ಪಿಟಿಐ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸ್ವಯಂಸೇವಕರ ನಡುವೆ ಜಾತಿ, ಧರ್ಮ, ದೇಶದ ಗಡಿಯನ್ನೂ ಮೀರಿದ ಪರಿಶುದ್ಧವಾದ ಪ್ರೇಮ ವಿವಾಹಗಳು ನಡೆದ ಸಾಕಷ್ಟು ಪ್ರಕರಣಗಳಿವೆ. ಸಂಘವು ಅವನ್ನೆಲ್ಲ ಸ್ವಾಭಾವಿಕವಾಗಿಯೇ ಒಪ್ಪಿಕೊಂಡಿದೆ ಎಂದಿದ್ದಾರೆ.
'ನಾವು ಅಂತಹ ಪ್ರಕರಣಗಳನ್ನು ಸ್ವಾಗತಿಸಿದ್ದೇವೆ. ಸಂಭ್ರಮಿಸಿದ್ದೇವೆ ಮತ್ತು ಆ ರೀತಿಯ ವಿವಾಹಗಳಲ್ಲಿ ಪಾಲ್ಗೊಂಡಿದ್ದೇವೆ' ಎಂದಿರುವ ಅವರು, 'ಶುದ್ಧ ಪ್ರೇಮವಾಗಿದ್ದರೆ, ಯಾವುದೇ ಆಕ್ಷೇಪಗಳಿಲ್ಲ. ಆದರೆ, ಜಿಹಾದ್ ಆಗಿದ್ದರೆ, ಪ್ರಶ್ನೆಗಳು ಇದ್ದೇ ಇರುತ್ತವೆ' ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಆರ್‌ಎಸ್‌ಎಸ್ ಸರಕಾರ್ಯವಾಹ ಹೊಸಬಾಳೆ, ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆಯ ನಡುವಣ ಒಡನಾಟವನ್ನು 'ಲವ್ ಜಿಹಾದ್' ಎಂದು ವ್ಯಾಖ್ಯಾನಿಸುವ ಕುರಿತು, 'ವಿಚಾರ ಏನೆಂದರೆ, ಯಾರೂ ಅದನ್ನು ವ್ಯಾಖ್ಯಾನಿಸಿಲ್ಲ. ಲವ್ ಜಿಹಾದ್ ಎಂಬ ಪದವನ್ನು ಮೊದಲು ಯಾವುದೋ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಬಳಸಿದ್ದರು. ಅದರಲ್ಲಿ ನಮ್ಮ ಕೊಡುಗೆ ಏನಿಲ್ಲ' ಎಂದಿದ್ದಾರೆ.
ವಿಶೇಷವೆಂದರೆ, ವ್ಯಕ್ತಿಗಳಿಬ್ಬರು ಪ್ರೀತಿಸುತ್ತಿದ್ದಾರೆ ಎಂದರೆ, ಅಲ್ಲಿ ಧರ್ಮ, ರಾಷ್ಟ್ರೀಯತೆ ಇತ್ಯಾದಿ ಯಾವುದೇ ವಿಚಾರವೂ ಇರುವುದಿಲ್ಲ. ಅಲ್ಲಿ ಪ್ರೀತಿ ಪರಿಶುದ್ಧವಾಗಿರುತ್ತದೆ. ಒಂದು ವೇಳೆ ಹಿಂದೂ ಹುಡುಗಿಯರಿಗೆ ಬಲೆ ಬೀಸಲು ಯೋಜಿತ ಕಾರ್ಯಸೂಚಿಗಳು ನಡೆದಾಗ ಪ್ರಶ್ನೆಗಳು ಮೂಡುತ್ತವೆ. ಸಮಸ್ಯೆಗಳು ಸೃಷ್ಟಿಯಾಗಿ ಘರ್ಷಣೆಗಳಿಗೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.

