HEALTH TIPS

ಹಾರ್ಮುಝ್‌ನಲ್ಲಿ ಮತ್ತೆ ಉದ್ವಿಗ್ನತೆ | ಇರಾನ್‌ ನ 2 ಹಡಗುಗಳ ಮೇಲೆ ಅಮೆರಿಕ ದಾಳಿ

ಟೆಹರಾನ್: ಹಾರ್ಮುಝ್ ಜಲಸಂಧಿ ಪ್ರದೇಶದಲ್ಲಿ ಅಮೆರಿಕ ಹಾಗೂ ಇರಾನ್ ನಡುವೆ ಶುಕ್ರವಾರ ಘರ್ಷಣೆ ನಡೆದಿರುವ ಬಗ್ಗೆ ವರದಿಯಾಗಿದ್ದು, ಕಳೆದ ಒಂದು ತಿಂಗಳಿನಿಂದ ಜಾರಿಯಲ್ಲಿರುವ ಕದನವಿರಾಮದ ಭವಿಷ್ಯ ಅನಿಶ್ಚಿತತೆಯೆಡೆಗೆ ದೂಡಲ್ಪಟ್ಟಿದೆ.

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್‌ ನ ಎರಡು ಹಡಗುಗಳನ್ನು ಗುರಿಯಾಗಿರಿಸಿ ಅಮೆರಿಕ ಪಡೆಗಳು ಶುಕ್ರವಾರ ದಾಳಿ ನಡೆಸಿವೆ ಹಾಗೂ ನಾಗರಿಕ ಪ್ರದೇಶಗಳ ಮೇಲೂ ದಾಳಿ ಮಾಡಿವೆ ಎಂದು ಇರಾನ್ ಆಪಾದಿಸಿದೆ.

ಆದರೆ ಈ ಆರೋಪವನ್ನು ಅಮೆರಿಕ ಅಲ್ಲಗಳೆದಿದ್ದು, ಇರಾನ್‌ ನ ಆಕ್ರಮಣದ ವಿರುದ್ಧ ತಾನು ಪ್ರತಿದಾಳಿ ನಡೆಸಿದ್ದುದಾಗಿ ಹೇಳಿದೆ.

''ಅಮೆರಿಕ ನೌಕಾಪಡೆಯ ಮೂರು ಡಿಸ್ಟ್ರಾಯರ್ ಸಮರನೌಕೆಗಳು ಹಾರ್ಮುಝ್ ಜಲಸಂಧಿಯನ್ನು ಅತ್ಯಂತ ಯಶಸ್ವಿಯಾಗಿ ದಾಟಿವೆ. ಈ ಮೂರು ಡಿಸ್ಟ್ರಾಯರ್ ನೌಕೆಗಳಿಗೆ ಯಾವುದೇ ಹಾನಿಯಾಗಿಲ್ಲ. ಆದರೆ ಇರಾನಿಯನ್ ದಾಳಿಕೋರರಿಗೆ ಭಾರೀ ಹಾನಿಯಾಗಿದೆ'' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಜಾಲತಾಣ ಟ್ರೂಥ್ ಸೋಶಿಯಲ್‌ನಲ್ಲಿ ತಿಳಿಸಿದ್ದಾರೆ.

''ಇರಾನ್‌ ನ ದಾಳಿಕೋರ ನೌಕೆಗಳನ್ನು ಇತರ ಹಲವಾರು ಸಣ್ಣ ದೋಣಿಗಳೊಂದಿಗೆ ಸಂಪೂರ್ಣವಾಗಿ ನಾಶಪಡಿಸಲಾಗಿದೆ'' ಎಂದು ಟ್ರಂಪ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

''ಆದರೆ ಇರಾನ್ ಶೀಘ್ರದಲ್ಲೇ ಒಪ್ಪಂದಕ್ಕೆ ಸಹಿ ಹಾಕದೆ ಇದ್ದಲ್ಲಿ ನಾವು ಅವರನ್ನು ಇನ್ನೂ ಅತ್ಯಂತ ಬಲವಾಗಿ ಮತ್ತು ಬಹಳಷ್ಟು ಹಿಂಸಾತ್ಮಕವಾಗಿ ಕೆಡವಿ ಹಾಕಲಿದ್ದೇವೆ'' ಎಂದು ಹೇಳಿದ್ದಾರೆ.

ಇರಾನ್‌ ನ ಕರಾವಳಿ ಸಮೀಪದ ಜಾಸ್ಕ್‌ನಿಂದ ಹಾರ್ಮುಝ್‌ ಗೆ ಪ್ರಯಾಣಿಸುತ್ತಿದ್ದ ಇರಾನಿಯನ್ ತೈಲ ಟ್ಯಾಂಕರ್ ಹಾಗೂ ಯುಎಇನ ಬಂದರು ನಗರ ಫುಜೈರಾದಿಂದ ಹಾರ್ಮುಝ್ ಜಲಸಂಧಿಯನ್ನು ಪ್ರವೇಶಿಸುತ್ತಿದ್ದ ಇನ್ನೊಂದು ಇರಾನಿ ನೌಕೆಯನ್ನು ಗುರಿಯಾಗಿರಿಸಿ ಅಮೆರಿಕ ದಾಳಿ ನಡೆಸಿದೆಯೆಂದು ಇರಾನ್ ಆರೋಪಿಸಿದೆ.

ಇದೇ ವೇಳೆ, ಕೆಲವು ಪ್ರಾದೇಶಿಕ ರಾಷ್ಟ್ರಗಳ ಸಹಕಾರದೊಂದಿಗೆ ಅಮೆರಿಕವು ಬಾಂದರ್ ಖಾಮಿರ್, ಸಿರ್ಕ್ ಹಾಗೂ ಕ್ವೆಶ್ಮ್ ದ್ವೀಪಗಳ ಮೇಲೆ ವಾಯುದಾಳಿ ನಡೆಸಿದೆಯೆಂದು ಇರಾನ್‌ ನ ಖಾತಮ್ ಅಲ್ ಅನ್ಬಿಯಾ ಕೇಂದ್ರೀಯ ಮುಖ್ಯ ಕಾರ್ಯಾಲಯದ ವಕ್ತಾರರು ತಿಳಿಸಿದ್ದಾರೆ ಎಂದು ಸರಕಾರಿ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ.

ಉಭಯ ದೇಶಗಳ ನಡುವೆ ರಾಜತಾಂತ್ರಿಕ ಉದ್ವಿಗ್ನತೆ ಉಲ್ಬಣಿಸಿರುವ ನಡುವೆಯೇ ಇರಾನ್‌ ನ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯೀಲ್ ಬಾಖ್ವೆಯಿ ಅವರು ಹೇಳಿಕೆಯೊಂದರಲ್ಲಿ, ಇರಾನನ್ನು ರೊಚ್ಚಿಗೆದ್ದ ಸಿಂಹಕ್ಕೆ ಹೋಲಿಸುವ ಮೂಲಕ ಅಮೆರಿಕಕ್ಕೆ ಪರೋಕ್ಷ ಬೆದರಿಕೆಯೊಡ್ಡಿದ್ದಾರೆ.

''ಒಂದು ವೇಳೆ ಸಿಂಹವು ಕೋರೆಹಲ್ಲುಗಳನ್ನು ಹೊರಚಾಚಿರುವುದನ್ನು ಕಂಡಲ್ಲಿ, ಸಿಂಹವು ಮುಗುಳ್ನಗುತ್ತಿದೆ ಎಂದು ನೀವು ಭಾವಿಸದಿರಿ'' ಎಂದು ಇಸ್ಮಾಯೀಲ್ ಬಾಖ್ವೆಯಿ ಎಕ್ಸ್‌ ನಲ್ಲಿ ಪೋಸ್ಟ್ ಮಾಡುವ ಮೂಲಕ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ನಿಕಟ ಮಿತ್ರ ಯುಎಇ ಹಾಗೂ ಇಸ್ರೇಲ್‌ನ ಪ್ರಮುಖ ಅರಬ್ ಪಾಲುದಾರರಲ್ಲಿ ಒಂದಾದ ಯುಎಇ ಶುಕ್ರವಾರ ಹೇಳಿಕೆ ನೀಡಿ, ಇರಾನ್‌ ನ ಕ್ಷಿಪಣಿಗಳು ಹಾಗೂ ಡ್ರೋನ್‌ಗಳ ದಾಳಿಯನ್ನು ತಾನು ಎದುರಿಸಿದ್ದಾಗಿ ಹೇಳಿದೆ. ಈ ದಾಳಿಗಳು ಪರಿಸ್ಥಿತಿ ಅಪಾಯಕಾರಿಯಾಗಿ ಉಲ್ಬಣಿಸಿರುವುದನ್ನು ತೋರಿಸಿಕೊಟ್ಟಿದ್ದು, ರಾಷ್ಟ್ರದ ಭದ್ರತೆ, ಸ್ಥಿರತೆ ಹಾಗೂ ಅದರ ಪ್ರಾಂತಗಳ ಸುರಕ್ಷತೆಗೆ ನೇರ ಬೆದರಿಕೆಯಾಗಿ ಪರಿಣಮಿಸಿದೆ ಎಂದು ಯುಎಇ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries