ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರು ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳು ಸರಣಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಕಲೆ ಹಾಕಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಲಖನೌನ ವಿಧಾನಸಭೆ, ಬಾಪು ಭವನ, ಇಮಾಂಬರಾ, ಲಾಲ್ ಬಾಗ್ ಮತ್ತು ಅಮೀನಾಬಾದ್‌ನಂತಹ ಹೆಚ್ಚು ಜನದಟ್ಟಣೆ ಇರುವ ಇತರ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯೋಜನೆ ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಡಾ. ಮುಜಮ್ಮಿಲ್ ಶಕೀಲ್ ಮತ್ತು ಡಾ. ಶಾಹೀನ್ ಸಯೀದ್, ಈ ಭಯೋತ್ಪಾದನಾ ಸಂಚಿನ ಭಾಗವಾಗಿ 2025ರ ಆಗಸ್ಟ್ 25 ಮತ್ತು 30ರ ನಡುವೆ ಹರಿಯಾಣದ ಫರಿದಾಬಾದ್‌ನಿಂದ ಲಖನೌವರೆಗೆ ರಹಸ್ಯವಾಗಿ ಪ್ರಯಾಣಿಸಿದ್ದರು ಎಂದು ಮೂಲಗಳು ಖಚಿತಪಡಿಸಿವೆ.
ಆರೋಪಿ ಮುಜಮ್ಮಿಲ್ ಉತ್ತರ ಪ್ರದೇಶ ಸರ್ಕಾರದ ಕಟ್ಟಡಗಳ ಸುತ್ತಮುತ್ತ ಗುಟ್ಟಾಗಿ ಪರಿಶೀಲನೆ ನಡೆಸಿದ್ದ. ಲಖನೌ ವಿಧಾನಸಭೆ, ಬಾಪು ಭವನ, ಇಮಾಂಬರ, ಲಾಲ್ ಬಾಗ್ ಮತ್ತು ಅಮೀನಾಬಾದ್ ಪ್ರದೇಶಗಳಲ್ಲಿ ಆತ ಸಂಚರಿಸಿ ಮಾಹಿತಿ ಕಲೆಹಾಕಿದ್ದನು. ಅಲ್ಲದೇ ಸ್ಫೋಟಕ ತುಂಬಿದ್ದ ಕಾರು ನಿಲ್ಲಿಸಿ ಸ್ಫೋಟಿಸಲು ಯೋಜಿಸಲಾಗಿತ್ತು ಎಂದು ಮೂಲಗಳು ಬಹಿರಂಗಪಡಿಸಿವೆ.
ತನ್ನ ಮೊಬೈಲ್‌ನಲ್ಲೇ ಕೆಮಿಕಲ್ ಶಾಪ್‌ಗಳ ಹುಡುಕಾಟ
ಕಳೆದ ವರ್ಷದ ನವೆಂಬರ್ 10ರಂದು ದೆಹಲಿಯ ಕೆಂಪುಕೋಟೆಯ ಬಳಿ ನಡೆದ ಕಾರು ಸ್ಫೋಟದಲ್ಲಿ ಅತ್ಯಂತ ಅಪಾಯಕಾರಿಯಾಗಿರುವ ಟ್ರಯಾಸಿಟೋನ್ ಟ್ರೈಪೆರಾಕ್ಸೈಡ್ ಅನ್ನು ಬಳಸಲಾಗಿತ್ತು. ಇದನ್ನು ತಯಾರಿಸಲು ಬೇಕಾಗುವ ಎರಡು ಪ್ರಮುಖ ರಾಸಾಯನಿಕಗಳನ್ನು ಖರೀದಿಸಲು ಲಖನೌನಲ್ಲಿರುವ ಕೆಮಿಕಲ್ ಶಾಪ್‌ಗಳ ಬಗ್ಗೆ ಆರೋಪಿ ಮುಜಮ್ಮಿಲ್ ತನ್ನ ಮೊಬೈಲ್ ಮೂಲಕ ಹುಡುಕಾಟ ನಡೆಸಿದ್ದನು. ಮುಜಮ್ಮಿಲ್ ಸೂಚನೆಯ ಮೇರೆಗೆ ಶಾಹೀನ್ ಈ ಅಂಗಡಿಗಳ ಹೆಸರುಗಳನ್ನು ಕೈಬರಹದಲ್ಲಿ ಬರೆದಿಟ್ಟುಕೊಂಡಿದ್ದಳು. ನಂತರ ಆಕೆಯ ಫೋನ್‌ನಿಂದ ಎನ್‌ಐಎ ಈ ಪಟ್ಟಿಯನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿಕರೊಬ್ಬರ ಮನೆಯಲ್ಲಿ ತಂಗಿದ್ದ ಆರೋಪಿಗಳು
ಇನ್ನು, ಲಖನೌ ಪ್ರವಾಸದ ವೇಳೆ ಇವರಿಬ್ಬರು ಲಾಲ್ ಬಾಗ್‌ನ ಖಂದಾರಿ ಬಜಾರ್‌ನಲ್ಲಿರುವ ಶಾಹೀನ್ ಅವರ ಸಂಬಂಧಿಕರೊಬ್ಬರ ಮನೆಯಲ್ಲಿ ತಂಗಿದ್ದರು. ಮುಜಮ್ಮಿಲ್ ತಾನು ಹೊರಗಿನವನೆಂದು ಯಾರಿಗೂ ಸಂಶಯ ಬಾರದಿರಲಿ ಎಂಬ ಕಾರಣಕ್ಕೆ ಸ್ಥಳೀಯ ಪರಿಚಯಸ್ಥನೊಬ್ಬನನ್ನು ಬಳಸಿಕೊಂಡು ಆ ರಾಸಾಯನಿಕ ಅಂಗಡಿಗಳಲ್ಲಿ ಭಾರಿ ಪ್ರಮಾಣದಲ್ಲಿ ಕೆಮಿಕಲ್ ಲಭ್ಯವಿರುವ ಬಗ್ಗೆ ವಿಚಾರಣೆ ನಡೆಸಿದ್ದನು. ಜೊತೆಗೆ ಫರಿದಾಬಾದ್‌ನ ಬಾಡಿಗೆ ಮನೆಯಲ್ಲಿ ಸ್ಫೋಟಕ ತಯಾರಿಸುತ್ತಿದ್ದ ಮಾದರಿಯಲ್ಲೇ, ಲಖನೌನ ನಿರ್ಜನ ಪ್ರದೇಶದಲ್ಲೂ ಅಡಗುದಾಣವೊಂದನ್ನು ಹುಡುಕಲು ಅವರು ಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ.
7,500 ಪುಟಗಳ ಬೃಹತ್ ದೋಷಾರೋಪಣೆ ಪಟ್ಟಿ
ಕಳೆದ ವರ್ಷ ನವೆಂಬರ್ 10ರಂದು ದೇಶದವನ್ನು ಬೆಚ್ಚಿಬೀಳಿಸಿದ್ದ ಐಇಡಿ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಮೇ 14ರಂದು ನ್ಯಾಯಾಲಯಕ್ಕೆ 7,500 ಪುಟಗಳ ಬೃಹತ್ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದೆ. ಸಾಕ್ಷಿಗಳ ಹೇಳಿಕೆಗಳು, ತಾಂತ್ರಿಕ ವಿಶ್ಲೇಷಣೆ ಮತ್ತು ಹಣಕಾಸಿನ ವಹಿವಾಟಿನ ಜಾಡು ಹಿಡಿದು ನಡೆಸಿರುವ ತನಿಖೆಯಲ್ಲಿ ಉಗ್ರರ ಲಖನೌ ಭೇಟಿಯ ಸಂಪೂರ್ಣ ವಿವರಗಳು ಲಭ್ಯವಾಗಿವೆ.

