ನವದೆಹಲಿ: 'ವಿಕಸಿತ ಭಾರತದ ದೃಷ್ಟಿಕೋನವನ್ನು ಮುನ್ನಡೆಸುವುದರ ಜತೆಗೆ ಸರಳ ಜೀವನ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಪ್ರಕ್ರಿಯೆಗಳ ಸುಧಾರಣೆ ಕುರಿತು ಚರ್ಚಿಸಲು ಸಂಪುಟ ಸಚಿವರ ಜತೆ ನಡೆದ ಸಭೆ ಫಲಪ್ರದವಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
'ಗುರುವಾರ ಸಂಪುಟ ಸಚಿವರೊಂದಿಗೆ ಫಲಪ್ರದ ಸಭೆ ನಡೆಯಿತು.
ನಾವು 'ಸರಳ ಜೀವನ', 'ಅಂತರರಾಷ್ಟ್ರೀಯ ವ್ಯಾಪಾರ ಸರಳೀಕರಣ'ವನ್ನು ಉತ್ತೇಜಿಸುವ ಮತ್ತು 'ವಿಕಸಿತ ಭಾರತ'ವನ್ನು ನನಸಾಗಿಸಲು ಸುಧಾರಣೆಗಳನ್ನು ಹೇಗೆ ಮುನ್ನಡೆಸಬೇಕು ಎಂಬುದರ ಬಗ್ಗೆ ಅಭಿಪ್ರಾಯ ಮತ್ತು ಕಾರ್ಯವಿಧಾನಗಳನ್ನು ವಿನಿಮಯ ಮಾಡಿಕೊಂಡೆವು' ಎಂದು ಮೋದಿ ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೋದಿ ಅವರು ದೆಹಲಿಯ ಸೇವಾ ತೀರ್ಥದಲ್ಲಿ ಗುರುವಾರ ನಡೆದ ಸಚಿವರ ಸಭೆಯ ಅಧ್ಯಕ್ಷತೆ ವಹಿಸಿದ್ದರು.
'ವೇಗದ ನಿರ್ಧಾರ ಕೈಗೊಳ್ಳುವಿಕೆ ಮತ್ತು ದಕ್ಷ ಆಡಳಿತದ ಅಗತ್ಯತೆಯನ್ನು ಒತ್ತಿ ಹೇಳಿದ ಅವರು, ಕಡತಗಳ ನಿರ್ವಹಣೆ ಕ್ರಮಬದ್ಧವಾಗಿರಬೇಕು, ಕನಿಷ್ಠ ಸಮಯದಲ್ಲಿ ಗರಿಷ್ಠ ಉತ್ಪಾದಕತೆಯನ್ನು ಸಾಧಿಸಬೇಕು. ಜತೆಗೆ, ಆಡಳಿತದಲ್ಲಿ ಹೆಚ್ಚಿನ ಸರಳತೆ ಮತ್ತು ಸುಧಾರಣೆಗಳ ಮೇಲೆ ಹೆಚ್ಚು ಗಮನಹರಿಸಬೇಕು' ಎಂದಿದ್ದಾರೆ.
'ವಿಕಸಿತ ಭಾರತ-2047' ಎಂಬುದು ಕೇವಲ ಘೋಷಣೆಯಲ್ಲ. ಬದಲಾಗಿ, ಅದು ಸರ್ಕಾರದ ಬದ್ಧತೆಯಾಗಿದೆ. ಕಾರ್ಯಕ್ಷಮತೆಯ ಮೌಲ್ಯಮಾಪನದಲ್ಲಿ ಕಡಿಮೆ ಶ್ರೇಯಾಂಕ ಪಡೆದ ಸಚಿವಾಲಯಗಳು ತಿದ್ದುಪಡಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಕಾರ್ಯವೈಖರಿಯನ್ನು ಸುಧಾರಿಸಿಕೊಳ್ಳಬೇಕು' ಎಂದೂ ಮೋದಿ ಸಲಹೆ ನೀಡಿದ್ದಾರೆ.
ಕಳೆದ 12 ವರ್ಷಗಳಲ್ಲಿ ಮಾಡಲಾದ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರೆದುರು ಎತ್ತಿ ತೋರಿಸುವಂತೆಯೂ ಮೋದಿ ಅವರು ಸಚಿವರಿಗೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ 30ಕ್ಕೂ ಹೆಚ್ಚು ಸಚಿವರು, 36 ಮಂದಿ ರಾಜ್ಯ ಖಾತೆ ಸಚಿವರು, ಐವರು ಸಹಾಯಕ ಸಚಿವರು ಪಾಲ್ಗೊಂಡಿದ್ದರು.

