ಗಾಂಧಿನಗರ: ಅಕ್ರಮ ವಲಸೆ ಹಾಗೂ ಇತರ ಅಸ್ವಾಭಾವಿಕ ಕಾರಣಗಳಿಂದಾಗಿ ಜನಸಂಖ್ಯೆ ಸ್ವರೂಪದಲ್ಲಿ 'ಕೃತಕ' ಬದಲಾವಣೆಗಳು ಕಂಡುಬರುತ್ತಿವೆ. ಈ ಸಮಸ್ಯೆ ನಿವಾರಿಸಲು ಹೊಸ ಕಾನೂನಿನ ಅಗತ್ಯವಿದೆಯೇ ಎಂಬ ಬಗ್ಗೆ ಉನ್ನತ ಮಟ್ಟದ ಸಮಿತಿ ಪರಿಶೀಲಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದರು.
'ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪ್ರಕಾಶ್ ಪ್ರಭಾಕರ್ ನವೋಲೆಕರ್ ನೇತೃತ್ವದ ಸಮಿತಿಯು ಈ ಕುರಿತ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ವರ್ಷದ ಒಳಗಾಗಿ ಸಲ್ಲಿಸಲಿದೆ' ಎಂದರು.
'ಅಕ್ರಮ ವಲಸಿಗರು ತಾವಾಗಿಯೇ ದೇಶ ತೊರೆದಲ್ಲಿ, ಪಶ್ಚಿಮ ಬಂಗಾಳದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರವು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದಿಲ್ಲ. ಅವರು ದೇಶ ತೊರೆಯುವುದಕ್ಕೆ ಸರ್ಕಾರವು ಅನುಕೂಲ ಮಾಡಿಕೊಡಲಿದೆ' ಎಂದು ಹೇಳಿದರು.
'ಪ್ರತಿಯೊಬ್ಬ ನುಸುಳುಕೋರನನ್ನು ಪತ್ತೆ ಹಚ್ಚಿ, ದೇಶದಿಂದ ಹೊರಹಾಕುವುದಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಇದೇ ಉದ್ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಮಿತಿ ರಚಿಸುವ ನಿರ್ಧಾರ ಕೈಗೊಂಡಿದ್ದಾರೆ' ಎಂದರು.
ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಕಾರ್ಯವೈಖರಿಯನ್ನು ಹೊಗಳಿದ ಶಾ,'ಗಡಿ ಉದ್ದಕ್ಕೂ ಬೇಲಿ ಅಳವಡಿಸುವುದಕ್ಕಾಗಿ, ಸುವೇಂದು ಅವರು ಅಧಿಕಾರ ವಹಿಸಿಕೊಂಡ ಏಳು ದಿನಗಳಲ್ಲಿ 600 ಹೆಕ್ಟೇರ್ ಜಮೀನನ್ನು ಬಿಎಸ್‌ಎಫ್‌ಗೆ ಹಸ್ತಾಂತರಿಸಿದರು. ಚಿಕನ್ ನೆಕ್ ಕಾರಿಡಾರ್‌ನಲ್ಲಿ ಹೆಚ್ಚುವರಿಯಾಗಿ 121 ಹೆಕ್ಟೇರ್ ಭೂಮಿಯನ್ನು ಕೇಂದ್ರಕ್ಕೆ ಹಸ್ತಾಂತರಿಸಿದ್ದಾರೆ' ಎಂದು ಹೇಳಿದರು.
-ಅಮಿತ್ ಶಾ, ಕೇಂದ್ರ ಗೃಹ ಸಚಿವಪಶ್ಚಿಮ ಬಂಗಾಳದಲ್ಲಿ ಬಂಧನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ ಅಕ್ರಮ ವಲಸಿಗರು ತಾವಾಗಿಯೇ ತಮ್ಮ ಮೂಲ ಸ್ಥಳಗಳಿಗೆ ಹೋಗಬೇಕು ಎಂದು ಸರ್ಕಾರ ಬಯಸುತ್ತದೆ.

