ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ಹಿಂದಿನ ತಪ್ಪುಗಳಿಂದ ಪಾಠ ಕಲಿಯದಿರುವುದು ದುಃಖಕರ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್) ನಡೆಸುವ ಎನ್‌ಟಿಎ ಪುನರ್ ರಚಿಸಬೇಕು ಮತ್ತು ಸ್ವಾಯತ್ತತೆ ನೀಡಬೇಕು.
ಇಲ್ಲವೇ ಸದೃಢವಾದ ಹೊಸ ಸಂಸ್ಥೆ ರಚಿಸಬೇಕು ಎಂದು ಅಖಿಲ ಭಾರತೀಯ ವೈದ್ಯರ ಒಕ್ಕೂಟ (ಎಫ್‌ಎಐಎಂಎ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಕೇಂದ್ರ ಸರ್ಕಾರ, ಎನ್‌ಟಿಎ ಮತ್ತು ಸಿಬಿಐಗೆ ಮೂರು ದಿನದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.
ನೀಟ್ ಪರೀಕ್ಷೆ ನಡೆಸುವ ಜವಾಬ್ದಾರಿ ಹೊತ್ತಿರುವ ಎನ್‌ಟಿಎ, 2024ರಲ್ಲಿ ನ್ಯಾಯಾಲಯ ಹೊರಡಿಸಿದ ನಿರ್ದೇಶನಗಳ ಅನುಪಾಲನಾ ವರದಿ ಕುರಿತು ಗುರುವಾರ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿದ್ದು, ಶುಕ್ರವಾರ ವಿಚಾರಣೆಗೆ ಪಟ್ಟಿ ಮಾಡಿದೆ.
'ಹಿಂದಿನ ವರ್ಷವೂ ಪ್ರಶ್ನೆಪತ್ರಿಕೆ ಸೋರಿಕೆ ಆಗಿತ್ತು. ನ್ಯಾಯಾಲಯ ವಿಚಾರಣೆ ನಡೆಸಿತ್ತು. ಮೇಲ್ವಿಚಾರಣಾ ಸಮಿತಿಯು ಕೆಲವು ಶಿಫಾರಸು ಮಾಡಿತ್ತು. ಅವುಗಳನ್ನು ಸ್ವೀಕರಿಸಲಾಗಿತ್ತು. ಸಮಿತಿ ಸೂಚಿಸಿದ ಶಿಫಾರಸು ಜಾರಿಗೊಳಿಸಲು ತೆಗೆದುಕೊಂಡ ಕ್ರಮಗಳ ಕುರಿತಂತೆ ಎನ್‌ಟಿಎ ಪ್ರಮಾಣಪತ್ರ ಸಲ್ಲಿಸಬೇಕು ಎಂಬುದನ್ನು ನಾವು ಬಯಸುತ್ತೇವೆ' ಎಂದು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರಿದ್ದ ಪೀಠವು ಹೇಳಿದೆ.
ಕೇಂದ್ರ ಸರ್ಕಾರವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್ ನೇತೃತ್ವದಲ್ಲಿ ರಚಿಸಿರುವ ಸಮಿತಿಗೆ ಎನ್‌ಟಿಎ ಕಾರ್ಯಚಟುವಟಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸುವಂತೆಯೂ ನಿರ್ದೇಶಿಸಿದೆ.
ಮರು ಪರೀಕ್ಷೆಯ ಮೇಲ್ವಿಚಾರಣೆ ಮಾಡಲು ನೂತನ ಸಂಸ್ಥೆಯನ್ನು ರಚಿಸುವವರೆಗೂ ಉನ್ನತ ಮಟ್ಟದ ಮೇಲ್ವಿಚಾರಣಾ ಸಮಿತಿಯನ್ನು ನೇಮಿಸುವ ನಿರ್ದೇಶನವನ್ನು ನೀಡಬೇಕು ಎಂದು ಎಫ್‌ಎಐಎಂಎ ತನ್ನ ಅರ್ಜಿಯಲ್ಲಿ ಕೋರಿದೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಬೇಕು. ಸೈಬರ್ ಭದ್ರತಾ ತಜ್ಞರು, ವಿಧಿವಿಜ್ಞಾನ ವಿಜ್ಞಾನಿಗಳು ಈ ಸಮಿತಿಯಲ್ಲಿ ಇರಬೇಕು. ಸೋರಿಕೆ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದಿದೆ.
2024ರಲ್ಲಿ ನೀಟ್- ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆಯು ಸೋರಿಕೆಯಾದ ನಂತರ ಪರೀಕ್ಷೆಯನ್ನು ರದ್ದುಗೊಳಿಸಲು ನಿರಾಕರಿಸಿದ್ದ ಸುಪ್ರೀಂ ಕೋರ್ಟ್, ಪ್ರಶ್ನೆಪತ್ರಿಕೆ ಸೋರಿಕೆ ಆಗದಂತೆ ನಿಭಾಯಿಸುವ ಗುರಿ ಹೊಂದಿದ್ದ ವಿವಿಧ ನಿರ್ದೇಶನ ನೀಡಿತ್ತು.
ರಾಧಾಕೃಷ್ಣನ್ ಸಮಿತಿಯ ಶಿಫಾರಸುಗಳಾದ ಪರೀಕ್ಷಾ ಭದ್ರತೆ, ಪ್ರಶ್ನೆಪತ್ರಿಕೆಗಳ ಸಾಗಣೆ. ಸಿ.ಸಿ.ಟಿ.ವಿ. ಕ್ಯಾಮೆರಾ ಕಣ್ಗಾವಲು, ಅಭ್ಯರ್ಥಿಗಳ ಪರಿಶೀಲನೆ, ಗೂಢಲಿಪೀಕರಣ ಶಿಷ್ಟಾಚಾರ, ತಾಂತ್ರಿಕ ಸುರಕ್ಷತೆ, ನೈಜ ಸಮಯದ ಮೇಲ್ವಿಚಾರಣೆ, ಕುಂದು ಕೊರತೆ ಪರಿಹಾರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಆದೇಶವನ್ನು ಪೀಠವು ವಿಸ್ತರಿಸಿದೆ.

