ನವದೆಹಲಿ: ಎಬೋಲಾ ಪೀಡಿತ ರಾಷ್ಟ್ರಗಳ ಮೂಲಕ ಸಂಚರಿಸುವ ಮತ್ತು ಅಲ್ಲಿಂದ ಬರುವ ಪ್ರಯಾಣಿಕರಿಗೆ ಭಾರತ ಆರೋಗ್ಯ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಸೋಂಕಿನ ಲಕ್ಷಣ ಹೊಂದಿರುವವರು ಪ್ರಯಾಣಕ್ಕೆ ಅನುಮತಿ ಪಡೆಯುವ ಮೊದಲು ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (ಡಿಜಿಎಚ್‌ಎಸ್) ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.
ವಿಶೇಷವಾಗಿ ಕಾಂಗೊ, ಸುಡಾನ್ ಮತ್ತು ಉಗಾಂಡದಿಂದ ಬರುವವರು ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.
ಜ್ವರ, ಅಸ್ವಸ್ಥತೆ, ತಲೆನೋವು, ಮಾಂಸಖಂಡಗಳಲ್ಲಿ ನೋವು, ವಾಂತಿ, ಭೇದಿ, ಗಂಟಲುನೋವು ಮತ್ತು ರಕ್ತಸ್ರಾವದಂಥ ಲಕ್ಷಣಗಳು ಕಂಡುಬಂದರೆ ಎಚ್ಚರವಹಿಸುವಂತೆ ಸಲಹೆ ನೀಡಲಾಗಿದೆ.
'ಶಂಕಿತ ಅಥವಾ ದೃಢಪಟ್ಟಿರುವ ಸೋಂಕಿತರ ರಕ್ತ ಅಥವಾ ದೇಹದ ದ್ರವದೊಂದಿಗೆ ಸಂಪರ್ಕ ಹೊಂದಿದ ಪ್ರಯಾಣಿಕರು ತಕ್ಷಣ ವಿಮಾನ ನಿಲ್ದಾಣದ ಆರೋಗ್ಯಾಧಿಕಾರಿಗೆ ಮಾಹಿತಿ ನೀಡಬೇಕು. ವಿಮಾನ ಪ್ರಯಾಣದ ಬಳಿಕ 21 ದಿನಗಳೊಳಗಾಗಿ ರೋಗ ಲಕ್ಷಣಗಳು ಕಂಡುಬಂದರೆ ವೈದ್ಯಕೀಯ ಚಿಕಿತ್ಸೆ ಪಡೆದು, ತನ್ನ ಪ್ರಯಾಣದ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಬೇಕು' ಎಂದು ಮಾರ್ಗಸೂಚಿ ತಿಳಿಸಿದೆ.
ಉನ್ನತಮಟ್ಟದ ಸಭೆ: ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಪುಣ್ಯ ಸಲಿಲಾ ಶ್ರೀವಾತ್ಸವ್ ಅವರು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಬುಧವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಎಬೋಲಾ ನಿಯಂತ್ರಣಕ್ಕೆ ಕೈಗೊಂಡಿರುವ ಸಿದ್ಧತೆ ಮತ್ತು ಕ್ರಮಗಳ ಬಗ್ಗೆ ಪರಿಶೀಲಿಸಿದರು.
ಭಾರತದಲ್ಲಿ ಈವರೆಗೆ ಎಬೋಲಾ ಪ್ರಕರಣ ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

