ಚಹಾವು ಪ್ರತಿ ಋತುವಿನಲ್ಲಿಯೂ ದೇಶಾದ್ಯಂತ ಇಷ್ಟಪಟ್ಟು ಬಳಸುವ ಪಾನೀಯ. ನಮ್ಮ ದೇಶದಲ್ಲಿ, ಚಹಾಗೆ ಒಂದು ವಿಶೇಷ ಸ್ಥಾನವಿದೆ. ನಮ್ಮಲ್ಲಿ ಚಹಾ ಒಂದು ರೀತಿಯ ಟಾನಿಕ್ ಇದ್ದ ಹಾಗೆ. ಬೆಳಿಗ್ಗೆ ಎದ್ದ ಕ್ಷಣದಿಂದ ಸಂಜೆಯ ಆಯಾಸ ನಿವಾರಿಸುವವರೆಗೆ ಮನಸ್ಸಿಗೆ ಮುದ ನೀಡುವ ಏಕೈಕ ಪಾನೀಯವೆಂದರೆ ಅದು ಚಹಾ.
ಇದು ಕೇವಲ ಪಾನೀಯ ಎಂದರೆ ತಪ್ಪಾದೀತು. ಅದೆಷ್ಟೋ ಭಾರತೀಯರ ಜೀವನದ ಅವಿಭಾಜ್ಯ ಅಂಗ ಈ ಟೀ. ಇದಿಲ್ಲದೆ ಕೆಲವರ ದಿನ ಶುರುವಾಗುವುದೂ ಇಲ್ಲ, ಅಂತ್ಯವಾಗುವುದೂ ಇಲ್ಲ. ಎದ್ದ ತಕ್ಷಣ, ಮಲಗುವ ಮುನ್ನ ಕೆಲವರಿಗೆ ಚಹಾ ಬೇಕೇ ಬೇಕು. ಇನ್ನು ಕೆಲವರಂತೂ ದಿನಕ್ಕೆ ನೀರು ಕುಡಿಯುತ್ತಾರೋ ಇಲ್ಲವೋ ಆದರೆ ಚಹಾದ ಗುಟುಕು ಮಾತ್ರ ಹೀರುತ್ತಲೇ ಇರಬೇಕು.
ಬೆಳಿಗ್ಗೆ ಎದ್ದ ಕೂಡಲೇ, ಕೆಲಸದ ಬಿಡುವಿನ ವೇಳೆಯಲ್ಲಿ ಆಯಾಸ ನಿವಾರಣೆಗೆ, ತಲೆನೋವು ಗುಣಪಡಿಸುವುದಕ್ಕೆ, ಮನಸ್ಸು ಸರಿ ಇಲ್ಲ ಎಂದಾಗ ಹೀಗೆ ಚಹಾ ಕುಡಿಯುವುದಕ್ಕೆ ಒಂದು ಕಾರಣ ಬೇಕು. ಅಷ್ಟರ ಮಟ್ಟಿಗೆ ಈ ಚಹಾ ನಮ್ಮ ಜೀವನದಲ್ಲಿ ಬೆರೆತು ಹೋಗಿದೆ. ಆದರೆ ವಿಭಿನ್ನ ಮನಸ್ಥಿತಿಗಳಿಗೆ ಅನುಗುಣವಾಗಿ ಚಹಾದ ವಿಭಿನ್ನ ರುಚಿಗಳನ್ನು ಸೇವಿಸಬೇಕು ಎನ್ನುವ ಅರಿವು ನಿಮಗಿದೆಯೇ? ಹೌದು ಚಹಾದಲ್ಲಿ ಕೂಡಾ ನೂರಾರು ವಿಧವಿದೆ. ಹಾಗಾಗಿ ನಮ್ಮ ಮನಸ್ಥಿತಿಗೆ ತಕ್ಕಂತೆ ಚಹಾ ಕುಡಿದರೆ ಅದರಿಂದ ಸಿಗುವ ಆನಂದವೂ ದುಪ್ಪಟ್ಟಂತೆ.
ಯಾವ ಮನಸ್ಥಿತಿಗೆ ಯಾವ ಚಹಾ ಉತ್ತಮ:
ಮಲಗುವ ಮುನ್ನ ಲ್ಯಾವೆಂಡರ್ ಚಹಾ:
ಮಲಗುವ ಮುನ್ನ ಲ್ಯಾವೆಂಡರ್ ರುಚಿಯ ಚಹಾವನ್ನು ಕುಡಿಯಬೇಕು. ಏಕೆಂದರೆ ಅದರ ಸುವಾಸನೆಯು ನಿಮ್ಮ ಮನಸ್ಸು ಮತ್ತು ದೇಹ ಎರಡಕ್ಕೂ ವಿಶ್ರಾಂತಿ ನೀಡುವ ಮೂಲಕ ಉಲ್ಲಾಸಗೊಳಿಸುತ್ತದೆ. ಲ್ಯಾವೆಂಡರ್ ರುಚಿಯ ಚಹಾವನ್ನು ತಯಾರಿಸಲು, 2 ಕಪ್ ಕುದಿಯುವ ನೀರಿಗೆ ಅರ್ಧ ಟೀಚಮಚ ಲ್ಯಾವೆಂಡರ್ ಸೇರಿಸಿ ಗ್ಯಾಸ್ ಆಫ್ ಮಾಡಿ. ಲ್ಯಾವೆಂಡರ್ ಸಾರ ಬಿಡುಗಡೆಯಾಗುವವರೆಗೆ ಅದನ್ನು ಹಾಗೆಯೇ ನೀರಿನಲ್ಲಿ ನೆನೆಯಲು ಬಿಡಿ. ಈ ಪ್ರಕ್ರಿಯೆಯು 15 ರಿಂದ 20 ನಿಮಿಷಗಳನ್ನು ತೆಗೆದುಕೊಳ್ಳಬಹುದು. ನಂತರ ಟೀಯನ್ನು ಸೋಸಿ ಹಾಗೆಯೇ ಕುಡಿಯಬಹುದು ಅಥವಾ ಕುಡಿಯುವ ಮೊದಲು ರೆಫ್ರಿಜರೇಟರ್‌ನಲ್ಲಿಟ್ಟು ತಣ್ಣಗಾಗಿಸಿಯೂ ಸೇವಿಸಬಹುದು.
ಒತ್ತಡ ನಿವಾರಣೆಗೆ ಕ್ಯಾಮೊಮೈಲ್ ಚಹಾ:
ನೀವು ಒತ್ತಡದಲ್ಲಿದ್ದಾಗಲೆಲ್ಲಾ ಕ್ಯಾಮೊಮೈಲ್ ಚಹಾವನ್ನು ಕುಡಿಯಿರಿ. ಕ್ಯಾಮೊಮೈಲ್ ಚಹಾವನ್ನು ಅತ್ಯುತ್ತಮ ಒತ್ತಡ ನಿವಾರಕವೆಂದು ಪರಿಗಣಿಸಲಾಗುತ್ತದೆ. ಕ್ಯಾಮೊಮೈಲ್ ಚಹಾವನ್ನು ತಯಾರಿಸಲು, 240 ಮಿಲಿ ನೀರನ್ನು ಬಿಸಿ ಮಾಡಿ. ಇಲ್ಲಿ ನೀರನ್ನು ಕುದಿಸಬಾರದು. ಈಗ ಈ ನೀರಿಗೆ 1 ಚಮಚ ಒಣಗಿದ ಕ್ಯಾಮೊಮೈಲ್ ಹೂವುಗಳನ್ನು ಸೇರಿಸಿ. ಹೂವಿನ ಸಾರ ನೀರಿನಲ್ಲಿ ಬೆರೆತ ನಂತರ ಅದನ್ನು ಸೋಸಿ ಕುಡಿಯಬಹುದು.
ದಣಿವು ನಿವಾರಣೆಗೆ ಬ್ಲಾಕ್ ಟೀ:
ದಣಿದಿದ್ದು ದಣಿವು ನಿವಾರಣೆಗೆ ಚಹಾ ಕುಡಿಯುವುದಾದರೆ ಬ್ಲಾಕ್ ಚಹಾ ಸೂಕ್ತವಾದ ಆಯ್ಕೆ. ಬ್ಲಾಕ್ ಚಹಾ ಮೈ ಮನಸ್ಸಿಗೆ ಶಕ್ತಿ ತುಂಬುತ್ತದೆ. ಬ್ಲಾಕ್ ಚಹಾ ತಯಾರಿಸಲು, 2 ಕಪ್ ನೀರನ್ನು ಚೆನ್ನಾಗಿ ಕುದಿಸಿ. ಸ್ವಲ್ಪ ಪ್ರಮಾಣದ ಟೀ ಎಲೆಗಳನ್ನು ಸೇರಿಸಿ ಮುಚ್ಚಿ. 3 ರಿಂದ 4 ನಿಮಿಷಗಳ ನಂತರ ಸೋಸಿ. ನಿಮಗೆ ಅಗತ್ಯ ಎಂದೆನಿಸಿದರೆ ಸಕ್ಕರೆ ಬೆರೆಸಬಹುದು.
ಕೋಪ ಶಾಂತಗೊಳಿಸಲು ಕಿತ್ತಳೆ ಚಹಾ:
ನೀವು ಕೋಪಗೊಂಡಿದ್ದು, ನಿಮ್ಮ ಕೋಪವನ್ನು ಶಾಂತಗೊಳಿಸಲು ಬಯಸುವುದಾದರೆ ಕಿತ್ತಳೆ ಚಹಾ ತುಂಬಾ ಸಹಾಯಕವಾಗಬಹುದು. ಕಿತ್ತಳೆ ಚಹಾ ತಯಾರಿಸಲು, ಒಂದು ಪಾತ್ರೆಯಲ್ಲಿ ನೀರನ್ನು ತುಂಬಿಸಿ ತಾಜಾ ಅಥವಾ ಒಣಗಿದ ಕಿತ್ತಳೆ ಸಿಪ್ಪೆಗಳನ್ನು ಸೇರಿಸಿ. ಮಿಶ್ರಣಕ್ಕೆ ಒಂದು ಚಿಟಿಕೆ ದಾಲ್ಚಿನ್ನಿ ಪುಡಿ ಅಥವಾ ದಾಲ್ಚಿನ್ನಿ ತುಂಡುಗಳನ್ನು ಸೇರಿಸಿ. 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕುದಿಯಲು ಬಿಡಿ. ಕಿತ್ತಳೆ ಚಹಾ ಸಿದ್ಧವಾಗುತ್ತದೆ.
ಖಿನ್ನತೆಯಿಂದ ಹೊರಬರಲು ಮಸಾಲ ಚಹಾ:
ನೀವು ನಕಾರಾತ್ಮಕ ಆಲೋಚನೆಗಳಿಂದಾಗಿ ಖಿನ್ನತೆ ಅನುಭವಿಸುತ್ತಿದ್ದರೆ, ಭಾರತೀಯ ಮಸಾಲಾ ಚಹಾ ಪ್ರಯೋಜನಕಾರಿಯಾಗಿದೆ. ಮಸಾಲಾ ಚಹಾ ತಯಾರಿಸಲು, ಲವಂಗ, ಏಲಕ್ಕಿ, ಕರಿಮೆಣಸು ಮತ್ತು ದಾಲ್ಚಿನ್ನಿಯನ್ನು ಲಘುವಾಗಿ ಹುರಿದುಕೊಳ್ಳಿ. ತಣ್ಣಗಾದ ನಂತರ, ಜಾಯಿಕಾಯಿ ಮತ್ತು ಒಣಗಿದ ಶುಂಠಿಯನ್ನು ಸೇರಿಸಿ ಎಲ್ಲವನ್ನೂ ನುಣ್ಣಗೆ ಪುಡಿಮಾಡಿ. ಪುಡಿಮಾಡಿದ ಮಸಾಲೆಗಳನ್ನು ನೀರಿನಲ್ಲಿ ಕುದಿಸಿ. ಚಹಾ ಎಲೆಗಳನ್ನು ಸೇರಿಸಿ 2 ರಿಂದ 3 ನಿಮಿಷ ಬೇಯಿಸಿ. ಅಂತಿಮವಾಗಿ, ಸಕ್ಕರೆ ಮತ್ತು ಹಾಲು ಸೇರಿಸಿ, 3 ರಿಂದ 4 ನಿಮಿಷಗಳವರೆಗೆ ಮತ್ತೆ ಕುದಿಯಲು ಬಿಡಿ.ನಂತರ ಸೋಸಿ ಚಹಾ ಸೇವಿಸಬಹುದು.

