ಚೆನ್ನೈ: ತಮಿಳುನಾಡಿನ ವಿರೋಧ ಪಕ್ಷವಾದ ಎಐಎಡಿಎಂಕೆಗೆ ಮಂಗಳವಾರ ಮತ್ತೊಂದು ಹಿನ್ನೆಡೆಯಾಗಿದೆ. ಸಿ.ವೇ. ಷಣ್ಮುಗಂ ಮತ್ತು ಎಸ್.ಪಿ. ವೇಲುಮಣಿ ನೇತೃತ್ವದ ಬಂಡಾಯ ಬಣದ ಶಾಸಕ ಇಸಕ್ಕಿ ಸುಬ್ಬಯ್ಯ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅನಂತರ ಅವರು ಆಡಳಿತಾರೂಡ ಟಿವಿಕೆ ಪಕ್ಷ ಸೇರಿದ್ದಾರೆ.
ಇದು ಪಕ್ಷದೊಳಗಿನ ರಾಜಕೀಯ ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಿದೆ.
ಅಂಬಾಸಮುದ್ರಂನ ಶಾಸಕ ಇಸಕ್ಕಿ ಸುಬ್ಬಯ್ಯ ಅವರ ರಾಜೀನಾಮೆಯನ್ನು ಸ್ಪೀಕರ್ ಜೆಸಿಡಿ ಪ್ರಭಾಕರ್ ಅವರು ಅಂಗೀಕರಿಸಿದ್ದಾರೆ. ಇದರಿಂದ 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆಯ ಬಲ 47ರಿಂದ 43ಕ್ಕೆ ಕುಸಿದಿದೆ.
ಎಐಎಡಿಎಂಕೆಯ ಮೂವರು ಬಂಡಾಯ ಶಾಸಕರಾದ ಮರಗಥಂ ಕುಮಾರವೇಲ್, ಪಿ. ಸತ್ಯಬಾಮಾ ಮತ್ತು ಎಸ್. ಜಯಕುಮಾರ್ ಅವರು ರಾಜೀನಾಮೆ ನೀಡಿ ಟಿವಿಕೆ ಸೇರಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.
ಮೇ 25ರಂದು ರಾಜೀನಾಮೆ ನೀಡಿದ್ದ ಮೂವರು ಶಾಸಕರ ರಾಜೀನಾಮೆಯನ್ನು ಅಂಗೀಕರಿಸದಂತೆ ಎಡಪ್ಪಾಡಿ ಕೆ. ಪಳನಿಸ್ವಾಮಿ ಬಣದ ಹಿರಿಯ ನಾಯಕರು ಸ್ವೀಕರ್ಗೆ ವಿನಂತಿಸಿದ ಬೆನ್ನಲ್ಲೇ ಸುಬ್ಬಯ್ಯ ಅವರು ಮಂಗಳವಾರ ಸ್ಪೀಕರ್ ಪ್ರಭಾಕರ್ ಅವರನ್ನು ಭೇಟಿಯಾಗಿ ರಾಜಿನಾಮೆ ಪತ್ರ ಸಲ್ಲಿಸಿದರು.
ಸುಬ್ಬಯ್ಯ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಪ್ರಭಾಕರ್ ಅವರು ಅನಂತರ ಖಚಿತಪಡಿಸಿದರು.
ಬಳಿಕ ಸುಬ್ಬಯ್ಯ ಅವರು ಪಣಯೂರ್ನಲ್ಲಿ ಟಿವಿಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಟಿವಿಕೆ ಪಕ್ಷ ಸೇರಿದರು. ಅಲ್ಲಿ ಅವರನ್ನು ಟಿವಿಕೆ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಸಚಿವ ಎನ್. ಆನಂದ್ ಶಾಲು ಹೊದಿಸಿ ಹಾಗೂ ಪಕ್ಷದ ಸದಸ್ಯತ್ವದ ಕಾರ್ಡ್ ನೀಡುವ ಮೂಲಕ ಸ್ವಾಗತಿಸಿದರು.

