ನವದೆಹಲಿ: ಭಾರತದ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಂಗ್ಯ ಮತ್ತು ಲೇವಡಿಯಾಗಿ ಆರಂಭವಾದ ಕಾಕ್ರೋಚ್ ಜನತಾ ಪಾರ್ಟಿ ಚಳವಳಿ ಇದೀಗ ಗಡಿ ದಾಟಿದ್ದು, ಪಾಕಿಸ್ತಾನದ ರಾಜಕೀಯ ವಲಯದಲ್ಲೂ ಭಾರಿ ಸಂಚಲನ ಮೂಡಿಸಿದೆ.
ಮೇ 16ರಂದು ಆರಂಭವಾದ ಕಾಕ್ರೋಚ್ ಜನತಾ ಪಾರ್ಟಿ ಚಳವಳಿ ದೇಶದ ಇಂಟರ್‌ನೆಟ್ ಜಗತ್ತನ್ನು ಆಳುತ್ತಿದೆ.
ಇದರಿಂದ ಪ್ರೇರಿತರಾದ ಯುವಕರು ಪಾಕಿಸ್ತಾನದಲ್ಲೂ ಕಾಕ್ರೋಚ್ ಪಾರ್ಟಿಯ ಖಾತೆಗಳನ್ನು ತೆರೆಯುತ್ತಿದ್ದಾರೆ.
ಏನಿದು ಕಾಕ್ರೋಚ್ ಜನತಾ ಪಾರ್ಟಿ?
ಯಾರೂ ಸುಲಭವಾಗಿ ಸಾಯಿಸಲು ಸಾಧ್ಯವಾಗದ, ಅತ್ಯಂತ ಹಠಮಾರಿ ಮತ್ತು ಅತಿ ವೇಗವಾಗಿ ಸಂತಾನೋತ್ಪತ್ತಿ ಮಾಡುವ ಕಾಕ್ರೋಚ್ (ಜಿರಳೆ) ಅನ್ನು ಸ್ಪೂರ್ತಿಯಾಗಿಟ್ಟುಕೊಂಡು ದೇಶದಲ್ಲಿ ವ್ಯಂಗ್ಯದ ಮೂಲಕ ಡಿಜಿಟಲ್ ಪಕ್ಷವನ್ನು ಆರಂಭಿಸಲಾಗಿತ್ತು. ಕೇವಲ ಒಂದೇ ವಾರದಲ್ಲಿ ಇದು ಲಕ್ಷಾಂತರ ಹಿಂಬಾಲಕರನ್ನು ಸಂಪಾದಿಸಿದೆ.
ಪಾಕಿಸ್ತಾನದಲ್ಲೂ ಕಾಕ್ರೋಚ್ ಹಾವಳಿ
ಭಾರತದ ಟ್ರೆಂಡ್ ಬೆನ್ನಲ್ಲೇ ಪಾಕಿಸ್ತಾನಿ ಯುವಕರು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಮಾದರಿಗಳಲ್ಲಿ ಕಾಕ್ರೋಚ್ ಪಕ್ಷಗಳನ್ನು ಮುನ್ನೆಲೆಗೆ ತಂದಿದ್ದಾರೆ. ಕಾಕ್ರೋಚ್ ಆವಾಮಿ ಪಾರ್ಟಿ, ಕಾಕ್ರೋಚ್ ಆವಾಮಿ ಲೀಗ್' ಮತ್ತು ಕಾಕ್ರೋಚ್ ಮೂವ್‌ಮೆಂಟ್ ಹೆಸರಿನಲ್ಲಿ ಪೇಜ್‌ಗಳು ಸೃಷ್ಟಿಯಾಗಿವೆ.
ಪಾಕಿಸ್ತಾನದ ಕಾಕ್ರೋಚ್ ಪೇಜ್‌ಗಳು ಭಾರತದ ಕಾಕ್ರೋಚ್ ಜನತಾ ಪಾರ್ಟಿ ಲೋಗೊಗೆ ಹೋಲಿಕೆಯಾಗುತ್ತದೆಯಾದರೂ ಇವರು ಹಸಿರು ಮತ್ತು ಬಿಳಿ ಬಣ್ಣದ ಥೀಮ್ ಬಳಸಿದ್ದಾರೆ
ಇಮ್ರಾನ್ ಖಾನ್ ಅವರ ಪಿಟಿಐ, ನವಾಜ್ ಷರೀಫ್ ಅವರ ಪಿಎಂಎಲ್-ಎನ್ ಮತ್ತು ಪಿಪಿಪಿಯತಹ ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೆ ಪರ್ಯಾಯವಾಗಿ ಈ ಕಾಕ್ರೋಚ್ ಪಡೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣುತ್ತಿವೆ.
ಯುವಕರಿಗಾಗಿ, ಯುವಕರಿಂದಲೇ ರೂಪಿತವಾದ ಪಾಕಿಸ್ತಾನದ ರಾಜಕೀಯ ಮುಂಚೂಣಿ ಎಂದು ಕಾಕ್ರೋಚ್ ಪಾರ್ಟಿ ಬಗ್ಗೆ ಜಾಲತಾಣ ಖಾತೆದಾರರೊಬ್ಬರು ಬರೆದುಕೊಂಡಿದ್ದಾರೆ.
ಮತ್ತೊಂದು ಕಾಕ್ರೋಚ್ ಪಾರ್ಟಿ ಪುಟದಲ್ಲಿ ಯಾರನ್ನು ಈ ವ್ಯವಸ್ಥೆ ಕಾಕ್ರೋಚ್ ಎಂದು ನಿರ್ಲಕ್ಷಿಸುತ್ತದೆಯೊ ನಾವು ಆ ಸಾಮಾನ್ಯ ಜನರ ಧ್ವನಿ ಎಂದು ಬರೆಯುವ ಮೂಲಕ ವ್ಯವಸ್ಥೆಯ ವಿರುದ್ಧ ಯುವಕರು ವ್ಯಂಗ್ಯವಾಡಿದ್ದಾರೆ.
ಯಾರು ಕಾಕ್ರೋಚ್ ಜನತಾ ಪಾರ್ಟಿಯ ಸೂತ್ರಧಾರ?
ಭಾರತದಲ್ಲಿ ಈ ವೈರಲ್ 'ಕಾಕ್ರೋಚ್ ಜನತಾ ಪಾರ್ಟಿಯನ್ನು ಆರಂಭಿಸಿದವರು ಅಭಿಜೀತ್ ದೀಪ್ಕೆ. 30ರ ಹರೆಯದ ಇವರು ಪ್ರಸ್ತುತ ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾರೆ. ಈ ಹಿಂದೆ ಎಎಪಿಯಲ್ಲಿ ರಾಜಕೀಯ ಸಂವಹನ ತಂತ್ರಜ್ಞರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ವಿಶೇಷವೆಂದರೆ ಈ ಕಾಕ್ರೋಚ್ ಜನತಾ ಪಾರ್ಟಿಗೆ ಸ್ವಂತ ಪ್ರಣಾಳಿಕೆ ಮತ್ತು ಅಧಿಕೃತ ವೆಬ್‌ಸೈಟ್ ಕೂಡ ಇದೆ!
ಒಟ್ಟಿನಲ್ಲಿ, ಗಂಭೀರ ರಾಜಕೀಯ ವಿದ್ಯಮಾನಗಳ ನಡುವೆ ಭಾರತದಲ್ಲಿ ಹುಟ್ಟಿಕೊಂಡ ಜಿರಳೆ ರಾಜಕೀಯದ ವ್ಯಂಗ್ಯದ ಅಲೆ ಈಗ ನೆರೆ ರಾಷ್ಟ್ರ ಪಾಕಿಸ್ತಾನದ ಯುವಕರನ್ನೂ ಆವರಿಸಿಕೊಂಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

