ನವದೆಹಲಿ: ಬಕ್ರೀದ್ ಹಬ್ಬದ ರಜಾ ದಿನ ಬದಲಾಗಿರುವ ಕಾರಣ, ಮೇ 28ರಂದು ನಡೆಯಬೇಕಿದ್ದ ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ-ಯುಜಿ) 2026 ಅನ್ನು ಮುಂದೂಡಲಾಗಿದೆ.
ಈ ಬಗ್ಗೆ ಪ್ರಕಟಣೆ ನೀಡಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್‌ಟಿಎ), 'ಪರಿಷ್ಕೃತ ದಿನಾಂಕವನ್ನು ಘೋಷಿಸಲಾಗುವುದು' ಎಂದು ತಿಳಿಸಿದೆ.
'ಬಕ್ರೀದ್ ಹಬ್ಬದ ಪ್ರಯುಕ್ತ ನೀಡಲಾಗುವ ರಜಾ ದಿನವನ್ನು ಪರಿಷ್ಕರಿಸಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಅಧಿಸೂಚನೆ ಹೊರಡಿಸಿರುವುದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ' ಎಂದು ಎನ್‌ಟಿಎ ತಿಳಿಸಿದೆ.
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗಮನಿಸಬೇಕು ಮತ್ತು ಮಾಹಿತಿ ಬೇಕಾದಲ್ಲಿ ಸಹಾಯವಾಣಿಯನ್ನು ಸಂಪರ್ಕಿಸುವಂತೆ ಎನ್‌ಟಿಎ ಸಲಹೆ ನೀಡಿದೆ.

