಾರಿಯುತ ಹೇಳಿಕೆಯು ದೇಶಾದ್ಯಂತ ಆಸ್ಪತ್ರೆಗಳು, ನ್ಯಾಯಾಲಯಗಳು ಮತ್ತು ಪತ್ರಕರ್ತರು ಅತ್ಯಂತ ನಂಬಿಕಸ್ಥ ಆಧಾರಗಳೊಂದಿಗೆ ದಾಖಲಿಸಿದ್ದ ಕಟು ವಾಸ್ತವಗಳನ್ನೇ ಸಂಪೂರ್ಣವಾಗಿ ತಿರಸ್ಕರಿಸುವಂತಿತ್ತು.
ನೋಟು ಅಮಾನ್ಯೀಕರಣ, ಅತ್ಯಂತ ಆತುರವಾಗಿ ಜಾರಿಗೊಳಿಸಲಾದ ಜಿಎಸ್ಟಿ ಮತ್ತು ಕೋವಿಡ್ ಬಿಕ್ಕಟ್ಟು - ಇವೆಲ್ಲವೂ ಒಂದೇ ರೀತಿಯ ಆಡಳಿತಾತ್ಮಕ ಮಾದರಿಯನ್ನು ಮುನ್ನೆಲೆಗೆ ತರುತ್ತವೆ. ಆ ಮಾದರಿ ಯಾವುದೆಂದರೆ, ಅತ್ಯಂತ ವ್ಯವಸ್ಥಿತವಾದ, ದೀರ್ಘಾವಧಿಯ ಸುಧಾರಣೆಗಳನ್ನು ತರುವ ಬದಲು, ಕೇವಲ ಭಾರಿ ಪ್ರಚಾರ ಗಿಟ್ಟಿಸುವ ಮತ್ತು ಸಾಂಕೇತಿಕವಾಗಿ ಜನಮನ ಸೆಳೆಯುವ ಹಠಾತ್ ನಿರ್ಧಾರಗಳಿಗೆ ಆದ್ಯತೆ ನೀಡುವುದು. ಆ ಬಳಿಕ ಆ ನಿರ್ಧಾರಗಳಿಂದ ಉಂಟಾಗುವ ಭೀಕರ ಪರಿಣಾಮಗಳನ್ನೇ ಮಹಾನ್ ದೇಶಸೇವೆ ಎಂದು ಭಾಷಣಗಳ ಮೂಲಕ ವೈಭವೀಕರಿಸುವುದು.
ಇದೇ ರೀತಿಯ ಭಾಷಣದ ರಾಜಕಾರಣವು ಈಗ ಭಾರತದಲ್ಲಿ ಎದುರಾಗಿರುವ ಇಂಧನ ಬಿಕ್ಕಟ್ಟಿನ ಸಂದರ್ಭದಲ್ಲೂ ಮುಂದುವರಿದಿದೆ. ಆದರೆ ಈ ಇಂಧನ ಬಿಕ್ಕಟ್ಟಿನ ಮೂಲ ಬೇರುಗಳು ಕೇವಲ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಇತ್ತೀಚಿನ ಸಂಘರ್ಷಗಳಿಗಿಂತಲೂ ಅತ್ಯಂತ ಆಳವಾಗಿವೆ.
ದೇಶದ ಉತ್ಪಾದನಾ ವಲಯವನ್ನು ಉತ್ತೇಜಿಸಲು ತರಲಾಗಿದ್ದ 'ಮೇಕ್ ಇನ್ ಇಂಡಿಯಾ' ಯೋಜನೆಯು, ದೇಶದ ಒಟ್ಟು ಉಆPಯಲ್ಲಿ ಉತ್ಪಾದನಾ ವಲಯದ ಪಾಲನ್ನು ಶೇಕಡಾ 25ಕ್ಕೆ ಏರಿಸುವುದಾಗಿ ಮತ್ತು 10 ಕೋಟಿ ಕೈಗಾರಿಕಾ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿತ್ತು. ಆದರೆ ಒಂದು ದಶಕದ ನಂತರವೂ, ಉಆPಯಲ್ಲಿ ಉತ್ಪಾದನಾ ವಲಯದ ಪಾಲು ಶೇ. 17.3ರಷ್ಟೇ ಉಳಿದಿದೆ. ಅಂದರೆ ಇದು 2013-14ರ ಅವಧಿಯಲ್ಲಿ ಎಷ್ಟಿತ್ತೋ ಈಗಲೂ ಅಷ್ಟೇ ಇದೆ.
ಪರಿಣಾಮವಾಗಿ, ವಿದೇಶಿ ಆಮದಿನ ಮೇಲಿನ ಅವಲಂಬನೆಯನ್ನು ತಗ್ಗಿಸುವ ಮತ್ತು ಜಾಗತಿಕ ರಾಜತಾಂತ್ರಿಕ ಆಘಾತಗಳಿಂದ ದೇಶಕ್ಕೆ ರಕ್ಷಣೆ ನೀಡಬಲ್ಲ ಗಟ್ಟಿಯಾದ ಕೈಗಾರಿಕಾ ತಳಹದಿಯನ್ನು ನಿರ್ಮಿಸುವಲ್ಲಿ ಭಾರತ ಸಂಪೂರ್ಣವಾಗಿ ವಿಫಲವಾಗಿದೆ. ಪ್ರಸ್ತುತ ಎದುರಾಗಿರುವ ತೀವ್ರ ಇಂಧನ ಬಿಕ್ಕಟ್ಟು ಈ ಆಡಳಿತಾತ್ಮಕ ದೌರ್ಬಲ್ಯದ ಅತ್ಯಂತ ಭೀಕರ ಅಭಿವ್ಯಕ್ತಿಯಾಗಿದೆ.
ಭಾರತವು ತನ್ನ ಬಳಕೆಯ ಸುಮಾರು ಶೇಕಡಾ 90 ರಷ್ಟು ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ, ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಪಶ್ಚಿಮ ಏಷ್ಯಾದಿಂದಲೇ ಬರುತ್ತದೆ. 2026ರ ಆರಂಭದಲ್ಲಿ ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದ ಸಂಘರ್ಷವು ಕಚ್ಚಾ ತೈಲ ಬೆಲೆಗಳ ತೀವ್ರ ಏರಿಕೆಗೆ ಕಾರಣವಾದಾಗ, ಕೇವಲ ಒಂದು ತಿಂಗಳೊಳಗೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 70 ಡಾಲರ್ನಿಂದ 120 ಡಾಲರ್ ದಾಟಿದಾಗ ಭಾರತದ ಆಮದು ವೆಚ್ಚವು ಏರಿಕೆಯಾಯಿತು. ಇದು ದೇಶದ ಪ್ರಸ್ತುತ ಚಾಲ್ತಿ ಖಾತೆ ಕೊರತೆಯ ಮೇಲೆ ಭಾರಿ ಒತ್ತಡ ಹೇರಿತು. ಇದು ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಬರಿದು ಮಾಡಿದ್ದಲ್ಲದೆ ರೂಪಾಯಿಯ ಮೌಲ್ಯ ಕುಸಿಯಲು ಕಾರಣವಾಯಿತು.
ಡಾಲರ್ ಎದುರು ರೂಪಾಯಿಯ ಮೌಲ್ಯವು ಈಗಾಗಲೇ 96 ರೂಪಾಯಿಗಳ ಗಡಿಯನ್ನು ದಾಟಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕೇವಲ ಜನವರಿಯಿಂದ ಮೇ ಅವಧಿಯಲ್ಲೇ ಬರೋಬ್ಬರಿ 1.98 ಲಕ್ಷ ಕೋಟಿ ರೂಪಾಯಿಗಳನ್ನು ಭಾರತೀಯ ಮಾರುಕಟ್ಟೆಯಿಂದ ಹಿಂಪಡೆದಿದ್ದಾರೆ. ಕುಸಿಯುತ್ತಿರುವ ರೂಪಾಯಿ ಮೌಲ್ಯದಿಂದಾಗಿ ತಮ್ಮ ಆಸ್ತಿಯನ್ನು ರಕ್ಷಿಸಿಕೊಳ್ಳಲು ಜನಸಾಮಾನ್ಯರು ಸುರಕ್ಷಿತ ಹೂಡಿಕೆಯಾಗಿ ಚಿನ್ನವನ್ನು ಆಶ್ರಯಿಸುತ್ತಿರುವುದರ ಸಂಕೇತವಾಗಿ 2025-26ರ ಅವಧಿಯಲ್ಲಿ ಚಿನ್ನದ ಆಮದು ಬರೋಬ್ಬರಿ 72 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರಧಾನಿ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡುತ್ತಾ, ಕೋವಿಡ್ ಸಾಂಕ್ರಾಮಿಕ ರೋಗವನ್ನು ನಾವು ಹೇಗೆ ಯಶಸ್ವಿಯಾಗಿ ಎದುರಿಸಿದ್ದೇವೋ, ಹಾಗೆಯೇ ಭಾರತದ ಇಂಧನ ಬಿಕ್ಕಟ್ಟಿನ ಸವಾಲನ್ನೂ ಜಯಿಸಲಿದ್ದೇವೆ ಎಂದು ಹೇಳಿದ್ದಾರೆ. ಇದು ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಾಮಾನ್ಯ ಭಾರತೀಯರು ಅನುಭವಿಸಿದ ಆ ಭೀಕರ ನರಕಯಾತನೆಯನ್ನೇ ಇತಿಹಾಸದ ಪುಟಗಳಿಂದ ಅಳಿಸಿಹಾಕುವ ಪ್ರಯತ್ನದಂತಿದೆ. ಅಷ್ಟೇ ಅಲ್ಲದೆ, "ದೇಶವು ಇಂಧನ ಕ್ಷೇತ್ರದಲ್ಲಿ ಇನ್ನಷ್ಟು ಸ್ವಾವಲಂಬಿಯಾಗಬೇಕಾದ ಅಗತ್ಯವಿದೆ" ಎಂದು ಅವರು ಒತ್ತಿ ಹೇಳಿದ್ದಾರೆ. ಇದು ವಾಸ್ತವದಲ್ಲಿ ಕಳೆದ ಒಂದು ದಶಕದ ಕೈಗಾರಿಕಾ ನೀತಿಯ ಸಂಪೂರ್ಣ ವೈಫಲ್ಯವನ್ನು ಮರೆಮಾಡಿ, ಅದನ್ನೊಂದು ಭವಿಷ್ಯದ ಮಹೋನ್ನತ ಆಕಾಂಕ್ಷೆಯಾಗಿ ದೇಶದ ಮುಂದೆ ಪ್ರಸ್ತುತಪಡಿಸುವ ರಾಜಕೀಯ ಚಾಣಾಕ್ಷತನವಾಗಿದೆ.
ಈ ಎಲ್ಲಾ ವೈಫಲ್ಯಗಳ ಹಿಂದೆ ಒಂದು ವ್ಯವಸ್ಥಿತ ಮತ್ತು ಉದ್ದೇಶಪೂರ್ವಕ ರಾಜಕೀಯ ತರ್ಕ ಕೆಲಸ ಮಾಡುತ್ತಿದೆ. ಪ್ರತಿ ಬಾರಿಯ ಬಿಕ್ಕಟ್ಟಿನ ಸಂದರ್ಭದಲ್ಲೂ ನಾಗರಿಕರು ದೇಶಸೇವೆಗೆ ಸಿದ್ಧರಾಗಬೇಕು, ತಾತ್ಕಾಲಿಕ ಕಷ್ಟಗಳನ್ನು ಸಹಿಸಿಕೊಳ್ಳಬೇಕು ಮತ್ತು ನಾಯಕತ್ವವನ್ನು ನಂಬಬೇಕು ಎಂಬ ಕರೆ ನೀಡಲಾಗುತ್ತದೆ. ಅತ್ಯಂತ ಮುಖ್ಯವಾಗಿ, ಸರ್ಕಾರದ ನೀತಿಗಳನ್ನು ಟೀಕಿಸುವುದನ್ನು "ದೇಶದ್ರೋಹ" ಅಥವಾ "ರಾಷ್ಟ್ರ ವಿರೋಧಿ" ಎಂದು ಬಿಂಬಿಸುವ ರಾಜಕೀಯ ವಾತಾವರಣವನ್ನು ಸೃಷ್ಟಿಸುವ ಮೂಲಕ, ಪ್ರತಿಯೊಂದು ವೈಫಲ್ಯವನ್ನೂ ಉತ್ತರದಾಯಿತ್ವದಿಂದ ಅತ್ಯಂತ ಸುರಕ್ಷಿತವಾಗಿ ರಕ್ಷಿಸಲಾಗುತ್ತಿದೆ.
ಈ ರೀತಿಯ ಕಲುಷಿತ ರಾಜಕೀಯ ಪರಿಸರದಲ್ಲಿ, ಆರ್ಥಿಕ ಸಂಕಷ್ಟಗಳಿಂದ ಉಂಟಾಗುವ ಸಾರ್ವಜನಿಕರ ಆಕ್ರೋಶವು ಕೆಲವೊಮ್ಮೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಥವಾ ಇತರ ಸಚಿವರತ್ತ ತಿರುಗುತ್ತದೆಯೇ ಹೊರತು, ಅದು ಎಂದಿಗೂ ಪ್ರಧಾನಿ ಮೋದಿಯವರನ್ನು ತಲುಪುವುದೇ ಇಲ್ಲ.
ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತರದಾಯಿತ್ವ ಇರಬೇಕೆಂದರೆ ಸರ್ಕಾರದ ತಪ್ಪು ನೀತಿಗಳಿಗೂ ಮತ್ತು ಅದರ ರಾಜಕೀಯ ಪರಿಣಾಮಗಳಿಗೂ ನೇರವಾದ ಸಂಪರ್ಕವಿರಬೇಕು. ಆದರೆ ಇಂದಿನ ಸಮಕಾಲೀನ ಭಾರತದಲ್ಲಿ ಆ ಕೊಂಡಿಯನ್ನೇ ಸಂಪೂರ್ಣವಾಗಿ ಕತ್ತರಿಸಿ ಹಾಕಲಾಗಿದೆ. ಉಗ್ರ ರಾಷ್ಟ್ರೀಯತೆಯನ್ನು ಅಸ್ತ್ರವಾಗಿಸುವ ಮೂಲಕ, ವೈಫಲ್ಯದ ಜವಾಬ್ದಾರಿಯನ್ನು ಜಾಗತಿಕ ಪರಿಸ್ಥಿತಿಗಳು ಮತ್ತು ವಿರೋಧ ಪಕ್ಷಗಳ ಮೇಲೆ ಹೊರಿಸುವ ಮೂಲಕ, ಆರ್ಥಿಕ ಚರ್ಚೆಗಳನ್ನು ಹಿಂದುತ್ವ ರಾಜಕೀಯದ ಅಡಿಯಲ್ಲಿ ಹತ್ತಿಕ್ಕುವ ಮೂಲಕ ಮತ್ತು ಸರ್ಕಾರದ ಅಸಮರ್ಥತೆಯನ್ನೇ ನಾಗರಿಕರ ತ್ಯಾಗದ ಅವಕಾಶಗಳನ್ನಾಗಿ ಪರಿವರ್ತಿಸುವ ನಿರಂತರ ಭಾಷಣದ ನುಡಿಮುತ್ತುಗಳಿಂದ ಈ ಕೊಂಡಿಯನ್ನು ಧ್ವಂಸಗೊಳಿಸಲಾಗಿದೆ.
ತಮ್ಮ ಐPಉ ಸಬ್ಸಿಡಿಯನ್ನು ಬಿಟ್ಟುಕೊಡುತ್ತಿರುವ ಬಡ ವಿಧವೆ, ಹೆದ್ದಾರಿಯಲ್ಲಿ ಬರಿಗಾಲಿನಲ್ಲಿ ನಡೆದು ಮನೆ ಸೇರುತ್ತಿರುವ ವಲಸೆ ಕಾರ್ಮಿಕ, ತನ್ನ ಕೈಮಗ್ಗದ ಕಾರ್ಖಾನೆಗೆ ಬೀಗ ಬೀಳುತ್ತಿರುವುದನ್ನು ಅಸಹಾಯಕರಾಗಿ ನೋಡುತ್ತಿರುವ ಸಣ್ಣ ನೇಕಾರ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಮಧ್ಯಮ ವರ್ಗದ ಕುಟುಂಬ - ಇವರೆಲ್ಲರನ್ನೂ ತಮ್ಮದೇ ಆದ ಆಸ್ತಿ, ಹಕ್ಕು ಮತ್ತು ನೆಮ್ಮದಿಯ ನಷ್ಟವನ್ನು ದೇಶಕ್ಕಾಗಿ ಮಾಡುವ 'ಪರಮೋಚ್ಛ ಭಕ್ತಿ' ಎಂದು ಭಾವಿಸುವಂತೆ ಮೋದಿಯವರ ಪ್ರತಿಯೊಂದು ಭಾಷಣಗಳೂ ಕೇಳಿಕೊಳ್ಳುತ್ತಿವೆ.
ಇಷ್ಟೆಲ್ಲಾ ಆದರೂ ಮೋದಿಯವರ ಈ ಕರೆಯನ್ನು ದೇಶದ ಜನತೆ ಇಂದಿಗೂ ನಂಬುತ್ತಿದ್ದಾರೆ ಎಂದರೆ, ಅದು ಕೇವಲ ಅವರ ಭಾಷಣ ಕಲೆಯ ಸಾಮರ್ಥ್ಯ ಮಾತ್ರವಲ್ಲ, ಬದಲಿಗೆ, ಅವರನ್ನು ಹೊಣೆಗಾರರನ್ನಾಗಿ ಮಾಡಬಹುದಾದ ಮತ್ತು ಪ್ರಶ್ನಿಸಬಹುದಾದ ಎಲ್ಲಾ ರಾಜಕೀಯ ಹಾಗೂ ಪ್ರಜಾಪ್ರಭುತ್ವದ ಮುಕ್ತ ವೇದಿಕೆಗಳನ್ನು ದೇಶದಲ್ಲಿ ಎಷ್ಟು ವ್ಯವಸ್ಥಿತವಾಗಿ ಮುಚ್ಚಿಹಾಕಲಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

