ಮುಂಬೈ: ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್‌ನೊಂದಿಗೆ ಸಂಪರ್ಕ ಹೊಂದಿರುವ ಶಂಕಿತರನ್ನು ಗುರಿಯಾಗಿಸಿಕೊಂಡು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ATS) ಬುಧವಾರ ರಾಜ್ಯದ ವಿವಿಧೆಡೆ ದಾಳಿ ನಡೆಸಿದೆ.
ಮುಂಬೈ ಸೇರಿದಂತೆ ಒಟ್ಟು 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಕನಿಷ್ಠ 40 ಮಂದಿ ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪಾಕಿಸ್ತಾನದಲ್ಲಿ ನೆಲೆಸಿರುವ ಭೂಗತ ಪಾತಕಿ ಶಹಜಾದ್ ಭಟ್ಟಿ ಮತ್ತು ಆತನ ಗ್ಯಾಂಗ್‌ನೊಂದಿಗೆ ಮಹಾರಾಷ್ಟ್ರದ ಕೆಲವು ವ್ಯಕ್ತಿಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
'ವಿದೇಶದಲ್ಲಿ ಕುಳಿತು ತನ್ನ ಗ್ಯಾಂಗ್ ನಡೆಸುತ್ತಿರುವ ಶಹಜಾದ್ ಭಟ್ಟಿ, ಭಾರತದ ಯುವಕರನ್ನು ಅಕ್ರಮ ಚಟುವಟಿಕೆಗಳಿಗೆ ಪ್ರಚೋದಿಸಲು ಯತ್ನಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ' ಎಂದು ಎಟಿಎಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬುಧವಾರ ಮುಂಜಾನೆಯೇ ಆರಂಭವಾದ ಈ ದಾಳಿಯು ಮುಂಬೈ, ಅಕೋಲಾ, ನಾಂದೇಡ್, ಪುಣೆ, ಥಾಣೆ ಜಿಲ್ಲೆಯ ಮೀರಾ ರೋಡ್, ಪಾಲ್ಘರ್‌ನ ನಲಸೋಪಾರಾ, ನಾಸಿಕ್, ಜಲಗಾಂವ್ ಮತ್ತು ನಾಗ್ಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದಿದೆ. ಈ ವೇಳೆ ಮಹತ್ವದ ದಾಖಲೆಗಳು ಮತ್ತು ಡಿಜಿಟಲ್ ಪುರಾವೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

