ದೇಶದ ಇಂಧನ ಚಿಲ್ಲರೆ ಮಾರುಕಟ್ಟೆಯ ಶೇಕಡಾ 90 ಕ್ಕಿಂತ ಹೆಚ್ಚು ಪಾಲನ್ನು ನಿಯಂತ್ರಿಸುವ ಮೂರು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಭಾರೀ ಲಾಭ ಗಳಿಸಿವೆ. ಕಳೆದ ಮಾರ್ಚ್ ನಲ್ಲಿ ಜಾಗತಿಕ ಇಂಧನ ಪೂರೈಕೆಯಲ್ಲಿ ಉಂಟಾದ ಅಡಚಣೆಗಳ ಹೊರತಾಗಿಯೂ, ಈ ಕಂಪೆನಿಗಳು 2026ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟು ರೂ 19,470 ಕೋಟಿ ನಿವ್ವಳ ಲಾಭವನ್ನು ದಾಖಲಿಸಿವೆ.
ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 40.74 ರಷ್ಟು ಹೆಚ್ಚಳವಾಗಿದೆ.
2025-26ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ತೈಲ ಮಾರುಕಟ್ಟೆ ಕಂಪೆನಿಗಳು ಭರ್ಜರಿ ಲಾಭ ಗಳಿಸಿದ್ದರೆ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನ ನಿವ್ವಳ ಲಾಭದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಫೆಬ್ರವರಿ 28ರಂದು ಯುದ್ಧ ಆರಂಭವಾಗುವ ಮೊದಲು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ ಸುಮಾರು 72 ಡಾಲರ್ ಇತ್ತು. ಆದರೆ ಮಾರ್ಚ್ 9ರ ವೇಳೆಗೆ ಅದು ಶೇ. 66.7 ಕ್ಕಿಂತ ಹೆಚ್ಚು ಜಿಗಿದು ಸುಮಾರು 120 ಡಾಲರ್ ಗೆ ತಲುಪಿತ್ತು. ಎಪ್ರಿಲ್ ನಲ್ಲಿಯೂ ಗರಿಷ್ಠ ಮಟ್ಟದಲ್ಲೇ ಇದ್ದ ತೈಲ ಬೆಲೆ, ಮೇ ತಿಂಗಳಲ್ಲಿ ಸ್ವಲ್ಪ ಕುಸಿದಿದ್ದು, ಬುಧವಾರದ ವೇಳೆಗೆ ಗರಿಷ್ಠ ಮಟ್ಟದಿಂದ ಶೇ. 14ರಷ್ಟು ಕುಸಿದು ಪ್ರತಿ ಬ್ಯಾರೆಲ್ಗೆ ಸುಮಾರು 105.6 ಡಾಲರ್ ಗೆ ತಲುಪಿದೆ.
ಈ ವಾರ ಪ್ರಕಟವಾದ ಕಂಪೆನಿಗಳ ಹಣಕಾಸು ವರದಿಯ ಪ್ರಕಾರ, ಈ ಮೂರು ಕಂಪೆನಿಗಳ ಒಟ್ಟು ವಾರ್ಷಿಕ ನಿವ್ವಳ ಲಾಭವು 2025-26ರಲ್ಲಿ ಶೇಕಡಾ 130 ರಷ್ಟು ಜಿಗಿದು ರೂ 77,280.65 ಕೋಟಿಗೆ ತಲುಪಿದೆ. 2024-25ರ ಹಣಕಾಸು ವರ್ಷದಲ್ಲಿ ಇದು ಕೇವಲ ರೂ 33,601.57 ಕೋಟಿಯಾಗಿತ್ತು. ವರ್ಷದ ಬಹುಪಾಲು ಅವಧಿಯಲ್ಲಿ ತೈಲ ಬೆಲೆಗಳು ಸ್ಥಿರವಾಗಿದ್ದುದೇ ಈ ಅತ್ಯುತ್ತಮ ಸಾಧನೆಗೆ ಪ್ರಮುಖ ಕಾರಣವಾಗಿದೆ. ಕಚ್ಚಾ ವಸ್ತುಗಳ ಬೆಲೆ ತುಲನಾತ್ಮಕವಾಗಿ ಕಡಿಮೆಯಿದ್ದು, ಸಿದ್ಧ ಉತ್ಪನ್ನಗಳ ಬೆಲೆ ಸ್ಥಿರವಾಗಿದ್ದರಿಂದ ಈ ಕಂಪೆನಿಗಳು ಹೆಚ್ಚಿನ ರಿಫೈನಿಂಗ್ ಮತ್ತು ಮಾರ್ಕೆಟಿಂಗ್ ಲಾಭಾಂಶವನ್ನು ಗಳಿಸಿಕೊಂಡವು.
►ಕಂಪೆನಿವಾರು ಲಾಭದ ವಿವರ
►ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್
ಮೇ 13ರಂದು ತನ್ನ ವರದಿಯನ್ನು ಪ್ರಕಟಿಸಿದ ಊPಅಐ, ನಾಲ್ಕನೇ ತ್ರೈಮಾಸಿಕದಲ್ಲಿ ರೂ 4,901.50 ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 46 ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಇದು ರೂ 3,355 ಕೋಟಿ ಆಗಿತ್ತು. ಇಡೀ ಹಣಕಾಸು ವರ್ಷದಲ್ಲಿ ಕಂಪೆನಿಯ ನಿವ್ವಳ ಲಾಭ ಶೇ. 133.2 ರಷ್ಟು ಜಿಗಿದು ರೂ 17,175.23 ಕೋಟಿಗೆ ತಲುಪಿದೆ. ಕಳೆದ ಹಣಕಾಸು ವರ್ಷದಲ್ಲಿ ಇದು ರೂ 7,365 ಕೋಟಿ ಆಗಿತ್ತು. ಕಂಪೆನಿಯು 2025-26ರ ಹಣಕಾಸು ವರ್ಷಕ್ಕಾಗಿ 10 ರೂಪಾಯಿ ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ ರೂ 19.25 ಅಂತಿಮ ಲಾಭಾಂಶವನ್ನು ಘೋಷಿಸಿದೆ. ಇದು ಈಗಾಗಲೇ ನೀಡಲಾಗಿರುವ ಪ್ರತಿ ಈಕ್ವಿಟಿ ಷೇರಿಗೆ ರೂ 5 ಮಧ್ಯಂತರ ಲಾಭಾಂಶದ ಜೊತೆಗೆ ಹೆಚ್ಚುವರಿಯಾಗಿ ಸಿಗಲಿದೆ.
►ಇಂಡಿಯನ್ ಆಯಿಲ್ ಕಾರ್ಪೊರೇಷನ್ :
ಮೇ 18ರಂದು ತನ್ನ ಹಣಕಾಸು ವರದಿ ಪ್ರಕಟಿಸಿದ್ದ ಐಒಸಿ, ದೇಶದ ಅತಿ ದೊಡ್ಡ ತೈಲ ಸಂಸ್ಕರಣಾ ಸಂಸ್ಥೆಯಾಗಿದೆ. 2025-26ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪೆನಿ ರೂ 11,377.51 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯ ಲಾಭಕ್ಕೆ (ರೂ 7,264.85 ಕೋಟಿ) ಹೋಲಿಸಿದರೆ ಇದು ಶೇಕಡಾ 56.6 ರಷ್ಟು ಜಿಗಿತವನ್ನು ದಾಖಲಿಸಿದೆ. ಇನ್ನು ಇಡೀ ಹಣಕಾಸು ವರ್ಷದಲ್ಲಿ (2025-26) ಕಂಪೆನಿಯು ರೂ 36,802.42 ಕೋಟಿ ನಿವ್ವಳ ಲಾಭ ದಾಖಲಿಸಿದ್ದು, 2024-25ರ ಲಾಭಕ್ಕೆ (ರೂ 12,961.57 ಕೋಟಿ) ಹೋಲಿಸಿದರೆ ಶೇಕಡಾ 183.9 ಕ್ಕಿಂತಲೂ ಹೆಚ್ಚಿನ ಏರಿಕೆಯಾಗಿದೆ.
ಹೆಚ್ಚಿನ ರಿಫೈನಿಂಗ್ ಮತ್ತು ಮಾರ್ಕೆಟಿಂಗ್ ಲಾಭಾಂಶವೇ ನಮ್ಮ ನಿವ್ವಳ ಲಾಭದ ಬೆಳವಣಿಗೆಗೆ ಮುಖ್ಯ ಕಾರಣ ಎಂದು ಕಂಪೆನಿಯು ಸೋಮವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
►ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್:
ಬಿಪಿಸಿಎಲ್ ನಾಲ್ಕನೇ ತ್ರೈಮಾಸಿಕದಲ್ಲಿ ರೂ 3,191 ಕೋಟಿ ಲಾಭ ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ (ರೂ 3,214 ಕೋಟಿ) ಶೇ. 0.7 ರಷ್ಟು ಅಲ್ಪ ಕುಸಿತ ಕಂಡಿದೆ. ಆದರೆ ಇಡೀ ಹಣಕಾಸು ವರ್ಷದ ನಿವ್ವಳ ಲಾಭದಲ್ಲಿ ಶೇ. 75.54 ರಷ್ಟು ಭಾರಿ ಜಿಗಿತ ಕಂಡುಬಂದಿದ್ದು, ರೂ 23,303 ಕೋಟಿಗೆ ತಲುಪಿದೆ. ಕಳೆದ 2024-25ರ ಹಣಕಾಸು ವರ್ಷದಲ್ಲಿ ಇದು ರೂ 13,275 ಕೋಟಿಯಾಗಿತ್ತು.
►ಇಂಧನ ದರ ಏರಿಕೆ ಮತ್ತು ಸದ್ಯದ ನಷ್ಟದ ಲೆಕ್ಕಾಚಾರ
ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾಗಿ ಮೊದಲ ಎರಡು ತಿಂಗಳವರೆಗೆ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿರಲಿಲ್ಲ. ಆದರೆ ಕಂಪೆನಿಗಳ ಮಾಸಿಕ ಆದಾಯದ ನಷ್ಟವು ಸುಮಾರು ರೂ 30,000 ಕೋಟಿಗೆ ತಲುಪಿದಾಗ, ಕಳೆದ ವಾರ ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್ ಗೆ ತಲಾ ರೂ 3 ರಷ್ಟು ಹೆಚ್ಚಿಸಲಾಯಿತು. ತದನಂತರ ಮಂಗಳವಾರ ಮತ್ತೆ ಲೀಟರ್ ಗೆ ಸುಮಾರು 1 ರೂಪಾಯಿಯಷ್ಟು ದರ ಏರಿಕೆ ಮಾಡಲಾಗಿದೆ.
ಯುದ್ಧ ಹೀಗೆಯೇ ಮುಂದುವದು ಇಂಧನ ಬೆಲೆಗಳು ಗರಿಷ್ಠ ಮಟ್ಟದಲ್ಲೇ ಉಳಿದರೆ, 2026-27ರ ಪ್ರಸಕ್ತ ಹಣಕಾಸು ವರ್ಷದಲ್ಲಿ ಕಂಪೆನಿಗಳು ಇಂತಹದೇ ಲಾಭದ ಪ್ರದರ್ಶನವನ್ನು ಪುನರಾವರ್ತಿಸಲು ಸಾಧ್ಯವಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಮತ್ತು ಕಂಪೆನಿಯ ಉನ್ನತ ಅಧಿಕಾರಿಗಳು ಹೇಳಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರ್ ಗೆ ತಲಾ ರೂ 4 ರಷ್ಟು ಹೆಚ್ಚಿಸಿದ ನಂತರವೂ, ವಾಹನ ಇಂಧನ ಮತ್ತು ಅಡುಗೆ ಅನಿಲ ಮಾರಾಟದ ಮೇಲೆ ತೈಲ ಕಂಪೆನಿಗಳು ಪ್ರಸ್ತುತ ದಿನಕ್ಕೆ ಒಟ್ಟು ರೂ 500 ಕೋಟಿಗೂ ಹೆಚ್ಚು ನಷ್ಟ ಅನುಭವಿಸುತ್ತಿವೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ Hindustan Times ವರದಿ ಮಾಡಿದೆ.
ಕಂಪೆನಿಯ ಅಧಿಕಾರಿಯೊಬ್ಬರ ಪ್ರಕಾರ, "ಸದ್ಯ ನಷ್ಟದ ಪ್ರಮಾಣ ಸ್ವಲ್ಪ ಕಡಿಮೆಯಾಗಲು ಎರಡು ಕಾರಣಗಳಿವೆ. ಮೊದಲನೆಯದಾಗಿ, ಮಾರ್ಚ್ ಮತ್ತು ಎಪ್ರಿಲ್ ಗೆ ಹೋಲಿಸಿದರೆ ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ತೈಲ ಬೆಲೆಗಳು ಸ್ವಲ್ಪ ಕಡಿಮೆಯಾಗಿವೆ. ಎರಡನೆಯದಾಗಿ, ಕಂಪೆನಿಗಳು ಇಂಧನ ದರವನ್ನು ಲೀಟರ್ ಗೆ ರೂ 4 ರಷ್ಟು ಹೆಚ್ಚಿಸಿ ತಮ್ಮ ನಷ್ಟದ ಹೊರೆಯನ್ನು ಕಡಿಮೆ ಮಾಡಿಕೊಂಡಿವೆ."
►ಭಾರತದ ಕಚ್ಚಾ ತೈಲ ಖರೀದಿ ಮತ್ತು ರೂಪಾಯಿ ಮೌಲ್ಯದ ಕುಸಿತ
2025-26ರಲ್ಲಿ ಭಾರತದ ಸರಾಸರಿ ಕಚ್ಚಾ ತೈಲ ಖರೀದಿ ಬೆಲೆ ಪ್ರತಿ ಬ್ಯಾರೆಲ್ಗೆ 70.99 ಡಾಲರ್ ಆಗಿತ್ತು. ಆದರೆ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ನಂತರ ಇದು ತೀವ್ರವಾಗಿ ಹೆಚ್ಚಾಗಿದೆ. ಸರ್ಕಾರದ ಮಾಸಿಕ ದತ್ತಾಂಶದ ಪ್ರಕಾರ, ಭಾರತದ ಸರಾಸರಿ ಖರೀದಿ ಬೆಲೆ 2026ರ ಜನವರಿಯಲ್ಲಿ ಪ್ರತಿ ಬ್ಯಾರೆಲ್ಗೆ 63.08 ಡಾಲರ್ ಇತ್ತು. ಇದು ಫೆಬ್ರವರಿಯಲ್ಲಿ 69.01 ಡಾಲರ್, ಮಾರ್ಚ್ನಲ್ಲಿ 113.49 ಡಾಲರ್ ಮತ್ತು ಎಪ್ರಿಲ್ ನಲ್ಲಿ 114.48 ಡಾಲರ್ ಗೆ ತಲುಪಿತು. ಆದರೆ ಮೇ 20ರ ವೇಳೆಗೆ ಇದು ಶೇಕಡಾ 6 ರಷ್ಟು ಇಳಿಕೆಯಾಗಿ 107.75 ಡಾಲರ್ ಗೆ ತಲುಪಿದೆ.
"ಕಚ್ಚಾ ತೈಲ ಬೆಲೆಗಳು ಗರಿಷ್ಠ ಮಟ್ಟದಿಂದ ಸ್ವಲ್ಪ ಕುಸಿದಿವೆಯಾದರೂ, ಜಾಗತಿಕ ಅನಿಶ್ಚಿತತೆಯ ನಡುವೆ ಭಾರತೀಯ ರೂಪಾಯಿ ತೀವ್ರ ಒತ್ತಡದಲ್ಲೇ ಮುಂದುವರಿದಿದೆ ಮತ್ತು ಅದರ ಮೌಲ್ಯ ಕುಸಿಯುತ್ತಲೇ ಇದೆ" ಎಂದು ಬಜಾಜ್ ಬ್ರೋಕಿಂಗ್ ಮಾರುಕಟ್ಟೆ ವಿಶ್ಲೇಷಣೆ ತಿಳಿಸಿದೆ. ಭಾರತವು ತಾನು ಸಂಸ್ಕರಿಸುವ ಕಚ್ಚಾ ತೈಲದ ಶೇಕಡಾ 88 ಕ್ಕಿಂತ ಹೆಚ್ಚಿನದನ್ನು ಆಮದು ಮಾಡಿಕೊಳ್ಳುತ್ತದೆ ಮತ್ತು ಅದಕ್ಕೆ ಡಾಲರ್ನಲ್ಲಿ ಪಾವತಿಸುತ್ತದೆ. ಇದು ರೂಪಾಯಿ-ಡಾಲರ್ ವಿನಿಮಯ ದರದ ಮೇಲೆಯೂ ಪರಿಣಾಮ ಬೀರುತ್ತದೆ. ಅಂತರರಾಷ್ಟ್ರೀಯ ಮಾನದಂಡದ ಬ್ರೆಂಟ್ ಕಚ್ಚಾ ತೈಲವು ಬುಧವಾರ ಪ್ರತಿ ಬ್ಯಾರೆಲ್ಗೆ 108.79 ಡಾಲರ್ ದರದಲ್ಲಿ ವಹಿವಾಟು ನಡೆಸುತ್ತಿತ್ತು. ಇದು ಮಂಗಳವಾರದ ದರ 111.28 ಡಾಲರ್ ಗೆ ಹೋಲಿಸಿದರೆ ಶೇಕಡಾ 2.24 ರಷ್ಟು ಕುಸಿತವನ್ನು ಕಂಡಿದೆ.
ಮತ್ತೊಂದೆಡೆ, ಬುಧವಾರ ರೂಪಾಯಿ ಮೌಲ್ಯವು 13 ಪೈಸೆ ಕುಸಿತ ಕಂಡು ಯುಎಸ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ ರೂ 96.83ಕ್ಕೆ ತಲುಪಿದೆ. ಫೆಬ್ರವರಿ 28ರಂದು ಇದ್ದ ಮೌಲ್ಯಕ್ಕೆ (ಸುಮಾರು ರೂ 91.1) ಹೋಲಿಸಿದರೆ ಇದು ಶೇಕಡಾ 6.28 ರಷ್ಟು ಕುಸಿತವಾಗಿದೆ. ಫೆಬ್ರವರಿ 28ರಂದು ಪ್ರತಿ ಡಾಲರ್ ಎದುರು ಸುಮಾರು ರೂ 91 ಆಸುಪಾಸಿನಲ್ಲಿದ್ದ ರೂಪಾಯಿ ಮೌಲ್ಯವು, ಮೇ 21ರ ವೇಳೆಗೆ ರೂ 96 ಆಗಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು. ಸೋಮವಾರದ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಅಮೆರಿಕನ್ ಡಾಲರ್ ಎದುರು ರೂ 95.23ಕ್ಕೆ ಕುಸಿದಿದೆ.
►11 ದಿನಗಳಲ್ಲಿ ಪೆಟ್ರೋಲ್ ದರ ನಾಲ್ಕನೇ ಬಾರಿ ಏರಿಕೆ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಮೊದಲ ಬಾರಿಗೆ 2026ರ ಮೇ 15ರಂದು ಹೆಚ್ಚಿಸಲಾಗಿತ್ತು. ಅಂದಿನಿಂದ ಕೇವಲ 11 ದಿನಗಳ ಅವಧಿಯಲ್ಲಿ ಒಟ್ಟು ನಾಲ್ಕು ಬಾರಿ ದರ ಏರಿಕೆ ಮಾಡಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಇಂಧನ ದರವನ್ನು ಆರಂಭದಲ್ಲಿ ಲೀಟರ್ ಗೆ ಸುಮಾರು ರೂ 3 ರಷ್ಟು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿತ್ತು. ತದನಂತರ 2026ರ ಮೇ 19ರಂದು ಪೆಟ್ರೋಲ್ ಬೆಲೆಯನ್ನು 87 ಪೈಸೆ ಮತ್ತು ಡೀಸೆಲ್ ಬೆಲೆಯನ್ನು 91 ಪೈಸೆಯಷ್ಟು ಹೆಚ್ಚಿಸಲಾಯಿತು. 2026ರ ಮೇ 23ರಂದು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರ್ ಗೆ 87 ರಿಂದ 91 ಪೈಸೆಯಷ್ಟು ಏರಿಕೆ ಮಾಡಲಾಯಿತು.
ಇಂದು (ಮೇ 25) ನಡೆದಿರುವ ಇತ್ತೀಚಿನ ದರ ಪರಿಷ್ಕರಣೆಯ ನಂತರ, ಮೇ 15ರಿಂದ ಇಂದಿನವರೆಗೆ ಆಗಿರುವ ಒಟ್ಟು ಇಂಧನ ದರ ಏರಿಕೆಯು ಲೀಟರ್ ಗೆ ಸುಮಾರು ರೂ 7.5ಕ್ಕೆ ತಲುಪಿದೆ.

