ಮಂಜೇಶ್ವರ: ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಸಂತಡ್ಕ ಮಾಡದ ಶ್ರೀ ಅರಸು ಸಂಕಲ ದೈವ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥ ಹಾಗೂ ಭಕ್ತರ ಅಭಿಷ್ಟಾರ್ಥ ಸಿದ್ಧಿಗಾಗಿ ಅತ್ಯಂತ ಮಹತ್ವದ ಶ್ರೀ ರುದ್ರಯಾಗ ಹಾಗೂ ಗಿರಿಜಾ ಕಲ್ಯಾಣೋತ್ಸವ ಮತ್ತು ನೂತನ ಭೋಜನ ಶಾಲೆಯ ಉದ್ಘಾಟನಾ ಸಮಾರಂಭವು ಜೂನ್ 6 ಮತ್ತು 7 ರಂದು ವಿವಿಧ ವೈದಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವೈಭವದಿಂದ ಜರುಗಲಿದೆ.
ಜೂನ್ 6: ಭವ್ಯ ಶೋಭಾಯಾತ್ರೆ:
ಜೂನ್ 6ರ ಶನಿವಾರ ಸಂಜೆ 4ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆಯಿಂದ ರುದ್ರಯಾಗ ಮತ್ತು ಶ್ರೀ ಗಿರಿಜಾ ಕಲ್ಯಾಣದಲ್ಲಿ ಪೂಜಿಸಲ್ಪಡುವ ಶ್ರೀ ದೇವರ ವಿಗ್ರಹದ ಭವ್ಯ ಶೋಭಾಯಾತ್ರೆ ಮೆರವಣಿಗೆಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಸಂಜೆ 5ಕ್ಕೆ ವೈದಿಕರ ಆಗಮನ, ಪ್ರಾರ್ಥನೆ ಹಾಗೂ ಯಾಗ ಮಂಟಪ ಶುದ್ಧೀಕರಣ ಪ್ರಕ್ರಿಯೆಗಳು ನೆರವೇರಲಿವೆ.
ಜೂನ್ 7: ರುದ್ರಯಾಗ, ಗಿರಿಜಾ ಕಲ್ಯಾಣೋತ್ಸವ ಹಾಗೂ ಧಾರ್ಮಿಕ ಸಭೆ:
ಭಾನುವಾರ ಬೆಳಿಗ್ಗೆ 6:30 ರಿಂದ ಗಣಹೋಮ, ಶ್ರೀ ದೈವಗಳಿಗೆ ವಿಶೇಷ ತಂಬಿಲ ಸೇವೆ ನಡೆಯಲಿದ್ದು, ಬೆಳಿಗ್ಗೆ 8ಕ್ಕೆ ರುದ್ರಯಾಗ ಆರಂಭಗೊಳ್ಳಲಿದೆ. 11ಕ್ಕೆ ಪೂರ್ಣಾಹುತಿ ಮತ್ತು ಮಂತ್ರಾಕ್ಷತೆ ಜರಗಲಿದೆ.
ಬೆಳಿಗ್ಗೆ 11:30 ಕ್ಕೆ ಆಯೋಜಿಸಲಾಗಿರುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ದಿವ್ಯ ಆಶೀರ್ವಚನ ನೀಡಲಿದ್ದಾರೆ. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ನರಸಿಂಹ ತಂತ್ರಿ ಕುಡುಪು ಇವರ ಉಪಸ್ಥಿತಿ ಇರಲಿದ್ದು, ಶ್ರೀ ಅರಸು ಸಂಕಲ ದೈವ ಕ್ಷೇತ್ರ ಆಡಳಿತ ಟ್ರಸ್ಟ್ ಅಧ್ಯಕ್ಷ ಡಾ. ಶ್ರೀಧರ ಭಟ್ ಸಂತಡ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಇದೇ ಸಂದರ್ಭ ಕ್ಷೇತ್ರದ ನೂತನ ಭೋಜನ ಶಾಲೆಯನ್ನು ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಆಯೋಗದ ಪ್ರಭಾರ ಅಧ್ಯಕ್ಷ ಡಾ. ಟಿ. ಶ್ಯಾಮ್ ಭಟ್ ಅವರು ಉದ್ಘಾಟಿಸುವರು.
ಸಂಜೆ ಕಲ್ಯಾಣೋತ್ಸವ ವೈಭವ:
ಜೂನ್ 7ರ ಸಂಜೆ 5ಕ್ಕೆ ಭಕ್ತಿಪೂರ್ವಕವಾಗಿ ಶ್ರೀ ಗಿರಿಜಾ ಕಲ್ಯಾಣೋತ್ಸವದ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿದ್ದು, ಸಂಜೆ 7:30ಕ್ಕೆ ಅಷ್ಟಾವಧಾನ ಸೇವೆ ಹಾಗೂ ಮಹಾಪೂಜೆ ನೆರವೇರಲಿದೆ. ಬ್ರಹ್ಮಶ್ರೀ ವೇದಮೂರ್ತಿ ಪರಕಜೆ ಅನಂತನಾರಾಯಣ ಭಟ್ಟರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ಜರಗಲಿವೆ.



