ಸಾಮಾಜಿಕ ಜಾಲತಾಣ ಈಗ ಕೇವಲ ಮನರಂಜನೆಯ ತಾಣವಾಗಿ ಉಳಿದಿಲ್ಲ, ಬದಲಾಗಿ ಸಂಚಲನ ಸೃಷ್ಟಿಸುವ ಮಾಧ್ಯಮವಾಗಿ ಬದಲಾಗಿದೆ. ಜೆನ್ ಝೀಗಳ ನೆಚ್ಚಿನ ತಾಣವಾಗಿರುವ ಇನ್ಸ್ಟಾಗ್ರಾಂನಲ್ಲಂತೂ ನಿತ್ಯವೂ ಹೊಸ ವಿಷಯಗಳ, ಹೊಸ ಟ್ರೆಂಡ್ಗಳೇ ಸೃಷ್ಟಿಯಾಗುತ್ತಿರುತ್ತವೆ.
ಸದ್ಯ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಎನ್ನುವ ವಿಡಂಬನಾತ್ಮಕ ರಾಜಕೀಯ ಪಕ್ಷ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ದೇಶದಲ್ಲೂ ಸದ್ದು ಮಾಡುತ್ತಿದೆ.

ಪಕ್ಷದ ವೆಬ್ಸೈಟ್
ಏನಿದು ಕಾಕ್ರೋಚ್ ಜನತಾ ಪಾರ್ಟಿ?
'ಜಾತ್ಯತೀತ, ಸಮಾಜವಾದಿ, ಪ್ರಜಾಪ್ರಭುತ್ವ, ಸೋಮಾರಿ' ಎನ್ನುವ ಧ್ಯೇಯವಾಕ್ಯದೊಂದಿಗೆ ಈ ಪಕ್ಷ ಆರಂಭವಾಗಿದೆ. ಯುವಕರಿಂದ, ಯುವಕರಿಗಾಗಿ, ಯುವಕರ ರಾಜಕೀಯ ರಂಗ ಎನ್ನುವ ಅಡಿ ಬರಹ ಈ ಪಕ್ಷದ್ದಾಗಿದೆ.
ಪಕ್ಷ ಹುಟ್ಟಿಕೊಂಡಿದ್ದು ಹೇಗೆ?
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರು ಮೇ 16ರಂದು ಮಾತನಾಡುವ ವೇಳೆ 'ನಿರುದ್ಯೋಗಿ ಯುವ ಜನತೆ ಜಿರಳೆಗಳಿದ್ದಂತೆ" ಎಂದಿದ್ದರು.
'ಪದಾಂಕಿತ ಹಿರಿಯ ವಕೀಲ' ಸ್ಥಾನ ಪಡೆಯಲು ವಕೀಲರೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳು, ಸ್ಥಾನಕ್ಕಾಗಿ ಆ ವಕೀಲ ಅನುಸರಿಸಿದ ಮಾರ್ಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ 'ಕೆಲವು ಯುವಕರು ಜಿರಳೆಗಳಿದ್ದಂತೆ. ಅವರಿಗೆ ಯಾವುದೇ ಉದ್ಯೋಗ ಸಿಗುವುದಿಲ್ಲ ಅಥವಾ ವೃತ್ತಿಯಲ್ಲಿ ಯಾವುದೇ ಸ್ಥಾನ ಲಭಿಸುವುದಿಲ್ಲ. ಅಂಥವರು ತಾವೇ ಮಾಧ್ಯಮ, ಸಾಮಾಜಿಕ ಮಾಧ್ಯಮ ಮತ್ತು ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಥವಾ ಇತರೆ ಕಾರ್ಯಕರ್ತರಾಗಿ ಸಮಾಜದ ಎಲ್ಲರ ಮೇಲೆ ದಾಳಿ ಮಾಡಲು ಆರಂಭಿಸುತ್ತಾರೆ' ಎಂದಿದ್ದರು.
ಸಿಜೆಐ ಅವರ ಮಾತಿಗೆ ವಿರೋಧವಾಗಿ, 'ಹೌದು ನಾವು ನಿರುದ್ಯೋಗಿಗಳೇ, ಸೋಮಾರಿಯೇ, ನಿರಂತರವಾಗಿ ಆನ್ಲೈನ್ನಲ್ಲಿ ಇರುತ್ತೇವೆ' ಎನ್ನುವ ಮೂಲಕ 'ಕಾಕ್ರೋಚ್ ಜನತಾ ಪಾರ್ಟಿ' ವೆಬ್ಸೈಟ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ತೆರೆಯಲಾಗಿದೆ.
ಯಾರು ಇದನ್ನು ಆರಂಭಿಸಿದ್ದು?
ಈ ಪಕ್ಷದ ವೆಬ್ಸೈಟ್ ಆರಂಭಿಸಿದವರು ಅಭಿಜೀತ್ ದಿಪ್ಕೆ ಎನ್ನುವವರು. ವರದಿಗಳ ಪ್ರಕಾರ, 30 ವರ್ಷದ ದಿಪ್ಕೆ, ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಪಬ್ಲಿಕ್ ರಿಲೇಶನ್ ವಿಭಾಗದ ವಿದ್ಯಾರ್ಥಿ. ಈ ಹಿಂದೆ 2020 ರಿಂದ 2023 ರವರೆಗೆ ಆಮ್ ಆದ್ಮಿ ಪಕ್ಷದ (ಎಎಪಿ) ಸಾಮಾಜಿಕ ಮಾಧ್ಯಮ ತಂಡದೊಂದಿಗೆ ಸ್ವಯಂಸೇವಕರಾಗಿ ಕೆಲಸ ಮಾಡಿದ್ದಾರೆ.
ಅಭಿಜಿತ್ ತಮ್ಮ ಎಕ್ಸ್ ಖಾತೆಯಲ್ಲಿ ಸಿಜೆಐ ಅವರ ಹೇಳಿಕೆಯನ್ನು ಖಂಡಿಸಿ ಪೋಸ್ಟ್ ಹಂಚಿಕೊಂಡಿದ್ದರು. 'ಸಿಜೆಐ ಅವರು ಯುವಜನತೆಯನ್ನು ಟೀಕಿಸಿದ್ದಾರೆ ಎನ್ನುವ ಮಾಧ್ಯಮ ವರದಿಗಳು ನೋವುಂಟು ಮಾಡಿದೆ. ಕಾಕ್ರೋಚ್ ಜನತಾ ಪಕ್ಷದ ಸ್ಥಾಪಕನಾಗಿ ನಾನು ಈ ಹೇಳಿಕೆಯನ್ನು ಖಂಡಿಸುತ್ತೇನೆ' ಎಂದಿದ್ದಾರೆ.

ಪಕ್ಷದ ವೆಬ್ಸೈಟ್
ಪ್ರಣಾಳಿಕೆಯನ್ನೂ ತಯಾರಿಸಿದ ಸಿಜೆಪಿ
ಪಕ್ಷವು ಭಾರತದ ಸಂವಿಧಾನದಲ್ಲಿ ದೃಢ ನಂಬಿಕೆಯನ್ನು ಹೊಂದಿದೆ ಮತ್ತು ಅದರ ಮೌಲ್ಯಗಳನ್ನು ರಕ್ಷಿಸಲು ಕೆಲಸ ಮಾಡಲಿದೆ. ನಮ್ಮ ಪಕ್ಷವು ಐದು ವಿಚಾರಗಳನ್ನು ಒಳಗೊಂಡ ಪ್ರಣಾಳಿಕೆಯನ್ನೂ ಹೊಂದಿದೆ ಎಂದು ಪಕ್ಷ ಹೇಳಿದೆ.
ಒಂದು ವೇಳೆ ಸಿಜೆಪಿ ಅಧಿಕಾರಕ್ಕೆ ಬಂದರೆ...
ಯಾವುದೇ ಮುಖ್ಯ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರದ ಬಹುಮಾನವಾಗಿ ರಾಜ್ಯಸಭಾ ಸ್ಥಾನವನ್ನು ನೀಡಲಾಗದು
ಸಂಸತ್ನಲ್ಲಿ ಮಹಿಳೆಯರಿಗೆ ಶೇ 50 ರಷ್ಟು ಮೀಸಲಾತಿ ನೀಡಲಾಗುವುದು
ಪಕ್ಷಾಂತರದ ಸಂದರ್ಭದಲ್ಲಿ ಸಂಸದರು ಮತ್ತು ಶಾಸಕರು 20 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ,
ಕಾನೂನುಬದ್ಧ ಮತ ಅಳಿಸುವಿಕೆ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು (ಸಿಇಸಿ) ಬಂಧಿಸಲಾಗುವುದು
ಅಂಬಾನಿ ಮತ್ತು ಅದಾನಿ ಒಡೆತನದ ಎಲ್ಲಾ ಮಾಧ್ಯಮ ಸಂಸ್ಥೆಗಳ ಪರವಾನಗಿಗಳನ್ನು ರದ್ದುಗೊಳಿಸಲಾಗುವುದು ಎನ್ನುವ ಅಂಶಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಕ್ರೇಜ್
ಕಳೆದ ಮೂರು ದಿನಗಳ ಹಿಂದೆ ಸಿಜೆಪಿ ಇನ್ಸ್ಟಾಗ್ರಾಂನಲ್ಲಿ ಖಾತೆ ತೆರೆದಿದೆ. ಮೊದಲ ಪೋಸ್ಟ್ ಆಗಿ ಜಿರಳೆಗಳ ಪಕ್ಷಕ್ಕೆ 25 ಸಾವಿರ ಜನ ಸೇರಿದ್ದಾರೆ, ನೀವು ಸೇರಬಹುದು ಎಂದು ವೆಬ್ಸೈಟ್ ಲಿಂಕ್ ಹಂಚಿಕೊಂಡಿದೆ. ಮೂರೇ ದಿನಗಳಲ್ಲಿ ಖಾತೆಗೆ ಫಾಲೋವರ್ಸ್ಗಳ ಸಂಖ್ಯೆ ಮೂರೂವರೆ ಲಕ್ಷವನ್ನು ಮುಟ್ಟುತ್ತಿದೆ. ಎಕ್ಸ್ ಖಾತೆಯಲ್ಲಿ 80 ಸಾವಿರಕ್ಕೂ ಹೆಚ್ಚು ಜನ ಫಾಲೋ ಮಾಡುತ್ತಿದ್ದಾರೆ.
ಯುವ ಜನರ ಅಭಿಪ್ರಾಯಕ್ಕೆ ಮಣೆ
ಕಾಕ್ರೋಚ್ ಜನತಾ ಪಕ್ಷ ಭಾರತದ ಭವಿಷ್ಯವನ್ನು ನಿರ್ಧರಿಸುವ ಯುವ ಜನರ ವೇದಿಕೆಯಾಗಿದೆ. ಪಕ್ಷವು ಗಮನಹರಿಸಬೇಕಾದ ವಿಷಯಗಳು ಮತ್ತು ಯುವ ಜನರು ನೋಡಲು ಬಯಸುವ ಬದಲಾವಣೆಯ ಕುರಿತು ಯುವ ನಾಗರಿಕರಿಂದ ಸಲಹೆಗಳು, ಆಲೋಚನೆಗಳು ಮತ್ತು ಪ್ರತಿಕ್ರಿಯೆಗಳನ್ನು ಆಹ್ವಾನಿಸುವ ರಾಷ್ಟ್ರವ್ಯಾಪಿ ಉಪಕ್ರಮವನ್ನು ಸಿಜೆಪಿ ಪ್ರಾರಂಭಿಸಲಿದೆ ಎಂದೂ ಬರೆದುಕೊಂಡಿದೆ.
ಮಾಹಿತಿ: ಡೆಕ್ಕನ್ ಹೆರಾಲ್ಡ್, ಇಂಡಿಯಾ ಟುಡೇ, ಸಿಜೆಪಿ ವೆಬ್ಸೈಟ್

