ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಅಧಿಕಾರಕ್ಕೇರಿದ ಕೇವಲ ಐದು ದಿನಗಳಲ್ಲಿ ಅಧಿಕಾರಶಾಹಿಯ ಅತ್ಯಂತ ಹಳೆಯ ಮತ್ತು ಪ್ರತಿಷ್ಠೆಯ ಸಂಕೇತವಾಗಿದ್ದ ವೈಟ್ ಟವಲ್ ಸಂಪ್ರದಾಯವನ್ನು ಕಿತ್ತೆಸೆದಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಚಿವರ ಕುರ್ಚಿಗಳಿಗೆ ಬಿಳಿ ಟವಲ್ ಹಾಕುವ ಪದ್ಧತಿಯನ್ನು ಕೈಬಿಡುವ ಮೂಲಕ ವಿಜಯ್ ಅವರು ಸಾಮಾನ್ಯರ ಮುಖ್ಯಮಂತ್ರಿ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ.
ಏನಿದು ಘಟನೆ? 24 ಗಂಟೆಯಲ್ಲಿ ಬದಲಾದ ಚಿತ್ರಣ!
ಕಳೆದ ಗುರುವಾರ ಪರಿಸರ ಕಾರ್ಯಕರ್ತೆ ಲಿಸಿಪ್ರಿಯಾ ಕಂಗುಜಮ್ ಅವರು ಮುಖ್ಯಮಂತ್ರಿ ವಿಜಯ್ ಅವರಿಗೆ X ಮೂಲಕ ಒಂದು ವಿಶೇಷ ಮನವಿ ಮಾಡಿದ್ದರು. ಸರ್ಕಾರಿ ಕಚೇರಿಗಳಲ್ಲಿ ಉನ್ನತ ಅಧಿಕಾರಿಗಳಿಂದ ಹಿಡಿದು ಕೆಳಹಂತದ ನೌಕರರವರೆಗೆ ಕುರ್ಚಿಗಳಿಗೆ ಬಿಳಿ ಟವಲ್ ಹಾಕುವ ಟವಲ್ ಸಂಸ್ಕೃತಿ ಇದೆ. ಇದು ವಿಐಪಿ ಸಂಸ್ಕೃತಿಯ ಸಂಕೇತವಾಗಿದ್ದು, ಇದನ್ನು ಕೊನೆಗೊಳಿಸುವ ಮೂಲಕ ನೀವು ಮಾದರಿಯಾಗಬೇಕು ಎಂದು ಕೋರಿದ್ದರು. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ವಿಜಯ್ ಯಾವುದೇ ಅಧಿಕೃತ ಪ್ರಕಟಣೆ ಅಥವಾ ಪ್ರಚಾರವಿಲ್ಲದೆ ಮೌನವಾಗಿಯೇ ಕಾರ್ಯಪ್ರವೃತ್ತರಾಗಿದ್ದಾರೆ. ಮೇ 14ರಂದು ನಡೆದ ಕೈಗಾರಿಕಾ ಇಲಾಖೆಯ ಸಭೆಯಲ್ಲಿ ವಿಜಯ್ ಅವರ ಕುರ್ಚಿಗೆ ಬಿಳಿ ಟವಲ್ ಹಾಕಲಾಗಿತ್ತು. ಆದರೆ, ಶುಕ್ರವಾರ TAFE ಮುಖ್ಯಸ್ಥೆ ಮಲ್ಲಿಕಾ ಶ್ರೀನಿವಾಸನ್ ಅವರೊಂದಿಗಿನ ಸಭೆಯ ಫೋಟೋಗಳಲ್ಲಿ ವಿಜಯ್ ಅವರ ಕುರ್ಚಿಯಿಂದ ಟವಲ್ ಮಾಯವಾಗಿತ್ತು. ಈ ಸಣ್ಣ ಬದಲಾವಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಕ್ರಾಂತಿಯಂತೆ ಬಿಂಬಿತವಾಗುತ್ತಿದೆ.
ಬಿಳಿ ಟವಲ್ ಇತಿಹಾಸ: ಬ್ರಿಟಿಷ್ ಅಹಂಕಾರದ ಕುರುಹು!
ಸರ್ಕಾರಿ ಕುರ್ಚಿಗಳಿಗೆ ಬಿಳಿ ಟವಲ್ ಹಾಕುವ ಈ ಪದ್ಧತಿ ಇಂದಿನದಲ್ಲ, ಇದು 19ನೇ ಶತಮಾನದ ಬ್ರಿಟಿಷ್ ರಾಜ್ ಕಾಲದ್ದು. ಅಂದು ಬ್ರಿಟಿಷ್ ಅಧಿಕಾರಿಗಳು ತಲೆಗೆ ಮಕಾಸರ್ ಆಯಿಲ್ ಬಳಸುತ್ತಿದ್ದರು. ಬೆಲೆಬಾಳುವ ಪೀಠೋಪಕರಣಗಳಿಗೆ ತೈಲದ ಕಲೆ ತಗುಲಬಾರದು ಎಂಬ ಕಾರಣಕ್ಕೆ ಆಂಟಿ-ಮಕಾಸರ್ ಎಂಬ ಬಟ್ಟೆಯನ್ನು ಬಳಸಲಾಗುತ್ತಿತ್ತು. ಭಾರತದ ಉಷ್ಣ ಹವಾಮಾನದಲ್ಲಿ ಬೆವರಿನ ಕಲೆ ತಪ್ಪಿಸಲು ಇದು ಪೂರ್ಣ ಪ್ರಮಾಣದ ಬಿಳಿ ಟವಲ್ ಆಗಿ ಬದಲಾಯಿತು. ಆದರೆ, ಕಾಲಕ್ರಮೇಣ ಇದು ಸ್ವಚ್ಛತೆಯ ಸಂಕೇತವಾಗಿ ಉಳಿಯದೆ, ಅಧಿಕಾರದ ಮತ್ತು ಶ್ರೇಣೀಕೃತ ವ್ಯವಸ್ಥೆಯ ಸಂಕೇತವಾಗಿ ಬದಲಾಗಿತ್ತು.
ಜನಸಾಮಾನ್ಯರ ಧ್ವನಿಗೆ ಕಿವಿಗೊಟ್ಟ ನಾಯಕ
ಲಿಸಿಪ್ರಿಯಾ ಕಂಗುಜಮ್ ಅವರು ವಿಜಯ್ ಅವರ ಈ ನಡೆಗೆ ಕೃತಜ್ಞತೆ ಸಲ್ಲಿಸಿದ್ದು, ವಿಜಯ್ ಅವರು ಜನಸಾಮಾನ್ಯರ ಧ್ವನಿಯನ್ನು ಆಲಿಸುವ ನಾಯಕ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ. ಕಳೆದ ಮೇ 10ರಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ವಿಜಯ್, ತಮ್ಮ ತಮಿಳಗ ವೆಟ್ರಿ ಕಳಗಂ ಪಕ್ಷದ ಮೂಲಕ ಹೊಸ ರಾಜಕೀಯ ಭಾಷ್ಯ ಬರೆಯುತ್ತಿದ್ದಾರೆ.

