ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ(ಸೋಮವಾರ, ಮೇ 4) ಫಲಿತಾಂಶ ಪ್ರಕಟವಾಗಲಿದ್ದು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಸಂಭ್ರಮಾಚರಣೆಗಾಗಿ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.
ಮಲಪ್ಪುರಂ ಜಿಲ್ಲೆಯ ಪಾಂಡಿಕ್ಕಾಡ್ನಲ್ಲಿ ಕಾಂಗ್ರೆಸ್ ಹಾಗೂ ಯುಡಿಎಫ್ ಕಾರ್ಯಕರ್ತರು ಗೆಲುವಿನ ನಿರೀಕ್ಷೆಯಲ್ಲಿದ್ದು, ಸುಮಾರು 5,000 ಮಂದಿಗೆ ಬಿರಿಯಾನಿ ಸಿದ್ಧಪಡಿಸುತ್ತಿದ್ದಾರೆ.
'ನಾವು ಎಲ್ಡಿಎಫ್ ಸರ್ಕಾರದ 10 ವರ್ಷಗಳ ಆಡಳಿತದ ಅಂತ್ಯವನ್ನು ಆಚರಿಸಲಿದ್ದೇವೆ. ಸಿಪಿಐ(ಎಂ) ಸೇರಿದಂತೆ ಎಲ್ಲರನ್ನೂ ಸ್ವಾಗತಿಸುತ್ತೇವೆ. ಬಿರಿಯಾನಿ ವಿತರಣೆಗಾಗಿ ಪಟ್ಟಣದಲ್ಲಿ ಟೆಂಟ್ ನಿರ್ಮಿಸಲಾಗಿದೆ' ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಪ್ರತಿಕ್ರಿಯಿಸಿದ್ದಾರೆ.
'ಯುಡಿಎಫ್ ಮತ್ತೆ ಅಧಿಕಾರಕ್ಕೇರಲಿದೆ ಎಂಬ ವಿಶ್ವಾಸ ನಮಗಿದೆ. ಮಲಪ್ಪುರಂ ಜಿಲ್ಲೆಯ ಪಕ್ಷದ ಭದ್ರಕೋಟೆಯಾಗಿದ್ದು, ಅದು ಮುಂದುವರಿಯಲಿದೆ' ಎಂದಿದ್ದಾರೆ.
ಬಿಜೆಪಿಯಿಂದಲೂ ಸಿದ್ಧತೆ...
ಅತ್ತ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡುವ ನಿರೀಕ್ಷೆಯಲ್ಲಿರುವ ಬಿಜೆಪಿ, ಕೊಚ್ಚಿಯಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಈಗಾಗಲೇ ಲಡ್ಡು, ಸಿಹಿತಿಂಡಿ ಆರ್ಡರ್ ಮಾಡಲಾಗಿದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.
ಕಾರ್ಯಕರ್ತರಿಂದ ರಾಜ್ಯದಲ್ಲಿ ಗೆಲ್ಲಲು ಸಾಧ್ಯತೆ ಇರುವ ನಾಯಕರ ಫ್ಲೆಕ್ಸ್ಗಳನ್ನು ಸಿದ್ಧಪಡಿಸಲಾಗುತ್ತಿದೆ.
'ನಾವು ನೇಮಂ, ಕಳಕೂಟಂ, ಮಂಜೇಶ್ವರ, ಪಾಲಕ್ಕಾಡ್ ಸೇರಿದಂತೆ ಹಲವು ಸ್ಥಾನಗಳಲ್ಲಿ ಗೆಲ್ಲಲಿದ್ದೇವೆ. ಜನರು ಎಲ್ಡಿಎಫ್ ಹಾಗೂ ಯುಡಿಎಫ್ ಎರಡರಿಂದಲೂ ಬೇಸತ್ತಿದ್ದಾರೆ' ಎಂದು ಕಾರ್ಯಕರ್ತರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಎಲ್ಡಿಎಫ್ ಪಾಳಯದಲ್ಲೂ ನಿರೀಕ್ಷೆ...
ಏತನ್ಮಧ್ಯೆ ಮತದಾನೋತ್ತರ ಸಮೀಕ್ಷೆಗಳ ಭವಿಷ್ಯವು ಸುಳ್ಳಾಗಲಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಎಲ್ಡಿಎಫ್ ಸರ್ಕಾರ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಲಿದೆ ಎಂದು ಎಡರಂಗದ ಕಾರ್ಯಕರ್ತರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

