ನವದೆಹಲಿ: ಇತ್ತೀಚೆಗೆ ಆಮ್ ಆದ್ಮಿ ಪಕ್ಷ (ಎಎಪಿ)ದಿಂದ ಬಿಜೆಪಿಗೆ ಪಕ್ಷಾಂತರಗೊಂಡ ರಾಜ್ಯ ಸಭಾ ಸದಸ್ಯ ರಾಘವ್ ಚಡ್ಡಾ ಅವರನ್ನು ರಾಜ್ಯ ಸಭೆಯ ಅಹವಾಲುಗಳ ಕುರಿತ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ರಾಜ್ಯಸಭೆಯ ಅಧ್ಯಕ್ಷರಾದ ಸಿಪಿ. ರಾಧಾಕೃಷ್ಣನ್ ಅವರು ಸಮಿತಿಯನ್ನು ಪುನಾರಚಿಸಿದ ಹಾಗೂ ಅದರಲ್ಲಿ ಸೇವೆ ಸಲ್ಲಿಸಲು 10 ಸದಸ್ಯರನ್ನು ನಾಮನಿರ್ದೇಶಿಸಿದ ಬಳಿಕ ಈ ಘೋಷಣೆ ಹೊರ ಬಿದ್ದಿದೆ.
''ರಾಘವ್ ಚಡ್ಡಾ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ'' ಎಂದು ರಾಜ್ಯಸಭೆಯ ಅಧಿಸೂಚನೆ ತಿಳಿಸಿದೆ. ರಾಜ್ಯಸಭೆಯ ಅಧ್ಯಕ್ಷರು ಮೇ 20ರಿಂದ ಜಾರಿಗೆ ಬರುವಂತೆ ಈ ಸಮಿತಿಯನ್ನು ಪುನಾರಚಿಸಿದ್ದಾರೆ ಎಂದು ಅದು ಹೇಳಿದೆ.
ಚಡ್ಡಾ ಅವರನ್ನು ಹೊರತುಪಡಿಸಿ ಸಮಿತಿಯ ಇತರ ಸದಸ್ಯರೆಂದರೆ ಹರ್ಷ ಮಹಾಜನ್, ಗುಲಾಮ್ ಅಲಿ, ಶಂಭು ಶರಣ್ ಪಟೇಲ್, ಮಾಯಾಂಕ್ ಕುಮಾರ್ ನಾಯಕ್, ಮಸ್ತಾನ್ ರಾವ್ ಯಾದವ್ ಬೀಧಾ, ಜೇಬಿ ಮಾಥರ್ ಹಿಶಾಮ್, ಸುಭಾಸಿಶ್ ಖುಂಟಿಯಾ, ರ‌್ವಂಗ್ವ್ರಾ ನರ್ಜಾರಿ ಮತ್ತು ಸಂತೋಷ್ ಕುಮಾರ್ ಪಿ.
ಮತ್ತೊಂದು ಅಧಿಸೂಚನೆಯಲ್ಲಿ ರಾಜ್ಯಸಭೆ ಸಚಿವಾಲಯ, ''ರಾಜ್ಯಸಭೆಯ ಅಧ್ಯಕ್ಷರು 20 ಮೇ 2026ರಂದು ರಾಜ್ಯ ಸಭಾ ಸದಸ್ಯರಾದ ಡಾ. ಮೇನಕಾ ಗುರುಸ್ವಾಮಿ ಅವರನ್ನು ಕಾರ್ಪೋರೇಟ್ ಕಾಯ್ದೆಗಳ (ತಿದ್ದುಪಡಿ) ವಿಧೇಯಕ, 2026ರ ಜಂಟಿ ಸಮಿತಿಯ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಲಾಗಿದೆೆ'' ಎಂದು ತಿಳಿಸಿದೆ.

