ನವದೆಹಲಿ: ಅಪಘಾತವೂ ಸೇರಿ ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ನೆರವು ಸಿಗಬೇಕು. ಇದು ಪ್ರತಿಯೊಬ್ಬ ನಾಗರಿಕನ ಹಕ್ಕು. ಇದು ಸಂವಿಧಾನದ 21ನೇ ವಿಧಿಯಲ್ಲಿ ಹೇಳಿರುವ ಬದುಕುವ ಹಕ್ಕಿನ ಅವಿಭಾಜ್ಯ ಭಾಗವೂ ಆಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಸಕಾಲಿಕ ಚಿಕಿತ್ಸೆ ಸಿಗಬೇಕು.
ಇದು ಎಲ್ಲರ ಹಕ್ಕು ಎಂಬುದಾಗಿ ಪರಿಗಣಿಸಬೇಕು ಎಂದು ಕೋರಿ 'ಸೇವ್‌ಲೈಫ್ ಫೌಂಡೇಷನ್' ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಹೊರಡಿಸಿರುವ ಆದೇಶದಲ್ಲಿ ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ.
ನ್ಯಾಯಮೂರ್ತಿಗಳಾದ ಜೆ.ಕೆ.ಮಾಹೇಶ್ವರಿ ಹಾಗೂ ಎ.ಎಸ್.ಚಂದೂರಕರ್ ಅವರು ಇದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿ, ಮಂಗಳವಾರ ಆದೇಶ ಹೊರಡಿಸಿದೆ.
'ಯಾವುದೇ ವ್ಯಕ್ತಿ ಅಪಘಾತಕ್ಕೆ ಒಳಗಾಗಿ ಗಾಯಗೊಂಡಾಗ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ಇಂತಹ ಸಂದರ್ಭದಲ್ಲಿ, ಅವರಿಗೆ ಏನು ಮಾಡಬೇಕು ಎಂಬುದು ಕೂಡ ತೋಚುವುದಿಲ್ಲ. ಅವರಲ್ಲಿ ಅಸಹಾಯಕತೆ ಮನೆ ಮಾಡಿರುತ್ತದೆ. ತಮ್ಮ ಸುತ್ತಲು ಇರುವವರು ಏನಾದರೂ ಸಹಾಯ ಮಾಡುತ್ತಾರೆ ಎಂಬ ಭರವಸೆಯನ್ನೂ ಅವರು ಹೊಂದಿರುತ್ತಾರೆ' ಎಂದು ಪೀಠ ಹೇಳಿದೆ.
'ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಪ್ರತಿ ನಿಮಿಷವೂ ಅಮೂಲ್ಯ. ಇಂತಹ ವೇಳೆ ವೈದ್ಯಕೀಯ ನೆರವು ಇಲ್ಲವೇ ತುರ್ತು ಆರೈಕೆ ಸಿಗದಿದ್ದರೆ ವ್ಯಕ್ತಿಯು ಬದುಕುಳಿಯುವ ಸಾಧ್ಯತೆ ಕ್ಷೀಣಿಸುತ್ತದೆ. ಇಂತಹ ಸಂದರ್ಭಗಳೆಲ್ಲಾ ಕ್ಷಿಪ್ರವಾಗಿ ಸ್ಪಂದಿಸುವುದು ಕೂಡ ಔಷಧವೇ ಎನಿಸಲಿದೆ' ಎಂದು ಹೇಳಿದೆ.
ರಸ್ತೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಗಾಯಾಳುಗಳಿಗೆ ನಗದು ರಹಿತ ಚಿಕಿತ್ಸೆ ಒದಗಿಸುವುದಕ್ಕೆ ರೂಪಿಸಿರುವ 'ಪಿಎಂ ರಾಹತ್' ಜಾರಿಗೊಳಿಸದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಈ ಯೋಜನೆಯನ್ನು ಮೂರು ತಿಂಗಳ ಒಳಗಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಪೀಠ, ವಿಚಾರಣೆಯನ್ನು ನಾಲ್ಕು ತಿಂಗಳ ನಂತರ ನಡೆಸುವುದಾಗಿ ಪ್ರಕಟಿಸಿತು.
'112': 3 ತಿಂಗಳಲ್ಲಿ ಕಾರ್ಯಾಚರಣೆಗೆ ಕ್ರಮ: ಸೂಚನೆ
ಅಪಘಾತವೂ ಸೇರಿ ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ನೆರವು ನೀಡುವುದಕ್ಕಾಗಿ ಸಹಾಯವಾಣಿ '112' ಮೂರು ತಿಂಗಳ ಒಳಗಾಗಿ ಕಾರ್ಯಾಚರಣೆ ಆರಂಭಿಸಬೇಕು. ಕುಂದು ಕೊರತೆಗಳ ಪರಿಹಾರಕ್ಕೆ ವ್ಯವಸ್ಥೆಯೊಂದನ್ನು ಸಹ ಸ್ಥಾಪಿಸುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಈ ಸಂಬಂಧ ಕೈಗೊಂಡ ಕ್ರಮಗಳ ಪರಿಶೀಲನೆಗೆ ಪ್ರತಿ ತಿಂಗಳು ಸಭೆ ನಡೆಸಿ ನಿಯಮಿತವಾಗಿ ಅನುಪಾಲನಾ ವರದಿ ಸಲ್ಲಿಸಬೇಕು. ಸಭೆಯ ನಡಾವಳಿಗಳನ್ನು ಸಂಬಂಧಪಟ್ಟ ಪೋರ್ಟಲ್‌ಗಳಲ್ಲಿ ಅಳವಡಿಸಬೇಕು ಎಂದೂ ಸೂಚಿಸಿದೆ. ಅಪಘಾತಕ್ಕೆ ಒಳಗಾದವರಿಗೆ ವೈದ್ಯಕೀಯ ನೆರವು ನೀಡುವುದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಬೇಕು. ಈ ಮಾರ್ಗಸೂಚಿ ಅನ್ವಯ ಸಹಾಯವಾಣಿಯು ಮೂರು ತಿಂಗಳ ಒಳಗಾಗಿ ಕಾರ್ಯಾಚರಣೆ ಆರಂಭಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಕ್ರಮ ಕೈಗೊಳ್ಳಬೇಕು ಎಂದೂ ನಿರ್ದೇಶನ ನೀಡಿದೆ.
ನಿರ್ದೇಶನಗಳು
* ನೋಂದಾಯಿತ ಆಂಬುಲೆನ್ಸ್‌ಗಳಲ್ಲಿ(ಸರ್ಕಾರಿ ಮತ್ತು ಖಾಸಗಿ) ಜಿಪಿಎಸ್ ಹಾಗೂ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್(ವಿಎಲ್‌ಟಿಡಿ) ಅಳವಡಿಸಬೇಕು
* ನೈಜ ಸಮಯದಲ್ಲಿ ಸ್ಪಂದಿಸಲು ಸಾಧ್ಯವಾಗುವಂತೆ ಈ ಸಾಧನಗಳನ್ನು ಸಹಾಯವಾಣಿ 112 ಜೊತೆ ಸಂಯೋಜಿಸಿರಬೇಕು
* ಅಪಘಾತ ರಜಿಸ್ಟ್ರಿ(ಟ್ರಾಮಾ ರಜಿಸ್ಟ್ರಿ) ನಿರ್ವಹಣೆ ಮಾಡಬೇಕು. ಇದಕ್ಕಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ 8 ವಾರಗಳ ಒಳಗಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬೇಕು
* ಸಹಾಯವಾಣಿ 112 ಕುರಿತು ಬಹು ಭಾಷೆಗಳಲ್ಲಿ ಸಮೂಹ ಮಾಧ್ಯಮಗಳ ಮೂಲಕ ಪ್ರಚಾರ ನಡೆಸಬೇಕು
* ಗಾಯಾಳುಗಳಿಗೆ ನೆರವು ನೀಡಲು ಧಾವಿಸುವವರಿಗೆ ಮೋಟಾರು ವಾಹನಗಳ ಕಾಯ್ದೆ ಸೆಕ್ಷನ್ 134ಎ ಅಡಿ ರಕ್ಷಣೆ ಒದಗಿಸಬೇಕು
* ಅಪಘಾತಕ್ಕೆ ಒಳಗಾದವರಿಗೆ ನಗದು ರಹಿತ ಚಿಕಿತ್ಸೆ ಯೋಜನೆ (ಪಿಎಂ ರಾಹತ್) ಅಡಿ ವೈದ್ಯಕೀಯ ನೆರವು ನೀಡಲು ಕ್ರಮ ಕೈಗೊಳ್ಳಬೇಕು

