ಕೋಲ್ಕತ್ತ: 'ಜನರ ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಸಿದುಕೊಂಡು, ಇವಿಎಂಗಳನ್ನು ಲೂಟಿ ಮಾಡುವ ಮೂಲಕ ಮುಖ್ಯ ಚುನಾವಣಾ ಆಯುಕ್ತ ಈ ಚುನಾವಣೆಯ ಖಳನಾಯಕರಾಗಿದ್ದಾರೆ' ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಸೋಲಿನ ಬಳಿಕ ಇಂದು(ಮಂಗಳವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗವು ಅಸಹ್ಯವಾಗಿ ಆಟವಾಡುತ್ತಿದೆ ಎಂದು ಆರೋಪಿಸಿದ್ದಾರೆ.
'ಮಹಾರಾಷ್ಟ್ರ, ಹರಿಯಾಣ, ಬಿಹಾರ ಮತ್ತು ಈಗ ಬಂಗಾಳದಲ್ಲಿ ಮತ ಕಳ್ಳತನ ಮಾಡಲಾಗಿದೆ. ನಮ್ಮ ಪಕ್ಷದ ನಿಜವಾದ ಪ್ರತಿಸ್ಪರ್ಧಿ ಬಿಜೆಪಿ ಅಲ್ಲ, ಬದಲಾಗಿ ಚುನಾವಣಾ ಆಯೋಗ' ಎಂದು ಕಿಡಿಕಾರಿದ್ದಾರೆ.
'ಮತದಾನದ ನಂತರವೂ ಇವಿಎಂಗಳಲ್ಲಿ ಶೇ 80-90 ರಷ್ಟು ಚಾರ್ಜ್ ಇರುತ್ತದೆ. ಇದು ಹೇಗೆ ಸಾಧ್ಯ?. ಚುನಾವಣೆಗೆ ಎರಡು ದಿನಗಳ ಮುಂಚಿತವಾಗಿ ಅವರು ನಮ್ಮ ಜನರನ್ನು ಬಂಧಿಸಲು ಪ್ರಾರಂಭಿಸಿದರು. ಎಲ್ಲೆಡೆ ದಾಳಿ ನಡೆಸಲು ಶುರು ಮಾಡಿದರು. ಎಲ್ಲಾ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರು'.
ಚುನಾವಣಾ ಆಯೋಗದೊಂದಿಗೆ ಸೇರಿ ಬಿಜೆಪಿ ಆಟವಾಡಿದೆ. ಇದು ಬಿಜೆಪಿ ಮತ್ತು ಚುನಾವಣಾ ಆಯೋಗದ ನಡುವೆ ಒಪ್ಪಂದ ಆಗಿದೆ. ಪ್ರಧಾನಿ ಮತ್ತು ಗೃಹ ಸಚಿವರು ಸಹ ಇದರಲ್ಲಿ ಭಾಗಿಯಾಗಿದ್ದಾರೆ' ಎಂದು ದೂರಿದ್ದಾರೆ.
'ಎಸ್‌ಐಆರ್‌ನಲ್ಲಿ 90 ಲಕ್ಷ ಹೆಸರುಗಳನ್ನು ತೆಗೆದುಹಾಕಿದ್ದರು. ನಾವು ನ್ಯಾಯಾಲಯದಲ್ಲಿ ಹೋರಾಡಿದ ನಂತರ 32 ಲಕ್ಷ ಹೆಸರುಗಳನ್ನು ಸೇರಿಸಲಾಯಿತು. ನನ್ನ ಜೀವನದಲ್ಲಿ ನಾನು ಇಂತಹ ಚುನಾವಣೆಯನ್ನು ನೋಡಿಲ್ಲ' ಎಂದು ಹೇಳಿದ್ದಾರೆ.
ಹಲ್ಲೆ ಆರೋಪ ಮಾಡಿದ ದೀದಿ:
ಇದೇ ವೇಳೆ, ಮತದಾನದ ಕೇಂದ್ರವೊಂದರಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಮಮತಾ ಅವರು ಗಂಭೀರ ಆರೋಪ ಮಾಡಿದ್ದಾರೆ.
'ನನ್ನ ಹೊಟ್ಟೆ ಮತ್ತು ಬೆನ್ನಿಗೆ ಒದೆಯಲಾಯಿತು. ಅಲ್ಲಿನ ಸಿಸಿಟಿವಿ ಆಫ್ ಮಾಡಲಾಗಿತ್ತು. ನನ್ನನ್ನು ಮತ ಎಣಿಕೆ ಕೇಂದ್ರದಿಂದ ಹೊರಕ್ಕೆ ತಳ್ಳಲಾಯಿತು. ಒಬ್ಬ ಮಹಿಳೆಯಾಗಿ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು' ಎಂದು ಹೇಳಿದ್ದಾರೆ.

