ಗುವಾಹಟಿ: ಮಣಿಪುರದಲ್ಲಿ ಬುಧವಾರ ಬೆಳಗ್ಗೆ ಶಂಕಿತ ಉಗ್ರರು ಚರ್ಚ್ ಪದಾಧಿಕಾರಿಗಳ ನಿಯೋಗದ ಮೇಲೆ ನಡೆಸಿದ ಹೊಂಚು ದಾಳಿಯಲ್ಲಿ ಮೂವರು ಕುಕಿ ಕ್ರೈಸ್ತ ಮುಖಂಡರು ಸಾವನ್ನಪ್ಪಿದ್ದಾರೆ ಮತ್ತು ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ನಡೆದ ಸಂದರ್ಭ ಥಾಡೌ ಬ್ಯಾಪ್ಟಿಸ್ಟ್ ಅಸೋಸಿಯೇಷನ್ (ಟಿಬಿಎ) ಮತ್ತು ಯುನೈಟೆಡ್ ಬ್ಯಾಪ್ಟಿಸ್ಟ್ ಕೌನ್ಸಿಲ್ ಗೆ ಸೇರಿದ ಸಂತ್ರಸ್ತರು ಅಂತರ್-ಅಸೋಸಿಯೇಷನ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಲು ಚುರಾಚಂದ್ ಪುರದಿಂದ ಕಾಂಗ್ ಪೋಕ್ಪಿಗೆ ಪ್ರಯಾಣಿಸುತ್ತಿದ್ದರು.
ಮೃತಪಟ್ಟವರನ್ನು ಟಿಬಿಎ ಅಧ್ಯಕ್ಷ ರೆವರೆಂಡ್ ವಿ. ಸ್ಮಿತ್ಲೌ, ರೆವರೆಂಡ್ ವಿಕೆ ಕೈಗೌಲುನ್ ಮತ್ತು ಪಾಸ್ಟರ್ ಪಾವ್ಗೌಲೆನ್ ಎಂದು ಗುರುತಿಸಲಾಗಿದೆ. ರೆವರೆಂಡ್ ಸ್ಮಿತ್ಲೌ ಅವರು ಈ ತಂಡದ ನೇತೃತ್ವ ವಹಿಸಿದ್ದರು. ತಂಡದಲ್ಲಿ ರೆವರೆಂಡ್ ಎಸ್.ಎಂ. ಹಾವೊಪು, ರೆವರೆಂಡ್ ಹೆಕಾಯಿ ಸಿಮ್ಟೆ, ರೆವರೆಂಡ್ ಪಾವೊಥಾಂಗ್ ಮತ್ತು ಚಾಲಕ ಗೌಮಾಂಗ್ ಕೂಡ ಇದ್ದರು. ಘಟನೆಯಲ್ಲಿ ಇತರ ನಾಲ್ವರು ಗಾಯಗೊಂಡಿದ್ದಾರೆ.
ಈ ಹತ್ಯೆಗಳನ್ನು ಖಂಡಿಸಿ ಥಾಡೌ ಸಂಘಟನೆಗಳು ಕಾಂಗ್ಪೋಕ್ಪಿ ಜಿಲ್ಲೆಯ ಸದರ್ ಹಿಲ್ಸ್ ನಲ್ಲಿ ಸಂಪೂರ್ಣ ಬಂದ್ ಘೋಷಿಸಿವೆ. ಇದೇ ವೇಳೆ ಕುಕಿ ಮತ್ತು ನಾಗರ ಸಮುದಾಯಗಳ ಜನರನ್ನು ಅಪಹರಿಸಲಾಗಿದೆ ಎಂಬ ಅನಧಿಕೃತ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಆದರೆ, ಈ ವರದಿಗಳು ಇನ್ನೂ ದೃಢಪಟ್ಟಿಲ್ಲ.
ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲಿಂನ ಇಸಾಕ್-ಮುಯಿವಾ ಬಣ (ಎನ್‌ಎಸ್ಸಿಎನ್-ಐಎಂ) ಮತ್ತು ಜೆಲಿಯಾಂಗ್ರಾಂಗ್ ಯುನೈಟೆಡ್ ಫ್ರಂಟ್ ಸೇರಿಕೊಂಡು ಈ ಕೃತ್ಯ ಎಸಗಿವೆ ಎಂದು ಕುಕಿ ಹ್ಯೂಮನ್ ರೈಟ್ಸ್ ಟ್ರಸ್ಟ್ (ಕೆಒಎಚ್ಯುಆರ್) ಆರೋಪಿಸಿದೆ. ಅಲ್ಲದೆ, ಈ ನರಮೇಧವನ್ನು ತೀವ್ರವಾಗಿ ಖಂಡಿಸಿದೆ.
ಇದು ಆಕಸ್ಮಿಕವಾಗಿ ನಡೆದ ಘಟನೆಯಾಗಲಿ ಅಥವಾ ದುರಾದೃಷ್ಟಕರ ಮುಖಾಮುಖಿಯಾಗಲಿ ಅಲ್ಲ. ಇದು ವ್ಯವಸ್ಥಿತವಾಗಿ ಯೋಜಿಸಿ ನಡೆಸಲಾದ ಭಯೋತ್ಪಾದನಾ ಕೃತ್ಯ ಎಂದು ಕೆಒಎಚ್ಯುಆರ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

