ವಾಷಿಂಗ್ಟನ್: 'ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಇರಾನ್ ಜತೆಗೆ ನಡೆಯುತ್ತಿರುವ ಮಾತುಕತೆಯಲ್ಲಿ ಮಹತ್ತರ ಪ್ರಗತಿ ಕಂಡುಬಂದಿದೆ' ಎಂದು ಅಮೆರಿಕ ಮತ್ತು ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ ಬುಧವಾರ ಹೇಳಿಕೊಂಡಿವೆ.
'ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಮಾತುಕತೆ ಪ್ರಗತಿಯಲ್ಲಿದೆ' ಎಂದು ಇರಾನ್‌ನ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.
'ಆದರೆ, ಅಮೆರಿಕದೊಂದಿಗೆ ಅಂತಿಮ ಒಪ್ಪಂದ ಮಾಡಿಕೊಳ್ಳಲು ಇರಾನ್ ಒಪ್ಪದಿದ್ದರೆ ಮತ್ತೆ ಬಾಂಬ್ ದಾಳಿ ಆರಂಭಿಸಲಾಗುವುದು. ಅಲ್ಲಿಯವರೆಗೆ ಅಮೆರಿಕದ ಹಡಗುಗಳು ಹೊರ್ಮುಜ್ ಜಲಸಂಧಿ ದಾಟಲು ಬೆಂಗಾವಲಾಗಿ ಯುದ್ಧನೌಕೆಗಳನ್ನು ನಿಯೋಜಿಸಿದ್ದ 'ಪ್ರಾಜೆಕ್ಟ್ ಫ್ರೀಡಂ' ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
'ಇರಾನ್ ಅಂತಿಮ ಒಪ್ಪಂದಕ್ಕೆ ಸಹಿ ಹಾಕುತ್ತದೆಯೋ ಎನ್ನುವುದನ್ನು ನೋಡೋಣ, ಅಲ್ಲಿಯವರೆಗೆ 'ಪ್ರಾಜೆಕ್ಟ್ ಫ್ರೀಡಂ' ನಿಲ್ಲಿಸಿದ್ದೇವೆ' ಎಂದು ಟ್ರಂಪ್ ಅವರು ಟ್ರೂಥ್ ಸೋಷಿಯಲ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಅಂತಿಮ ಒಪ್ಪಂದ ಒಳಗೊಂಡಿರುವ ಅಂಶಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಟ್ರಂಪ್ ಬಹಿರಂಗಪಡಿಸಿಲ್ಲ.
ಶೆಹಬಾಜ್ ಷರೀಫ್‌ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷಮಾತುಕತೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ. ಇರಾನ್ ಜತೆಗೆ ಶೀಘ್ರದಲ್ಲೇ ಪೂರ್ಣ ಮತ್ತು ಅಂತಿಮ ಒಪ್ಪಂದ ಏರ್ಪಡಲಿದೆ ಶೆಹಬಾಜ್ ಷರೀಫ್ ಪಾಕಿಸ್ತಾನದ ಪ್ರಧಾನಿಅಮೆರಿಕ-ಇರಾನ್ ನಡುವಿನ ಅಂತಿಮ ಒಪ್ಪಂದವು ಪಶ್ಚಿಮ ಏಷ್ಯಾ ಮತ್ತು ಅದರ ಆಚೆಗೂ ಶಾಂತಿ ಸ್ಥಿರತೆ ಮರು ಸ್ಥಾಪಿಸುತ್ತದೆ ಎಂಬ ಭರವಸೆಯನ್ನು ಹೊಂದಿದ್ದೇವೆ
'ಶೀಘ್ರದಲ್ಲೇ ಅಂತಿಮ ಮಾತುಕತೆ'
'ಯುದ್ಧ ಕೊನೆಗೊಳಿಸಿ ಹೊರ್ಮುಜ್ ಜಲಸಂಧಿ ತೆರೆಯುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳು ಅಂತಿಮ ಹಂತದಲ್ಲಿವೆ. ಒಂದು ಪುಟದ ಒಪ್ಪಂದ ಪತ್ರಕ್ಕೆ ಅಮೆರಿಕ-ಇರಾನ್ ಬಹುತೇಕ ಒಪ್ಪಿಕೊಂಡಿವೆ. ಜಿನೀವಾ ಅಥವಾ ಇಸ್ಲಾಮಾಬಾದ್‌ನಲ್ಲಿ 30 ದಿನಗಳ ಅಂತಿಮ ಸುತ್ತಿನ ಮಾತುಕತೆ ನಡೆಯಲಿದೆ' ಎಂದು ಅಮೆರಿಕದ ಇಬ್ಬರು ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿ 'ಆಕ್ಸಿಯೊಸ್' ಸುದ್ದಿಸಂಸ್ಥೆ ವರದಿ ಮಾಡಿದೆ.
ಹೊರ್ಮುಜ್ ತೆರೆಯಿರಿ: ಇರಾನ್‌ಗೆ ಚೀನಾ ಒತ್ತಡ
ಬೀಜಿಂಗ್: 'ಹೊರ್ಮುಜ್ ಜಲಸಂಧಿಯನ್ನು ತ್ವರಿತವಾಗಿ ಸಂಚಾರಕ್ಕೆ ಮುಕ್ತಗೊಳಿಸಿ ಇಲ್ಲದಿದ್ದರೆ ಇರಾನ್ ಅನ್ನು ಜಾಗತಿಕವಾಗಿ ಪ್ರತ್ಯೇಕಿಸಲಾಗುವುದು' ಎಂದು ಇರಾನ್ ಮೇಲೆ ಚೀನಾ ಒತ್ತಡ ಹೇರಿದೆ. 'ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ' ಎಂಬ ಇರಾನ್ ಹೇಳಿಕೆಯನ್ನು ಚೀನಾ ಶ್ಲಾಘಿಸಿದೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಇರಾನ್‌ನ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಅವರೊಂದಿಗೆ ನಡೆಸಿದ ಮಾತುಕತೆಯಲ್ಲಿ ಹೊರ್ಮುಜ್ ಜಲಸಂಧಿಯನ್ನು ಆದಷ್ಟು ಬೇಗ ಸಂಚಾರಕ್ಕೆ ಮುಕ್ತಗೊಳಿಸಬೇಕು. ಇದು ಅಂತರರಾಷ್ಟ್ರೀಯ ಸಮುದಾಯ ಬೇಡಿಕೆ ಆಗಿದೆ ಎನ್ನುವುದನ್ನು ಮನವರಿಕೆ ಮಾಡಿದ್ದಾರೆ' ಎಂದು ಮೂಲಗಳು ಹೇಳಿವೆ. 'ಸಮಗ್ರ ಕದನ ವಿರಾಮ ಜಾರಿಗೊಳಿಸುವುದು ತುರ್ತು ಆದ್ಯತೆಯಾಗಿದೆ ಎಂದು ಚೀನಾ ಭಾವಿಸುತ್ತದೆ' ಎಂದು ವಾಂಗ್ ಯಿ ಹೇಳಿದ್ದಾರೆ. 'ಹೊರ್ಮುಜ್ ಜಲಸಂಧಿ ಸಮಸ್ಯೆ ಇತ್ಯರ್ಥಪಡಿಸಲು ಆದ್ಯತೆ ನೀಡುತ್ತೇವೆ' ಎಂದು ಅರಾಘ್ಚಿ ಹೇಳಿದ್ದಾರೆ.

