ನವದೆಹಲಿ: ಗೊಂದಲಗಳಿಗೆ ಎಡೆ ಮಾಡಿಕೊಡದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮುಕ್ತಕಂಠದಿಂದ ಶ್ಲಾಘಿಸಿದೆ. ರಾಜ್ಯದಲ್ಲಿ ಸುಗಮ ಅಧಿಕಾರ ಹಸ್ತಾಂತರಕ್ಕೆ ಸಹಕರಿಸಿದ ಸಿದ್ದರಾಮಯ್ಯ ಅವರನ್ನು 'ಜಾತ್ಯತೀತ ಮೌಲ್ಯಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳದ ಧೀಮಂತ ನಾಯಕ' ಎಂದು ಕಾಂಗ್ರೆಸ್‌ನ ಉನ್ನತ ನಾಯಕರು ಬಣ್ಣಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಮತ್ತು ಕೊಡುಗೆಗಳನ್ನು ಕೊಂಡಾಡಿದ್ದಾರೆ.
'ಸಿದ್ದರಾಮಯ್ಯ ಅವರ ಸಾರ್ವಜನಿಕ ಜೀವನವು ಯಾವಾಗಲೂ ಘನತೆ, ಕರುಣೆ ಮತ್ತು ಸಾಮಾಜಿಕ ನ್ಯಾಯದ ಮೇಲಿನ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸಿದೆ. ಅತ್ಯಂತ ಸಾಮಾನ್ಯ ಹಿನ್ನೆಲೆಯಿಂದ ಬಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದ ಅವಧಿಯಲ್ಲೂ ಅವರು ಸಮಾನತೆ, ಸಾಮರಸ್ಯ ಮತ್ತು ವಂಚಿತ ವರ್ಗಗಳ ಕಲ್ಯಾಣಕ್ಕಾಗಿ ದೃಢವಾಗಿ ಶ್ರಮಿಸಿದರು' ಎಂದು ಮಲ್ಲಿಕಾರ್ಜುನ ಖರ್ಗೆ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು, ನಾಯಕತ್ವ ಬದಲಾವಣೆಯ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯ ಅವರು ತೋರಿದ ಪ್ರಬುದ್ಧತೆಯನ್ನು ಜೈರಾಮ್ ರಮೇಶ್ ವಿಶೇಷವಾಗಿ ಪ್ರಶಂಸಿಸಿದ್ದಾರೆ.
'ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ವೇಳೆ ಅವರು ನಡೆದುಕೊಂಡ ರೀತಿ ಅವರ ವ್ಯಕ್ತಿತ್ವ ಮತ್ತು ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ. ಸಾರ್ವಜನಿಕ ಜೀವನದಲ್ಲಿ ಹೊಸ ಇನಿಂಗ್ಸ್ ಆರಂಭಿಸುತ್ತಿರುವ ಅವರನ್ನು ದೇಶ ಯಾವಾಗಲೂ ನೆನಪಿಸಿಕೊಳ್ಳುತ್ತದೆ' ಎಂದಿದ್ದಾರೆ.
'ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕ ರಾಜಕೀಯದ ಪ್ರಭಾವಿ ನಾಯಕರಾಗಿರುವ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಬರೋಬ್ಬರಿ 17 ಬಜೆಟ್‌ಗಳನ್ನು ಮಂಡಿಸಿದ್ದಾರೆ. ಗುಜರಾತ್‌ನಲ್ಲಿ ವಜುಭಾಯಿ ವಾಲಾ (18 ಬಜೆಟ್) ಹೊರತುಪಡಿಸಿದರೆ ದೇಶದಲ್ಲೇ ಅತಿ ಹೆಚ್ಚು ಬಜೆಟ್ ಮಂಡಿಸಿದ ಎರಡನೇ ನಾಯಕ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಪಶ್ಚಿಮ ಬಂಗಾಳದ ಡಾ. ಅಸೀಮ್ ದಾಸ್‌ಗುಪ್ತಾ (16 ಬಜೆಟ್) ಅವರ ದಾಖಲೆಯನ್ನು ಸಿದ್ದರಾಮಯ್ಯ ಮೀರಿದ್ದಾರೆ. ಇವರು ಮಂಡಿಸಿದ ಪ್ರತಿಯೊಂದು ಬಜೆಟ್‌ಗಳು ಜನಪರ ಮತ್ತು ಪ್ರಭಾವಶಾಲಿಯಾಗಿದ್ದವು' ಎಂದು ರಮೇಶ್ ಸ್ಮರಿಸಿದ್ದಾರೆ.
ರಾಹುಲ್ ಗಾಂಧಿ ಅವರ ಆಶಯದಂತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ಬಳಿಕ ಇಂದು (ಶುಕ್ರವಾರ.29) ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೆ ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

