ನವದೆಹಲಿ: ಇಂಧನವನ್ನು ತರುವುದಕ್ಕಾಗಿ ಹೊಸ ಹಡಗುಗಳನ್ನು ಕಳುಹಿಸುವುದಕ್ಕೂ ಮೊದಲು, ಈಗ ಕೊಲ್ಲಿಯಲ್ಲಿ ಸಿಲುಕಿಕೊಂಡಿರುವ ಹಡಗುಗಳನ್ನು ಸುರಕ್ಷಿತವಾಗಿ ವಾಪಸಾಗುವಂತೆ ಮಾಡಲು ಭಾರತ ಬಯಸುತ್ತದೆ ಎಂದು ಬಂದರು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮುಕೇಶ್ ಮಂಗಲ್ ಗುರುವಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ನಮ್ಮ ಎಲ್ಲಾ ಹಡಗುಗಳನ್ನು ಹೊರ್ಮುಜ್ ಜಲಸಂಧಿಯಿಂದ ಹೊರತರುವುದು ಆದ್ಯತೆಯಾಗಿದೆ. ಪರಿಸ್ಥಿತಿಯು ಅನುಕೂಲಕರವಾಗಿರುವ ಎಲ್ಲಾ ಸಂದರ್ಭಗಳಲ್ಲಿ, ಭಾರತವು ಹಡಗುಗಳನ್ನು ಜಲಸಂಧಿಯ ಪಶ್ಚಿಮಕ್ಕೆ ಕಳುಹಿಸುತ್ತದೆ' ಎಂದರು.
'ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಕೊಲ್ಲಿಯಲ್ಲಿ ಸಿಲುಕಿರುವ ಎಲ್ಲಾ ಹಡಗುಗಳು ಮರಳಿದ ಬಳಿಕ, ಮತ್ತೆ ಹಡಗುಗಳನ್ನು ಕಳುಹಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದು ತಿಳಿಸಿದರು.
'ಭಾರತದ ಧ್ವಜ ಹೊಂದಿರುವ 13 ಹಾಗೂ ಭಾರತೀಯರೊಬ್ಬರ ಒಡೆತನದ 1 ಹಡಗು ಸೇರಿ ಒಟ್ಟು 14 ಹಡಗು ಜಲಸಂಧಿಯ ಪಶ್ಚಿಮ ಭಾಗದಲ್ಲಿ ಸಿಲುಕಿವೆ' ಎಂದು ಮಾಹಿತಿ ನೀಡಿದರು.

