ಕೋಲ್ಕತ್ತ: 'ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ' ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಚುನಾವಣೆ ಸೋಲಿನ ಬಳಿಕ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಇದು ಜನಾದೇಶವಲ್ಲ, ಬದಲಾಗಿ ಪಿತೂರಿಯ ಫಲಿತಾಂಶವಾಗಿದೆ' ಎಂದು ದೂರಿದ್ದಾರೆ.
'ನನ್ನ ರಾಜೀನಾಮೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಏಕೆಂದರೆ ನಾವು ಜನಾದೇಶದಿಂದ ಸೋತಿಲ್ಲ, ಬದಲಾಗಿ ಪಿತೂರಿಯಿಂದ ಸೋತಿದ್ದೇವೆ. ನಾನು ಸೋತಿಲ್ಲ... ಆದ್ದರಿಂದ ಲೋಕಭವನಕ್ಕೆ ಹೋಗುವುದಿಲ್ಲ. ಸಾಂವಿಧಾನಿಕ ನಿಯಮಗಳ ಪ್ರಕಾರ ಅವರು ಕ್ರಮ ಕೈಗೊಳ್ಳಬಹುದು' ಎಂದು ಅವರು ತಿಳಿಸಿದ್ದಾರೆ.
'ಟಿಎಂಸಿಯ ಸ್ಪರ್ಧೆಯು ಬಿಜೆಪಿಯ ವಿರುದ್ಧವಾಗಿರಲಿಲ್ಲ, ಬದಲಾಗಿ ಬಿಜೆಪಿ ಪರವಾಗಿ ಕೆಲಸ ಮಾಡಿದ ಚುನಾವಣಾ ಆಯೋಗದ ವಿರುದ್ಧವಾಗಿತ್ತು' ಎಂದು ಅವರು ಹೇಳಿದ್ದಾರೆ.
ಮತ ಎಣಿಕೆ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ ಅವರು, ಸುಮಾರು 100 ಸ್ಥಾನಗಳಲ್ಲಿ ನಮಗೆ ಮೋಸವಾಗಿದೆ ಎಂದು ಹೇಳಿದ್ದಾರೆ. ತಮ್ಮ ಪಕ್ಷದ ಧೈರ್ಯ ಕುಂದಿಸಲು ಮತ ಎಣಿಕೆಯನ್ನು ಉದ್ದೇಶಪೂರ್ವಕವಾಗಿ ನಿಧಾನಗೊಳಿಸಲಾಯಿತು ಎಂದೂ ಆರೋಪಿಸಿದ್ದಾರೆ.

