ಲಂಡನ್: ಬ್ರಿಟನ್ ಸ್ಥಳೀಯ ಮತ್ತು ಪ್ರಾದೇಶಿಕ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಲೇಬರ್ ಪಕ್ಷ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ ನೀಡಬೇಕು ಎಂದು ಲೇಬರ್ ಪಕ್ಷದ 70 ಮಂದಿ ಸಂಸದರು ಆಗ್ರಹಿಸಿದ್ದಾರೆ.
ಸೋಮವಾರ ನಾಲ್ವರು ಸಂಪುಟ ಸಹೋದ್ಯೋಗಿಗಳು ರಾಜೀನಾಮೆ ನೀಡಿದ ಬೆನ್ನಲ್ಲೇ ವಿವಾದ ಉಲ್ಬಣಗೊಂಡಿದ್ದು, 2029ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಟಾರ್ಮರ್ ಪಕ್ಷದ ನಾಯಕತ್ವ ಮುಂದುವರಿಸಬಹುದೇ ಎಂದು ಪಕ್ಷದ ಹಿರಿಯ ಮುಖಂಡರು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಅಧಿಕಾರ ಹಸ್ತಾಂತರ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ವಿದೇಶಾಂಗ ಕಾರ್ಯದರ್ಶಿ ವೈಟ್ ಕೂಪರ್ ಮತ್ತು ರಕ್ಷಣಾ ಸಚಿವರಾದ ಶಬಾನ ಮೊಹ್ಮೂದ್ ಸೇರಿದಂತೆ ಹಲವು ಮಂದಿ ಸಚಿವರು ಆಗ್ರಹಿಸಿದ್ದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
ಲೇಬರ್ ಪಕ್ಷದ ನಿಯಮಾವಳಿಯ ಅನ್ವಯ ನಾಯಕತ್ವ ಬದಲಾವಣೆ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಲು 81 ಮಂದಿ ಸಂಸದರ ಅಗತ್ಯವಿದೆ.
ಸಂಪುಟದಲ್ಲಿ ಭಿನ್ನಮತ ಭುಗಿಲೆದ್ದರೂ, ರಾಜೀನಾಮೆ ನೀಡಲು ಸ್ಟಾರ್ಮರ್ ನಿರಾಕರಿಸಿದ್ದಾರೆ. ತಮ್ಮ ನಾಯಕತ್ವದ ಮೇಲಿನ ವಿಶ್ವಾಸದ ಪುನಃಸ್ಥಾಪನೆಗೆ ಹೋರಾಟ ಮುಂದುವರಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಲಂಡನ್ ನಲ್ಲಿ ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, "ನನ್ನ ಮೇಲೆ ಸಂದೇಹಪಡುವವರಿದ್ದಾರೆ ಎನ್ನುವುದು ನನಗೆ ಗೊತ್ತು; ಅವರ ಅಭಿಪ್ರಾಯ ತಪ್ಪು ಎನ್ನುವುದನ್ನು ನಿರೂಪಿಸುವ ಅಗತ್ಯವಿದೆ. ನಾನದನ್ನು ಮಾಡುತ್ತೇನೆ" ಎಂದು ಸ್ಪಷ್ಟಪಡಿಸಿದರು.
ಇಂಗ್ಲೆಂಡ್ ನಾದ್ಯಂತ ಕೌನ್ಸಿಲ್ ಚುನಾವಣೆಯಲ್ಲಿ ಪಕ್ಷ ಸೋಲು ಅನುಭವಿಸಿರುವುದು ಹಾಗೂ ಸ್ಕಾಟ್ಲೆಂಡ್ ಮತ್ತು ವೇಲ್ಸ್ ನಲ್ಲಿ ಹಿನ್ನಡೆ ಅನುಭವಿಸಿರುವುದು ಲೇಬರ್ ಪಕ್ಷಕ್ಕೆ ಆಘಾತ ತಂದಿದೆ. 1999ರ ಬಳಿಕ ಇದೇ ಮೊದಲ ಬಾರಿಗೆ ವೇಲ್ಸ್ ಸಂಸತ್ತಿನಲ್ಲಿ ಪಕ್ಷ ನಿಯಂತ್ರಣ ಕಳೆದುಕೊಂಡಿದೆ.

