ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿರುವ ಭಯೋತ್ಪಾದನೆಗೆ ಧನ ಸಹಾಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಮೂರ್ತಿಗಳಾದ ಪ್ರತಿಭಾ ಎಂ. ಸಿಂಗ್ ಮತ್ತು ಮಧು ಜೈನ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಆದರೆ, ತಂದೆಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಮೇ 18ರಂದು ನೀಡಲಾಗಿದ್ದ ಮಧ್ಯಂತರ ಜಾಮೀನು ಅವಧಿ ಮುಗಿದ ನಂತರ, ಜೂನ್ 2ರಂದು ಶರಣಾಗುವಂತೆ ನ್ಯಾಯಾಲಯ ರಶೀದ್‌ಗೆ ನಿರ್ದೇಶನ ನೀಡಿದೆ.
ವಿಚಾರಣೆ ಸಂದರ್ಭ ರಶೀದ್ ಪರ ವಕೀಲರು, ರಶೀದ್‌ಗೆ ತಮ್ಮ ತಂದೆಯ ದಫನದ 40ನೇ ದಿನದಂದು ನಿಗದಿಪಡಿಸಲಾದ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಪ್ರಸ್ತುತ ಇರುವ ಮಧ್ಯಂತರ ಜಾಮೀನನ್ನು ವಿಸ್ತರಿಸುವಂತೆ ನ್ಯಾಯಾಲಯವನ್ನು ವಿನಂತಿಸಿದರು.
ಈ ವಿನಂತಿಯನ್ನು ಭಾಗಶಃ ಸ್ವೀಕರಿಸಿದ ಪೀಠ ರಶೀದ್ ಅವರನ್ನು ಜೂನ್ 25ರಿಂದ ಜೂನ್ 30ರವರೆಗೆ ಅವರ ಹಿಂದಿನ ಮಧ್ಯಂತರ ಜಾಮೀನು ಅವಧಿಯಲ್ಲಿ ವಿಧಿಸಲಾಗಿದ್ದ ಅದೇ ಷರತ್ತುಗಳ ಅಡಿಯಲ್ಲಿ ಮತ್ತೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.
ಪ್ರಸಕ್ತ ಮಧ್ಯಂತರ ಜಾಮೀನು ಜೂನ್ 2ರಂದು ಮುಕ್ತಾಯಗೊಂಡ ನಂತರ, ರಶೀದ್ ಅಧಿಕಾರಿಗಳ ಮುಂದೆ ಶರಣಾಗಬೇಕು ಮತ್ತು ತಿಹಾರ್ ಜೈಲಿಗೆ ಮರಳಬೇಕು ಎಂದು ಉಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ.

